ಪಡುಬಿದ್ರಿ: ಮಹೇಶ್ವರಿ ಮಾಟುಬಲೆ ಫಂಡ್‌ನವರ ಶೆಡ್ ಬಳಿ ಕೇಂದ್ರಿತವಾಗಿದ್ದ ಕಡಲ್ಕೊರೆತವು ಮತ್ತಷ್ಟು ಹೆಚ್ಚಿದ್ದು, ದಕ್ಷಿಣ ನಡಿಪಟ್ಣದ ಶ್ರೀ ವಿಷ್ಣು ಭಜನ ಮಂದಿರದ ಎದುರು ಕೂಡ ಹಾನಿ ಉಂಟು ಮಾಡಿದೆ.
ಮೀನುಗಾರಿಕೆ ರಸ್ತೆಗಿಂತ 10 ಅಡಿ ದೂರದ ವರೆಗೆ ಕಡಲ್ಕೊರೆತ ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೂ ಹಾನಿಯಾಗುವ ಸಾಧ್ಯತೆ ಇದೆ. ಇಡೀ ನಡಿಪಟ್ಣಕ್ಕೆ ಕಡಲ್ಕೊರೆತದ ಭೀತಿ ಹೆಚ್ಚಾಗಿದ್ದು, 80ಕ್ಕೂ ಹೆಚ್ಚಿನ ಮನೆಗಳು ಅಪಾಯದ ಆತಂಕದಲ್ಲಿವೆ. ಮೀನುಗಾರಿಕೆ ರಸ್ತೆ ಕಡಿತವಾದಲ್ಲಿ ಪಡುಬಿದ್ರಿಯ ಬ್ಲೂ ಫ್ಲಾÂಗ್ ಬೀಚ್‌ಕೂಡ ಪಡುಬಿದ್ರಿಯಿಂದ ಸಂಪರ್ಕ ಕಡಿದುಕೊಳ್ಳಲಿದೆ.
ಸಮುದ್ರ ತಟದ ಸುಮಾರು 35ಕ್ಕೂ ಹೆಚ್ಚಿನ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಮೀನುಗಾರರ ವಿಶ್ರಾಂತಿ ಗೃಹವೊಂದರ ಸಹಿತ ಪಂಚಾಯತ್ ಅಳವಡಿಸಿದ್ದ ಇಂಟರ್‌ಲಾಕ್‌ನ ಒಂದು ಭಾಗಕ್ಕೂ ಹಾನಿಯಾಗಿದೆ.
ಮೀನುಗಾರಿಕಾ ಇಲಾಖಾ ಕಾರ್ಯಪಾಲಕ ಎಂಜಿನಿಯರ್ ಶೋಭಾ ಅವರನ್ನು “ಉದಯವಾಣಿ’ ಸಂಪರ್ಕಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Sea Erosion: ಸೋಮೇಶ್ವರ-ಉಚ್ಚಿಲ: ಬಿರುಸಾದ ಕಡಲ್ಕೊರೆತ… ರಸ್ತೆ ಸಮುದ್ರ ಪಾಲಾಗುವ ಸಾಧ್ಯತೆ