Advertisement

ಸೀ ಪ್ಲೇನ್‌ ಪ್ರಯಾಣ; ಪ್ರಚಾರಕ್ಕೆ ವಿರಾಮ

07:35 AM Dec 13, 2017 | Harsha Rao |

ಅಹ್ಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅತ್ಯಂತ ವಿಶಿಷ್ಟ ರೀತಿಯಲ್ಲಿ ತೆರೆ ಎಳೆದಿದ್ದಾರೆ. ರೋಡ್‌ಶೋ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮೋದಿ ಅವರು ಸಮುದ್ರ ವಿಮಾನ(ಸೀ ಪ್ಲೇನ್‌)ದಲ್ಲಿ ಸಂಚರಿಸುವ ಮೂಲಕ ಗುಜರಾತ್‌ ಅಭಿವೃದ್ಧಿಯತ್ತ ಮತ್ತೂಮ್ಮೆ ಎಲ್ಲರ ಚಿತ್ತ ಹರಿಯುವಂತೆ ಮಾಡಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಅಹ್ಮದಾಬಾದ್‌ನ ಸಬರಮತಿ ನದಿಯಿಂದ ಉತ್ತರ ಗುಜರಾತ್‌ನ ಧರೋಯಿ ಡ್ಯಾಮ್‌ವರೆಗೆ ಸಮುದ್ರ ವಿಮಾನದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸಿದರು. ಸರ್ದಾರ್‌ ಸೇತುವೆಯಲ್ಲಿ ಒಂದೇ ಎಂಜಿನ್‌ ಇರುವ ಈ ವಿಮಾನ ಏರಿದರು. ಇದಕ್ಕೆಂದೇ ವಿಶೇಷವಾದ ತೇಲುವ ವೇದಿಕೆಯನ್ನು ನಿರ್ಮಿಸಲಾಗಿತ್ತು. ನದಿಯಲ್ಲಿ ಸಮುದ್ರ ವಿಮಾನವೊಂದು ಲ್ಯಾಂಡ್‌ ಆಗಿದ್ದು ದೇಶದಲ್ಲಿ ಇದೇ ಮೊದಲು ಎಂದು ಗುಜರಾತ್‌ ಸಿಎಂ ವಿಜಯ ರೂಪಾಣಿ ಬಣ್ಣಿಸಿದ್ದಾರೆ. ಪ್ರಧಾನಿ ವಿಮಾನ ಏರುತ್ತಲೇ, ಅಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರು “ಮೋದಿ, ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು.

ಧರೋಯಿ ಡ್ಯಾಮ್‌ಗೆ ಬಂದಿಳಿದ ಬಳಿಕ ಪ್ರಧಾನಿ ನೇರವಾಗಿ ರಸ್ತೆ ಮೂಲಕ ಅಂಬಾಜಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮತ್ತೆ ಧರೋಯಿಗೆ ಬಂದು ಅದೇ ವಿಮಾನ ಹತ್ತಿ, ಅಹ್ಮದಾಬಾದ್‌ಗೆ ವಾಪಸಾದರು. ಸೋಮವಾರವಷ್ಟೇ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, “ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಮುದ್ರ ವಿಮಾನವೊಂದು ನದಿಯಲ್ಲಿ ಇಳಿಯುವುದನ್ನು ನೋಡಲಿದ್ದೀರಿ’ ಎಂದಿದ್ದರು.

ಮೋದಿ ಪ್ರಯಾಣ ಕುರಿತು ಪ್ರತಿಕ್ರಿಯಿಸಿದ ಸಮುದ್ರ ವಿಮಾನದ ಕೆನೆಡಿಯನ್‌ ಪೈಲಟ್‌, “ಇಂದು ನಾನು ಒಬ್ಬ ಉತ್ತಮ ಪ್ರಯಾಣಿಕನನ್ನು ಕರೆದೊಯ್ದೆ. ನನಗೆ ಖುಷಿಯ ಅನುಭವವಾಯಿತು’ ಎಂದಿದ್ದಾರೆ.

ಫ‌ಲಿತಾಂಶ ಜಬರ್‌ದಸ್ತ್: ಇದೇ ವೇಳೆ, ಪ್ರಚಾರದ ಕೊನೆಯ ದಿನವಾದ ಮಂಗಳವಾರ ಅತ್ತ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ರೋಡ್‌ಶೋಗೂ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ, ಅವರು ಮಧ್ಯಾಹ್ನ ಅಹ್ಮದಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. “ಸಮಾಜದ ಎಲ್ಲ ವರ್ಗದ ಜನರೂ ಆಡಳಿತಾರೂಢ ಪಕ್ಷದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಲ್ಲಿ ನಮ್ಮ ಪಕ್ಷ ಗೆಲ್ಲುವುದು ಖಚಿತ. ಸ್ವಲ್ಪ ಕಾಯಿರಿ, ಜಬರ್‌ದಸ್ತ್ ಫ‌ಲಿತಾಂಶ ಹೊರಬೀಳಲಿದೆ,’ ಎಂದು ರಾಹುಲ್‌ ಹೇಳಿದರು. ಇದೇ ವೇಳೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧ ಪ್ರಧಾನಿ ಮೋದಿ ಆಡಿದ ಮಾತುಗಳ ಬಗ್ಗೆಯೂ ಅಸಮಾಧಾನ ಹೊರಹಾಕಿದರು. 

Advertisement

ನಾಳೆ 2ನೇ ಹಂತ: ಇದೇ ಗುರುವಾರ(ಡಿ.14) 2ನೇ ಹಂತದ ಮತದಾನ ನಡೆಯಲಿದ್ದು, ಮಂಗಳ ವಾರ ಸಂಜೆ ಪ್ರಚಾರ ಅಂತ್ಯಗೊಂಡಿದೆ. 93 ಅಸೆಂಬ್ಲಿ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದ್ದು, 18ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಬೆಂಗಳೂರಿನಲ್ಲಿ ಕಲಿತವಳಿಂದ ಬಿಜೆಪಿಗೆ ಸ್ಪರ್ಧೆ
ಬಿಜೆಪಿ ಭದ್ರಕೋಟೆಯಾದ ಮಣಿನಗರ ಸೀಟಿನಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವುದು ಶ್ವೇತಾ ಬ್ರಹ್ಮಭಟ್‌. 34ರ ಹರೆಯದ ಶ್ವೇತಾ ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದಿರುವ ಯುವ ಮುಖ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌(ಐಐಎಂ)ನಲ್ಲಿ ರಾಜಕಾರಣಿಯಾಗಲು ತರಬೇತಿಯನ್ನೂ ಪಡೆದವರು. 2005ರಲ್ಲಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ವಿವಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಕುರಿತು ಸ್ನಾತ ಕೋತ್ತರ ಪದವಿ ಪಡೆದಿದ್ದಾರೆ. ಇವರು ಈಗ ಬಿಜೆಪಿಯ ಹಾಲಿ ಶಾಸಕ ಸುರೇಶ್‌ ಪಟೇಲ್‌ ಜತೆ ಸೆಣಸಲಿದ್ದಾರೆ. 2002, 2007, 2012ರಲ್ಲಿ ಪ್ರಧಾನಿ ಮೋದಿ ಇದೇ ಕ್ಷೇತ್ರ ಪ್ರತಿನಿಧಿಸಿದ್ದು, ಕಳೆದ ಬಾರಿ ಕೈ ಅಭ್ಯರ್ಥಿಯನ್ನು 86 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಮೋದಿ ತಿನ್ನೋ ಅಣಬೆಗೆ 80 ಸಾವಿರ ರೂ.!
ಮೋದಿ ಅವರು ಅಣಬೆ ತಿನ್ನಲು ದಿನಕ್ಕೆ 4 ಲಕ್ಷ ರೂ. ವೆಚ್ಚ ಮಾಡುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಅಲ್ಪೇಶ್‌ ಠಾಕೂರ್‌ ಆರೋಪಿಸಿದ್ದಾರೆ. ರ್ಯಾಲಿಯಲ್ಲಿ ಮಾತಾಡಿದ ಅವರು, “ಮೋದಿಜೀ ತೈವಾನ್‌ನಿಂದ ಆಮದು ಮಾಡಿಕೊಂಡ ಅಣಬೆ ಗಳನ್ನು ತಿನ್ನುತ್ತಾರೆ. ಅಲ್ಲಿನ 1 ಅಣಬೆಯ ಬೆಲೆ 80 ಸಾವಿರ ರೂ.ಗಳು. ಮೋದಿ ದಿನಕ್ಕೆ 5 ಅಣಬೆ ಸೇವಿಸುತ್ತಾರೆ. ಅವರು ಮೊದಲು ನನ್ನಂತೆಯೇ ಕಪ್ಪಗಿದ್ದರು. ಆದರೆ, ಆಮದು ಮಾಡಿದ ಅಣಬೆ ತಿಂದ ಮೇಲೆ ಬಿಳಿ ಬಣ್ಣಕ್ಕೆ ತಿರುಗಿದರು. ಅವರಿಗೆ ನಾವು ನೀವು ತಿನ್ನುವ ದಾಲ್‌-ಚಾವಲ್‌ ಇಷ್ಟ ಆಗುವುದಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next