Advertisement

ಜಿಂದಾಲ್‌ ಕಾರ್ಖಾನೆ ತಾತ್ಕಾಲಿಕ ಸೀಲ್‌ಡೌನ್‌ ಮಾಡಿ

08:46 AM Jun 15, 2020 | Suhan S |

ಬಳ್ಳಾರಿ: ಸಾವಿರಾರು ಕಾರ್ಮಿಕರನ್ನು ಹೊಂದಿರುವ ಜಿಲ್ಲೆಯ ತೊರಣಗಲ್ಲಿನ ಜಿಂದಾಲ್‌ ಕೈಗಾರಿಕೆಯಲ್ಲಿ ನೌಕರರು ಮತ್ತವರ ಸಂಬಂಧಿಕರಲ್ಲಿ ನೂರಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಕೈಗಾರಿಕೆಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಬೇಕು ಎಂದು ಪ್ರಜಾಸತ್ತಾತ್ಮಕ ಪಕ್ಷಗಳ ಹಾಗೂ ಸಾಮೂಹಿಕ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತವನ್ನು ಒತ್ತಾಯಿಸಲು ನಿರ್ಧರಿಸಿದೆ.

Advertisement

ನಗರದ ರಾಘವಕಲಾ ಮಂದಿರದಲ್ಲಿ ಸಭೆ ಸೇರಿದ್ದ ಒಕ್ಕೂಟದ ಮುಖಂಡರು ಈ ಕುರಿತು ನಿರ್ಣಯ ಕೈಗೊಂಡಿದ್ದು, ಜಿಂದಾಲ್‌ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರು ಕರ್ತವ್ಯ ನಿರ್ವಹಿಸಿ ಹೊರಗಡೆ ಬರುವುದರಿಂದ ಕೋವಿಡ್ ಸೋಂಕು ನೆರೆಯ ಹಳ್ಳಿ ಮತ್ತು ಪಟ್ಟಣ, ನಗರ ಪ್ರದೇಶಗಳಿಗೂ ಆವರಿಸುತ್ತಿದೆ. ಇದರಿಂದಾಗಿ ಜನರು ಆತಂಕಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲದಿದ್ದರೆ ಸದ್ಯದ ಮಟ್ಟಿಗೆ ಅವಶ್ಯವಿರುವಷ್ಟು ಕಾರ್ಮಿಕರು, ನೌಕರರನ್ನು ಕಾರ್ಖಾನೆ ಆವರಣದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾರ್ಖಾನೆ ಆವರಣದಿಂದ ಯಾರು ಬರದಂತೆ ಸೀಲ್‌ಡೌನ್‌ ಮಾಡಬೇಕು. ಈ ಮೂಲಕ ಕಾರ್ಖಾನೆ ಹೊರವಲಯದಲ್ಲಿ ಜೀವಿಸುವ ಸಾವಿರಾರು ಜನರ ಜೀವ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.

ಕಾರ್ಖಾನೆಯ ಎಲ್ಲ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಬೇಕು. ಸೋಂಕು ಕಾಣಿಸಿಕೊಂಡಿರುವ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ರೋಗ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಥಗಿತಗೊಂಡಿರುವ ವಿಭಾಗದ ಖಾಯಂ, ಗುತ್ತಿಗೆ ನೌಕರರಿಗೆ ವೇತನ ನೀಡಬೇಕು. ಸೋಂಕಿತ, ಶಂಕಿತರಿಗೆ ನೀಡುವ ಚಿಕಿತ್ಸಾ ವೆಚ್ಚವನ್ನು ಕಾರ್ಖಾನೆ ಆಡಳಿತ ಮಂಡಳಿಯೇ ಭರಿಸಬೇಕು. ಇತರೆ ಘಟಕಗಳ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದು, ಈ ಕುರಿತು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಅಖೀಲ ಭಾರತ ವಕೀಲರ ಸಂಘದ ಸದಸ್ಯ ಕೆ. ಕೋಟೇಶ್ವರರಾವ್‌, ಎಡಪಕ್ಷಗಳ ಮುಖಂಡರಾದ ಜೆ.ಸತ್ಯಬಾಬು, ಶಿವಶಂಕರ್‌, ಚೆನ್ನಪ್ಪ, ಸಂಗನಕಲ್ಲು ಕಟ್ಟೆಬಸಪ್ಪ, ಕುಡಿತಿನಿ ಶ್ರೀನಿವಾಸ, ರಾಮು, ಬಂಡಾಯ ಸಾಹಿತ್ಯ ಸಂಘಟನೆಯ ವೆಂಕಟೇಶ್‌, ಬುಡಕಟ್ಟು ಹಕ್ಕುಗಳ ಹೋರಾಟ ಸಮಿತಿಯ ವಿಜಯಕುಮಾರ್‌, ಜಿಪಂ ಸದಸ್ಯ ಎ.ಮಾನಯ್ಯ, ಜೆಡಿಎಸ್‌ ಮುಖಂಡ ಮೀನಹಳ್ಳಿ ತಾಯಣ್ಣ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next