ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಸಂಬಂಧಿಸಿ ಕೋಟೆಪುರದಿಂದ ಮೊಗವೀರಪಟ್ಣದ ವರೆಗೆ ಶಾಶ್ವತ ಕಾಮಗಾರಿ ನಡೆದಿದ್ದು, ಶಾಶ್ವತ ಕಾಮಗಾರಿ ನಡೆಯದ ಉಳ್ಳಾಲದ ಕಿಲೇರಿಯಾ ನಗರ, ಮುಕ್ಕಚ್ಚೇರಿ, ಸೀಗ್ರೌಂಡ್ ಮತ್ತು ಸೋಮೇಶ್ವರ ಉಚ್ಚಿಲದ ಸಮುದ್ರ ತೀರದಲ್ಲಿ ಅಲೆಗಳು ಅಪ್ಪಳಿಸುತ್ತಿರುವುದರಿಂದ ಜನರು ಭೀತಿಗೊಳಗಾಗಿದ್ದಾರೆ.
ಉಳ್ಳಾಲದ ಅಳಿವೆ ಬಾಗಿಲಿನಿಂದ ಮೊಗವೀರಪಟ್ಣದ ವರೆಗೆ ಶಾಶ್ವತ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಅಳಿವೆ ಬಾಗಿಲಿನಲ್ಲಿ ಬ್ರೇಕ್‌ವಾಟರ್ ಪುನರ್ ನಿರ್ಮಾಣ, ಕಡಲತಡಿಯಲ್ಲಿ ಮರಳಿನ ಬರ್ಮ್ಸ್ ರಚನೆಯ ಕಾಮಗಾರಿ ಪೂರ್ಣಗೊಂಡಿದೆ. ಸಮುದ್ರದ ಮಧ್ಯೆ ಬರ್ಮ್ಸ್ (ಮರಳು ದಂಡೆ) ರಚನೆ ಕಾಮಗಾರಿ ಪ್ರಗತಿಯಲ್ಲಿದೆ.
ಕಿಲೇರಿಯಾ ನಗರದಲ್ಲಿರುವ 10ಕ್ಕೂ ಅಧಿಕ ಮನೆಗಳು, ಮಸೀದಿಗಳಿಗೆ ಅಲೆಗಳು ಅಪ್ಪಳಿಸುಧಿತ್ತಿವೆ. ಮಳೆಗಾಲ ಆರಂಭಕ್ಕೂ ಮುನ್ನ ಅಲೆಗಳ ರಭಸ ಹೆಚ್ಚಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಉಚ್ಚಿಲದಲ್ಲಿಯೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ.
ಖಾದರ್ ಭೇಟಿ: ಕಳೆದ ಕೆಲವು ದಿನಗಳಿಂದ ಸಮುದ್ರದ ಅಬ್ಬರಧಿವಿರುವ ಈ ಪ್ರದೇಶಕ್ಕೆ ಭೇಟಿ ನೀಡಿರುವ ಸಚಿವ ಯು.ಟಿ. ಖಾದರ್ ತಾತ್ಕಾಲಿಕ ಪರಿಹಾರದ ಭರವಸೆ ನೀಡಿದ್ದು, ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಿಲೇರಿಯಾದ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಖಲೀಲ್ ಮಾತನಾಡಿ, ಪ್ರತೀ ವರ್ಷ ಶಾಶ್ವತ ಕಾಮಗಾರಿಯ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದೆ. ಸಚಿವರ ಭರವಸೆ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಮಳೆಗಾಲದ ಸಂದರ್ಭ ಸಮುದ್ರದ ಬದಿ ವಾಸಿಸುವುದೇ ಕಷ್ಟಕರವಾಗಿದೆ ಎಂದು ಹೇಳಿದರು.
ಬರ್ಮ್ಸ್ (ಮರಳು ದಂಡೆ) ರಚನೆ ಕೇವಲ ಸಮ್ಮರ್ ಸ್ಯಾಂಡ್‌ವರೆಗೆ ಮಾತ್ರ ಸೀಮಿತವಾಗಿದೆ. ಕಿಲೇರಿಯಾ ನಗರದಲ್ಲಿ ಸಮುದ್ರದ ಮಧ್ಯೆ ಬರ್ಮ್ಸ್ ರಚಿಸಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಬಂದರು ಇಲಾಖೆಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ.
– ಮಹಮ್ಮದ್ ಮುಕ್ಕಚ್ಚೇರಿ, ಸ್ಥಳೀಯ ಕೌನ್ಸಿಲರ್