Advertisement

ಮೀನುಗಾರಿಕೆ ನಿಗಮದಿಂದ ಮತ್ಸ್ಯದರ್ಶಿನಿ ಸೀ ಫುಡ್‌ ರೆಸ್ಟೋರೆಂಟ್‌

11:41 PM Mar 09, 2021 | Team Udayavani |

ಮಹಾನಗರ: ಮೀನು ಖಾದ್ಯಗಳನ್ನು ಹೆಚ್ಚು ಪ್ರಚುರಪಡಿಸುವ, ವೈವಿಧ್ಯಮಯ ಖಾದ್ಯಗಳು ವ್ಯಾಪಕವಾಗಿ ಲಭ್ಯವಾಗುವ ಮತ್ತು ಆ ಮೂಲಕ ಮೀನು ಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ 15 ಕೋ.ರೂ. ವೆಚ್ಚದಲ್ಲಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಒಟ್ಟು 12 ಮತ್ಸ್ಯದರ್ಶಿನಿ ಸೀಫುಡ್‌ ರೆಸ್ಟೋರೆಂಟ್‌ಗಳನ್ನು ನಿರ್ಮಿಸಲು ಕರ್ನಾಟಕ ಮೀನುಗಾರಿಕ ನಿಗಮ ನಿರ್ಧರಿಸಿದೆ.

Advertisement

ತಲಾ 1.25 ಕೋ.ರೂ. ವೆಚ್ಚದ 12 ಸ್ಥಿರ ಮತ್ಸ್ಯದರ್ಶಿನಿ ಸೀಫುಡ್‌ ರೆಸ್ಟೋರೆಂಟ್‌ಗಳು ನಿರ್ಮಾಣವಾಗಲಿವೆ. ಜತೆಗೆ ತಲಾ 25 ಲಕ್ಷ ರೂ. ವೆಚ್ಚದ 10 ಸಂಚಾರಿ ಮತ್ಸ್ಯದರ್ಶಿನಿ ಸೀಫುಡ್‌ ಘಟಕಗಳನ್ನು ಅಳವಡಿಸುವ ಬಗ್ಗೆ ನಿಗಮ ಪ್ರಸ್ತಾವನೆ ರೂಪಿಸಿದೆ. ಆಧುನಿಕ ಸ್ಪರ್ಶದೊಂದಿಗೆ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಾಣ, ಮಾರಾಟ ಜಾಲವನ್ನು ವಿಸ್ತರಿಸಲು ನೆರವು ನೀಡುವಂತೆ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಡಿಸಿರುವ ಬೇಡಿಕೆಯ ಅನ್ವಯ ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ 30 ಕೋ.ರೂ. ಅನುದಾನ ಘೋಷಿಸಿದ್ದು, ಇದನ್ನು ಬಳಸಿಕೊಂಡು ಹೈಜಿನಿಕ್‌ ಮೀನು ಮಾರುಕಟ್ಟೆಗಳು, ಸೀ ಫುಡ್‌ ರೆಸ್ಟೋ ರೆಂಟ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

15 ಹೈಜಿನಿಕ್‌ ಮೀನು ಮಾರುಕಟ್ಟೆಗಳು
ಮಾರುಕಟ್ಟೆ ವ್ಯವಸ್ಥೆಗಳು ಅತ್ಯಾಧುನಿಕ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮೀನು ಮಾರಾಟ ವ್ಯವಸ್ಥೆಯಲ್ಲೂ ಇದನ್ನು ಅಳವಡಿಸಿಕೊಳ್ಳುವ ಪರಿಕಲ್ಪನೆ ಯೊಂದಿಗೆ ಮೀನುಗಾರಿಕೆ ಅಭಿವೃದ್ಧಿ ನಿಗಮ ಸುಸಜ್ಜಿತ, ಸ್ವಚ್ಚ ಮತ್ತು ಮಾರಾಟಗಾರರು ಮತ್ತು ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಒಳಗೊಂಡ 15 ಮೀನು ಮಾರುಕಟ್ಟೆಗಳನ್ನು ಕರಾವಳಿ ಹಾಗೂ ರಾಜ್ಯದ ಕೆಲವು ಕಡೆ ನಿರ್ಮಿಸುವ ಯೋಜನೆ ರೂಪಿಸಿದೆ. ಈ ಯೋಜನೆ ತಲಾ ಒಂದು ಕೋ.ರೂ. ವೆಚ್ಚದ 5 ಹಾಗೂ ತಲಾ 50 ಲಕ್ಷ ರೂ. ವೆಚ್ಚದ 10 ಮೀನು ಮಾರುಕಟ್ಟೆಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರದೇಶಗಳ ಗುರುತಿಸುವಿಕೆ ಕಾರ್ಯ ಸದ್ಯ ದಲ್ಲೇ ನಡೆಯಲಿದ್ದು, ಅಲ್ಲಿ ಲಭ್ಯತೆಯನ್ನು ಹೊಂದಿಕೊಂಡು ಮಾರುಕಟ್ಟೆಗಳು ನಿರ್ಮಾಣವಾಗಲಿದೆ. ಉದ್ದೇಶಿತ ಮಾರು ಕಟ್ಟೆ ಗಳು ಸುಮಾರು 75 ಮಂದಿಗೆ ಮೀನು ಮಾರಾಟಕ್ಕೆ ಅವಕಾಶವನ್ನು ಹೊಂದಿರುತ್ತವೆ. ಮೀನು ಪ್ರದರ್ಶನಕ್ಕೆ ಫ್ಲ್ಯಾಟ್‌ಫಾರಂ, ಮಾರಾಟಗಾರರಿಗೆ ಕುಳಿತುಕೊಳ್ಳಲು ವ್ಯವಸ್ಥಿತ ಆಸನ, ಮೀನುಗಳನ್ನು ಸ್ವತ್ಛಗೊಳಿ ಸಲು ಪ್ರತಿಯೋರ್ವರು ಕುಳಿತುಕೊಳ್ಳುವ ಸ್ಥಳದಲ್ಲಿ ನೀರಿನ ವ್ಯವಸ್ಥೆ, ಮೇಲಿನ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ಮುಂತಾದ ವ್ಯವಸ್ಥೆಗಳು ಇರಲಿದೆ. ಈಗಾಗಲೇ ನಿಗಮ ಅವಿಭಜಿತ ದ.ಕ., ಉ. ಕನ್ನಡ ಜಿಲ್ಲೆಗಳಲ್ಲಿ ಸುಮಾರು 10ರಿಂದ 15 ಮೀನು ಮಾರಾಟಗಾರರಿಗೆ ಅವಕಾಶವಿರುವ ಕೆಲವು ಮೀನುಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ. ಇದೀಗ ಹೊಸದಾಗಿ ನಿರ್ಮಿಸಲು ದ್ದೇಶಿಸಿರುವ ಮಾರುಕಟ್ಟೆಗಳು ಇದಕ್ಕಿಂತ ಭಿನ್ನವಾಗಿದ್ದು, ಹೆಚ್ಚು ಸೌಲಭ್ಯ ಗಳನ್ನು ಹೊಂದಿರುತ್ತವೆ.

ಆಧುನಿಕ ಸಂಸ್ಕರಣ, ಮೌಲ್ಯವರ್ಧನ ಕೇಂದ್ರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಪಂಗೇಶಿಯಸ್‌ ತಿಲಾಪಿಯಾ ಮೀನುಗಳನ್ನು ಫಿಲೆಟ್ಸ್‌ ಮತ್ತು ಶೀತಲೀಕೃತ ಉತ್ಪನ್ನ‌ಗಳಾಗಿ ಸಂಸ್ಕರಣೆಗೊಳಿಸಲು ಆಧುನಿಕ ಸಂಸ್ಕರಣ, ಮೌಲ್ಯವರ್ಧನ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ 6 ಕೋ.ರೂ. ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.

ಯೋಜನೆ ಸಿದ್ಧ
ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್‌. ಅಂಗಾರ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಯವರು 30 ಕೋ.ರೂ. ಅನುದಾನವನ್ನು ಒದಗಿಸಿದ್ದಾರೆ. ನಿಗಮದಿಂದ ಈಗಾಗಲೇ ಕೆಲವು ಯೋಜನೆಗಳನ್ನು ರೂಪಿಸಲಾಗಿದ್ದು, ಅನುದಾನ ಬಂದ ಕೂಡಲೇ ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೇವೆ.
– ನಿತಿನ್‌ ಕುಮಾರ್‌, ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆಅಭಿವೃದ್ಧಿ ನಿಗಮ

Advertisement
Advertisement

Udayavani is now on Telegram. Click here to join our channel and stay updated with the latest news.

Next