Advertisement

ಪಡುಬಿದ್ರಿ, ಉಚ್ಚಿಲ ಪರಿಸರದಲ್ಲಿ ಕಡಲ್ಕೊರೆತ ತೀವ್ರ

11:18 AM Aug 03, 2019 | keerthan |

ಪಡುಬಿದ್ರಿ: ಉಚ್ಚಿಲದ ಎರ್ಮಾಳು ಬಡಾ, ಪಡುಬಿದ್ರಿ ಬೀಚ್‌, ಕಾಡಿಪಟ್ಣ, ನಡಿಪಟ್ಣ, ಮಧ್ವನಗರ ಪರಿಸರದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕಡಲ್ಕೊರೆತ ಶುಕ್ರವಾರವೂ ಮುಂದುವರಿದಿದೆ.

Advertisement

ಪ್ರಕ್ಷುಬ್ಧ ಕಡಲಿನ ಅಬ್ಬರಕ್ಕೆ ಪಡುಬಿದ್ರಿ ಸಾಗರ್‌ ವಿದ್ಯಾಮಂದಿರ ಶಾಲೆಯ ಎದುರು ಬೀಚ್‌ ನಿರ್ವಹಣ ಸಮಿತಿಯಿಂದ ನಿರ್ಮಿಸಲಾಗಿರುವ ಸಾರ್ವಜನಿಕ ಬಯಲು ವೇದಿಕೆ ಮತ್ತು ಕಾಂಕ್ರೀಟ್‌ ಅಂಗಣ ಹಾನಿಗೀಡಾಗಿವೆ.

ಪಡುಬಿದ್ರಿ ಕಾಡಿಪಟ್ಣ ರಾಘು ಸಾಲ್ಯಾನ್‌ ಮನೆ ಬಳಿ, ಮಧ್ವ ನಗರ ಸುಧಾಕರ್‌ ರಾವ್‌ ಮನೆ ಬಳಿ, ನಡಿಪಟ್ಣ ವಿಷ್ಣು ಭಜನ ಮಂದಿರದ ಪರಿಸರದಲ್ಲಿಯೂ ಕಡಲ್ಕೊರೆತ ತೀವ್ರಗೊಂಡಿದೆ. ಕೆಲವೆಡೆ ಗಾಳಿಗೆ ಮರಗಳು ಸಮುದ್ರ ಪಾಲಾಗಿವೆ.

ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯ ಬಡಾ ಎರ್ಮಾಳು ಮೀರಾ ಸಾಲ್ಯಾನ್‌ ಮನೆ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು, 10 ತೆಂಗಿನ ಮರಗಳನ್ನು ಸಮುದ್ರ ಸೆಳೆದೊಯ್ದಿದೆ. ಕಡಲ್ಕೊರೆತದ ಭೀತಿಯಿಂದ ತೀರದಲ್ಲಿದ್ದ ರಾಹು-ಗುಳಿಗ ಕಟ್ಟೆಯನ್ನು ಸಂಕೋಚ ಮಾಡಲಾಗಿದೆ. ಇಲ್ಲಿ ಕೊರೆತ ಇನ್ನೂ 5 ಮೀ.ನಷ್ಟು ಮುಂದುವರಿದಲ್ಲಿ ಈ ಭಾಗದಲ್ಲಿ ಹಾದು ಹೋಗುವ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.

ಜನರ ಆತಂಕ
ತುರ್ತು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದರೂ ಕೊರೆತ ತಡೆಯಲು ಈವರೆಗೆ ಯಾವುದೇ ಕ್ರಮ ನಡೆದಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಎರ್ಮಾಳು ಬಡಾದಲ್ಲಿನ ಕಡಲ್ಕೊರೆತದ ಸ್ಥಳಕ್ಕೆ ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಆರ್‌.ಐ. ರವಿಶಂಕರ್‌, ಗ್ರಾಮ ಲೆಕ್ಕಿಗ ಜಗದೀಶ್‌ ಬಿ.ಎಂ., ಎಡಿಬಿ ಕನ್ಸಲ್ಟೆಂಟ್‌ ಕಾರ್ತಿಕೇಯನ್‌, ಎಡಿಬಿ ಅಸಿಸ್ಟೆಂಟ್‌ ಎಂಜಿನಿಯರ್‌ ರಾಜೇಂದ್ರ ಕುಮಾರ್‌, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಬಡಾ ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಡಿ. ಸಾಲ್ಯಾನ್‌, ಸದಸ್ಯ ಶಿವಕುಮಾರ್‌ ಮೆಂಡನ್‌, ಪಿಡಿಒ ಕುಶಾಲಿನಿ ವಿ.ಎಸ್‌. ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಚಿತ್ರಾಪುರದಲ್ಲಿ ಮುಂದುವರಿಕೆ
ಸುರತ್ಕಲ್‌: ಚಿತ್ರಾಪುರ ಬೀಚ್‌ನಲ್ಲಿ ಕಡಲ್ಕೊರೆತಕ್ಕೆ ಹಲವಾರು ಬಾದಾಮಿ ಸಸಿಗಳು ಉರುಳಿ ಬಿದ್ದಿದ್ದು, ವಿದ್ಯುತ್‌ ಕಂಬಗಳು ಬಹುತೇಕ ಉರುಳುವ ಸ್ಥಿತಿಯಲ್ಲಿವೆ. ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದು, ಸೋಮೇಶ್ವರ ಉಚ್ಚಿಲ, ಉಳ್ಳಾಲ ಮುಕ್ಕಚ್ಚೇರಿ, ಕೈಕೋ, ಕಿಲೇರಿಯಾ ನಗರದಲ್ಲಿ ಕಡಲ್ಕೊರೆತ ಇಳಿದಿದೆ. ಮಲ್ಪೆ ಭಾಗದಲ್ಲಿ ಶುಕ್ರವಾರ ಬೆಳಗ್ಗಿನಿಂದಲೂ ಸಮುದ್ರದಲ್ಲಿ ರಭಸವಾಗಿ ಗಾಳಿ ಬೀಸುತ್ತಿತ್ತು. ಗಾಳಿ ಇದೇ ರೀತಿ ಎರಡು ಮೂರು ದಿನ ಇರಬಹುದೆಂದು ಮೀನುಗಾರರು ತಿಳಿಸಿದ್ದಾರೆ. ಬೈಂದೂರು ಭಾಗದಲ್ಲಿ ಸಮುದ್ರ ಶಾಂತವಾಗಿತ್ತು.

ಮಣಿಮುಂಡದಲ್ಲಿ ಕಡಲ್ಕೊರೆತ ಎರಡು ಮನೆ ಸಮುದ್ರ ಪಾಲು
ಉಪ್ಪಳ: ಇಲ್ಲಿಗೆ ಸಮೀಪದ ಮಣಿಮುಂಡದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಎರಡು ಮನೆಗಳು ಸಮುದ್ರ ಪಾಲಾಗಿವೆ.
ಅಬ್ದುಲ್‌ ರಶೀದ್‌ ಮತ್ತು ಸಯ್ಯದ್‌ ಇಬ್ರಾಹಿಂ ಅವರ ಮನೆಯನ್ನು ಆ. 1ರಂದು ರಾತ್ರಿ ಸಮುದ್ರ ಕಸಿದುಕೊಂಡಿದೆ. ಒಂದು ವಾರದಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಇದೇ ಸ್ಥಳದಲ್ಲಿರುವ ಅವ್ವಾಬಿ, ಅಬ್ದುಲ್ಲ, ಕೇಶವ, ಜಯರಾಮ ಅವರ ಮನೆಗಳೂ ಸಮುದ್ರ ಸೇರುವ ಭಯ ಎದುರಾಗಿದೆ. ಹನುಮಾನ್‌ ನಗರದ ಕಡಲ್ಕೊರೆತ ತೀವ್ರಗೊಂಡಿದ್ದು, ರಸ್ತೆ ಸಂಪೂರ್ಣ ನಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next