Advertisement
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತಡಿಗೆ ಬೇರೆಲ್ಲಾ ಬೀಚ್‌ಗಳಿಗೂ ಮೀರಿದ ಚೆಲುವಿದೆ. ಆ ಸೌಂದರ್ಯ ಗರಿಗೆದರುವುದು, ಒಂದು ಹಕ್ಕಿಯಿಂದ. ಅದರ ಹೆಸರು, ಸೀಬರ್ಡ್ (ಸೀಗುಲ್). ದೂರದ ರಷ್ಯಾದಿಂದ ಹಾರಿಬರುವ ಸೀಬರ್ಡ್‌ಗಳಿಗೆ, ಈ ಕಡಲತೀರ ಪಕ್ಷಿಕಾಶಿ ಇದ್ದಂತೆ. ನವೆಂಬರ್‌ನಿಂದ ಫೆಬ್ರವರಿವರೆಗೆ, ಇಲ್ಲಿನ ನಭದಲ್ಲಿ, ಕಾದ ಮರಳ ಮೇಲೆ, ತಂಪಾದ ಸಂಜೆಯಲ್ಲಿ, ಸೀಬರ್ಡ್‌ಗಳು ಚಿಲಿಪಿಲಿಯ ಸಂತೆ ನಡೆಸುತ್ತವೆ.
Related Articles
Advertisement
ಅವು ಪುರ್ರನೆ ಹಾರುವಾಗ, ನಭದ ರಂಗೋಲಿಯಾಗಿ, ದೇವರ ರುಜುವಾಗಿ, ಸಾಲು ಸಾಲು ಗೆರೆಗಳಂತೆ ಕಂಡು, ವಿಸ್ಮಯ ರೂಪುಗೊಳ್ಳುತ್ತಿತ್ತು. ಸಮುದ್ರದ ಅಲೆಗಳೊಟ್ಟಿಗೆ ಅವು ಹಾರುವಾಗ ಬೆಳ್ಳಿ ತೆರೆಗಳು ಎದ್ದಂತೆ ಕಾಣಿಸುತ್ತಿತ್ತು. ಪಕ್ಷಿಪ್ರಿಯರಿಗೆ, ಪ್ರವಾಸಿಗರಿಗೆ ಆಗ ಕಣ್ಣು- ಕ್ಯಾಮೆರಾಗಳಿಗೆ ಹಬ್ಬವೇ ಆಗಿರುತ್ತಿತ್ತು. ಈ ಬಾರಿ ಇವೆಲ್ಲವೂ ಬರೀ ನೆನಪು. “ಯಾಕೋ ಈ ವರ್ಷ ಸೀಬರ್ಡ್‌ಗಳಿಲ್ಲದೆ, ಕಾರವಾರ ಮತ್ತು ಮಾಜಾಳಿ ಕಡಲ ತೀರಗಳು ಬಣಗುಟ್ಟುತ್ತಿವೆ’ ಎಂಬ ಬೇಸರ, ಪಕ್ಷಿ ವೀಕ್ಷಕ ಹಾಗೂ ಫೋಟೊಗ್ರಾಫರ್ ಹರೀಶ್ ಅವರದು.
ಸೀಬರ್ಡ್‌ಗಳೇಕೆ ಬರಲಿಲ್ಲ?: ಕಡಲ ಹಕ್ಕಿಗಳಿಗೆ ಇಂದು ಆತಂಕ ಹುಟ್ಟಿಸಿರುವುದು, ಹವಾಮಾನ ವೈಪರಿತ್ಯ. ಆ ಬಿಸಿ ಸೀಬರ್ಡ್‌ಗೂ ತಟ್ಟಿದ್ದರೆ, ಅದರಲ್ಲಿ ಆಶ್ಚರ್ಯವಿಲ್ಲ. ಜತೆಗೆ, ಮತ್ಸ್ಯಕ್ಷಾಮದ ಕಾರಣದಿಂದಾಗಿ, ಸೀಬರ್ಡ್ ಪಕ್ಷಿಗಳ ಗುಂಪು ಕಡಲಿಗೆ ಬರಲಿಲ್ಲ ಎಂಬುದು ಪಕ್ಷಿತಜ್ಞರ ಅಭಿಪ್ರಾಯ. “2019ರಲ್ಲಿ ವಿಶ್ವದ ಎಲ್ಲೆಡೆ ಹವಾಮಾನ ವೈಪರಿತ್ಯ ಮಿತಿಮೀರಿದೆ. ಸಮುದ್ರಕ್ಕೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ಸೇರುತ್ತಿದೆ. ಸಮುದ್ರ ಜೀವಿಗಳಿಗೆ, ಆ ಜೀವಿಗಳನ್ನು ಅವಲಂಬಿಸಿರುವ ಪಕ್ಷಿಗಳಿಗೆ ಇದು ದೊಡ್ಡ ಆಘಾತಕಾರಿ ಸಂಗತಿ’ ಎನ್ನುತ್ತಾರೆ, ಕಡಲಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶಿವಕುಮರ್ ಹರಗಿ.
“ಹಕ್ಕಿಗಳಲ್ಲಿನ ಪ್ರಯೋಗಶೀಲ ಮನಸ್ಸು ಹಾಗೂ ಹೊಸ ಹುಡುಕಾಟದ ಸ್ವಭಾವದಿಂದಲೂ ಅವು ಕಾರವಾರದಿಂದ ದೂರವಾಗಿವೆ. ಆಫ್ಘಾನಿಸ್ಥಾನದ ಗಿರಿಕಂದರಗಳು ಸಹ ಸಂತಾನೋತ್ಪತ್ತಿಗೆ ಸುರಕ್ಷಿತ ಕಾಣ ಎಂದೆನಿಸಿ, ಹಾರುವ ದಿಕ್ಕು ಬದಲಿಸಿರಬಹುದು’ ಎಂದು ಪಕ್ಷಿತಜ್ಞರು ಅಭಿಪ್ರಾಯಪಡುತ್ತಾರೆ. ಎಲ್ಲೋ ಹುಟ್ಟಿದ ಜೀವ. ಇನ್ನೆಲ್ಲೋ ಹಾರುತ್ತಾ, ಇಲ್ಲಿಗೆ ಬಂದು, ಆತ್ಮೀಯ ನೆನಪುಗಳ ಗೂಡು ಕಟ್ಟಿ ಹೋಗುತ್ತದೆ. ಹಾಗಾಗಿ, ಸೀಬರ್ಡ್ ಕಾಣದೆ, ಪಕ್ಷಿಪ್ರಿಯರ ಮನಸ್ಸು ಭಾರವಾಗಿದೆ.
ಟ್ಯಾಗೋರ್ ಕಡಲಿಗೆ ಏಕೆ ಅವು ಹಂಬಲಿಸುತ್ತಿದ್ದವು?: ಸೀಬರ್ಡ್‌ಗಳಿಗೆ ಏಕೆ ಕಾರವಾರದ ಕಡಲ ತೀರವೇ ಇಷ್ಟವಾಗುತ್ತಿತ್ತು ಎಂಬುದಕ್ಕೆ ಪಕ್ಷಿವೀಕ್ಷಕ, ಕೈಗಾದ ಮೋಹನದಾಸ್ ಅವರು ಕೆಲವು ಕಾರಣಗಳನ್ನು ಮುಂದಿಡುತ್ತಾರೆ.
– ಸೀಬರ್ಡ್ ಸೇರಿದಂತೆ ಸಾಗರದ ಕೆಲವು ಹಕ್ಕಿಗಳು ಸಾವಿರಾರು ಮೈಲು ಪಯಣಿಸುತ್ತವೆ.– ಸಂತಾನೋತ್ಪತ್ತಿಗೆ ಸುರಕ್ಷಿತ ಸ್ಥಳ ಸೂಕ್ತ ಪರಿಸರ, ಹವಾಮಾನಕ್ಕಾಗಿ ಹುಡುಕಾಡುತ್ತವೆ.
– ಸೀಬರ್ಡ್‌ಗೆ ಸಮುದ್ರದ ನಡುಗಡ್ಡೆ ಹಾಗೂ ಪಶ್ಚಿಮಘಟ್ಟದ ದಟ್ಟಕಾಡು ಅಂತ ಸುರಕ್ಷಿತ ಸ್ಥಳ.
– ನದಿ- ಸಮುದ್ರಗಳಲ್ಲಿ ಸಿಗುವ ಆಹಾರವನ್ನು ಅರಸಿ ಇಲ್ಲಿಗೆ ಬರುತ್ತವೆ. ನೌಕಾನೆಲೆಗೆ “ಸೀಬರ್ಡ್’ ಹೆಸರು: ಕಾರವಾರ ಬಳಿಯ ಐಎನ್‌ಎಸ್ ಕದಂಬ ನೌಕಾನೆಲೆ ನಿರ್ಮಾಣ ಹಂತದಲ್ಲಿ ಅದನ್ನು “ಸೀಬರ್ಡ್ ಯೋಜನೆ’ ಎಂದೇ ಕರೆಯಲಾಗುತ್ತಿತ್ತು. ಸೀಬರ್ಡ್ ಹೆಸರು ಇಡಲು ಸಹ ಇಲ್ಲಿನ ಕಡಲಿಗೆ ಪ್ರತಿವರ್ಷ ಬರುತ್ತಿದ್ದ ಸೀಬರ್ಡ್‌ಗಳೇ ಪ್ರೇರಣೆಯಾಗಿದ್ದವು. ಕದಂಬ ನೌಕಾನೆಲೆ ನಿರ್ಮಾಣದಲ್ಲಿ ಭಾರತಕ್ಕೆ ರಷ್ಯಾವೂ ಸಹಕಾರ ನೀಡಿತ್ತು. ಅಲ್ಲದೆ, ಕೆಳವರ್ಷಗಳ ಹಿಂದೆ ನಮ್ಮ ನೌಕಾಪಡೆಯನ್ನು ಸೇರಿದ, ದೇಶದ ಅತಿದೊಡ್ಡ ವಿಮಾನವಾಹಕ ಯುದ್ಧನೌಕೆ “ವಿಕ್ರಮಾದಿತ್ಯ’ನ ಹುಟ್ಟೂರು ಕೂಡ ರಷ್ಯಾವೇ ಆಗಿದೆ. ನಿಸರ್ಗದತ್ತವಾಗಿ ಅಂಥದ್ದೇ ಒಂದು ಬಂಧ, ಸೀಬರ್ಡ್ ಮೂಲಕ ನಮಗೆ ದಕ್ಕಿದೆ. ಸೀಬರ್ಡ್ ಹಾರಿಬರುವ ಹಾದಿಯ ಹವಾಮಾನ ವೈಪರಿತ್ಯ ಹಾಗೂ ಸಾಗರದ ಮತ್ಸ್ಯಕ್ಷಾಮಗಳು, ಆ ಹಕ್ಕಿಗಳಿಗೆ ಆತಂಕ ಹುಟ್ಟಿಸಿರಬಹುದು. ಹಾಗಾಗಿ, ಅವು ಇಲ್ಲಿನ ಕಡಲ ಸುತ್ತಮುತ್ತ ಕಾಣಿಸುತ್ತಿಲ್ಲ.
-ಡಾ. ಶಿವಕುಮಾರ್ ಹರಗಿ, ಕಡಲಜೀವಶಾಸ್ತ್ರ ಉಪನ್ಯಾಸಕ * ನಾಗರಾಜ ಹರಪನಹಳ್ಳಿ