ಕಾಪು : ಕಾಪು ತಾಲೂಕಿನ ಮೂಳೂರು ಮತ್ತು ತೊಟ್ಟಂ ಪರಿಸರದ ತೀವ್ರ ಕಡಲ್ಕೊರೆತದ ಪ್ರದೇಶಗಳಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ರವಿವಾರ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿತು.
ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕಡಲ್ಕೊರೆತ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಕರಾವಳಿ ಜನರ ಬದುಕನ್ನು ದುಸ್ತರಗೊಳಿಸುತ್ತಿರುವ ಎರಡೂ ವಿಚಾರಗಳಲ್ಲಿ ಸರಕಾರಗಳು ಪಕ್ಷ ರಾಜಕೀಯ ಮಾಡುತ್ತಿದ್ದು ಕಾಂಗ್ರೆಸ್ ಬೆಂಬಲಿತ ಪ್ರದೇಶಗಳಲ್ಲಿ ಸಮರ್ಪಕ ಕಾಮಗಾರಿ ನಡೆಸದೇ ರಾಜಕೀಯ ಭೇದವನ್ನು ವಹಿಸುತ್ತಿವೆ. ಇಂತಹ ನಡೆ ಖಂಡನೀಯವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ತೆರಳಿ ದೂರು ನೀಡಲಾಗುವುದು ಎಂದರು.
ಕಡಲ್ಕೊರೆತ ಪ್ರದೇಶಗಳಲ್ಲಿ ತುರ್ತು ತಡೆಗೋಡೆ ರಚಿಸಬೇಕಿದೆ. ಕಡಲ್ಕೊರೆತ ತಡೆಗೆ ಹಿಂದಿನ ಸರಕಾರಗಳು ನಡಸಿದ್ದ ಅಧ್ಯಯನ ಮತ್ತು ಸಿದ್ಧಪಡಿಸಿದ್ದ ಅಧ್ಯಯನ ವರದಿಯನ್ನು ಹಾಲಿ ಸರಕಾರ ನಿರ್ಲಕ್ಷಿಸುತ್ತಿದೆ. ತಮ್ಮದೇ ಯೋಚನೆ ಮತ್ತು ಕಾರ್ಯಕರ್ತರು ಹೇಳಿದ ಮಾದರಿಯ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಕಡಲಿಗೆ ಸುರಿಯುತ್ತಿದೆ. ಈ ಬಗ್ಗೆ ರಚನಾತ್ಮಕವಾಗಿ ಸರಕಾರ ಯೋಜನೆ ರೂಪಿಸಿಬೇಕಿದೆ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ವ ಪಕ್ಷದ ಸಭೆ ನಡೆಸಿ, ಸಮಾಲೋಚನೆ ನಡೆಸಬೇಕಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕಾಂಗ್ರೆಸ್ ಮೀನುಗಾರರ ವೇದಿಕೆ ಜಿಲ್ಲಾಧ್ಯಕ್ಷ ರಾಜೇಶ್ ಮೆಂಡನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಪುರಸಭಾ ಸದಸ್ಯರಾದ ಸತೀಶ್ಚಂದ್ರ ಮೂಳೂರು, ರಾಧಿಕಾ ಸುವರ್ಣ, ಕಾಪು ತಾ. ಪಂ. ಮಾಜಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಪ್ರಮುಖರಾದ ಅಬ್ದುಲ್ ಹಮೀದ್, ಕೆ.ಎಚ್. ಉಸ್ಮಾನ್, ಸುಲೋಚನಾ ಬಂಗೇರ, ಮಹಾಲಿಂಗ ಆಂಚನ್, ಚಂದ್ರಪ್ಪ ಕೋಟ್ಯಾನ್, ಮಾಜಿ ಪುರಸಭಾ ಸದಸ್ಯರು, ಕಾಂಗ್ರೆಸ್ ಪದಾಽಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.