Advertisement

ಸೀ ವಾಕ್‌ ಆಕರ್ಷಣೆ; ಹೆಚ್ಚಿದ ಜನದಟ್ಟಣೆ

09:59 PM Jul 07, 2019 | Sriram |

ಮಲ್ಪೆ: ಮುಂಗಾರು ಕ್ಷೀಣಗೊಂಡಿದ್ದರೂ, ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗಿಳಿಯುವಂತಿಲ್ಲ. ಆದ್ದರಿಂದ ಕಡಲ ಸೌಂದರ್ಯ ವೀಕ್ಷಿಸಲು ಜನರು ಸೀ ವಾಕ್‌ನತ್ತ ಲಗ್ಗೆ ಹಾಕುತ್ತಿದ್ದಾರೆ. ವಾರಾಂತ್ಯದಲ್ಲಂತೂ ಇಲ್ಲಿ ಜನದಟ್ಟಣೆ ಉಂಟಾಗುತ್ತಿದೆ.

Advertisement

ಮಲ್ಪೆ ಬೀಚ್‌ನಲ್ಲಿ 20 ಅಡಿಗಳಷ್ಟು ದೂರದಲ್ಲಿ ನೆಟ್‌ ಅಳವಡಿಸಲಾಗಿದ್ದು, ದೂರದಲ್ಲೇ ನಿಂತು ಸಮುದ್ರ ನೋಡಬೇಕಾಗಿದೆ. ಇದರಿಂದ ಸೀ ವಾಕ್‌ಗೆ ಜನ ಹೋಗುತ್ತಿದ್ದಾರೆ. ಸ್ಥಳೀಯರೂ ಸೀ ವಾಕ್‌ ಸೌಂದರ್ಯಕ್ಕೆ ಮನಸೋತಿದ್ದಾರೆ.

ದೈತ್ಯ ಅಲೆಗಳ ಆಕರ್ಷಣೆ
ಸೀ ವಾಕ್‌ ವೇನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಸಮುದ್ರದ ವಿಹಂಗಮ ನೋಟದ ದರ್ಶನವಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ದೈತ್ಯ ಅಲೆಗಳು ಬಂಡೆಕಲ್ಲಿಗೆ ಅಪ್ಪಳಿಸುವ ರಮಣೀಯ ದೃಶ್ಯವನ್ನು ಆಸ್ವಾದಿಸುವುದೇ ಒಂದು ಸೊಬಗು.

ಐಲ್ಯಾಂಡ್‌ ನಿಷೇಧದ ಬಳಿಕ ಮತ್ತಷ್ಟು ಹೆಚ್ಚು
ಸೀ ವಾಕ್‌ ಆರಂಭಗೊಂಡ ದಿನದಿಂದಲೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ರಜಾ ದಿನಗಳಲ್ಲಿ ಸಂಜೆ ವೇಳೆ ನೂಕು ನುಗ್ಗಲು ಇರುತ್ತದೆ. ಸೈಂಟ್‌ಮೇರೀಸ್‌ ಬೋಟಿನ ಯಾನ ನಿಷೇಧವಾದ ಬಳಿಕ ಸೀವಾಕ್‌ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಂಡಿದೆ. ಕಳೆದ ಮಳೆಗಾಲಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಿದ್ದಾರೆ. ಇದೀಗ ನಿತ್ಯ 600ರಿಂದ 700 ಮಂದಿ ಬಂದರೆ ವಾರಾಂತ್ಯ 2,000 ಗಡಿ ದಾಟುತ್ತದೆ.

ಮೀನಿಗೆ ಗಾಳ ಹಾಕುವ ಮೋಜು
ಸೀ ವಾಕ್‌ನ ಎರಡೂ ಬದಿಯಲ್ಲಿ ಬಂಡೆಕಲ್ಲಿನಲ್ಲಿ ಕುಳಿತು ಮೀನಿಗೆ ಗಾಳ ಹಾಕುವ ದೃಶ್ಯ ಸರ್ವೇ ಸಾಮಾನ್ಯ ಇಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಗಾಳ ಹಾಕುವವರ ದಂಡೇ ಇರುತ್ತದೆ. ಸೀ ವಾಕ್‌ ನಿರ್ಮಾಣ ಆಗುವ ಮೊದಲು ಕೂಡ ಇಲ್ಲಿನ ಬ್ರೇಕ್‌ ವಾಟರ್‌ನಲ್ಲಿ ಗಾಳ ಹಾಕುತ್ತಿದ್ದರು.

Advertisement

ಭೇಟಿ ನೀಡುವವರ
ಸಂಖ್ಯೆ ಹೆಚ್ಚಳ
ಮಳೆಯ ಬಿಡುವಿನಿಂದಾಗಿ ಜನ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಮುದ್ರದ ದೊಡ್ಡ ದೊಡ್ಡ ಅಲೆಗಳು ಬಂಡೆಗೆ ಬಡಿಯುವ ದೃಶ್ಯ ರೋಮಾಂಚನವಾಗಿದೆ. ಜತೆಗೆ ಇಲ್ಲಿ ಗಾಳ ಹಾಕಿ ಮೀನು ಹಿಡಿಯುವುದನ್ನೂ ನೋಡಬಹುದು.
– ಚೇತನ್‌ ಬಾಪುತೋಟ, ಸ್ಥಳೀಯರು

ಹೆಚ್ಚು ಖುಷಿ
ಸಮುದ್ರವನ್ನು ನೋಡಲು ಕುಟುಂಬದೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದೆವು, ಆದರೆ ಈಗ ಅಲ್ಲಿ ನೀರಿಗೆ ಇಳಿಯಲು ಬಿಡುತ್ತಿಲ್ಲ. ದೂರದಲ್ಲಿ ನಿಂತು ನೋಡಬೇಕು. ಆದರೆ ಸೀ ವಾಕ್‌ಗೆ ಬಂದರೆ ಸಮುದ್ರದೊಳಗೆ ಬಂದ ಹೊಸ ಅನುಭವವಾಗುತ್ತಿದೆ. ಮಕ್ಕಳಿಗೂ ಖುಷಿಯಾಗುತ್ತದೆ.
– ಶ್ರೇಯಾ ಚೇತನ್‌, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next