Advertisement
ಉಚ್ಚಿಲ ಬೀಚ್ ಎಂಡ್ ಪಾಯಿಂಟ್ ಸಂಪರ್ಕಿಸುವ ಬೀಚ್ ರಸ್ತೆ ಬಟ್ಟಪ್ಪಾಡಿಯಲ್ಲಿ ಕಳೆದ ವರ್ಷವೇ ಸಮುದ್ರ ಪಾಲಾಗಿತ್ತು. ರಸ್ತೆಯ ಬದಿಯಲ್ಲಿ ಕಡಲ್ಕೊರೆತಕ್ಕೆ ಹಾಕಲಾಗಿದ್ದ ಕಲ್ಲುಗಳು ಸಮುದ್ರ ಪಾಲಾಗಿತ್ತು. ಈ ಬಾರಿ ಇದೇ ಪ್ರದೇಶದಲ್ಲಿ ಕೊರೆತ ಆರಂಭವಾಗಿದೆ.
ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯ ಬಳಿಕ ಎಡಿಬಿ ಯಜನೆಯಡಿ ಸೋಮೇಶ್ವರ ಉಚ್ಚಿಲ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ನಡೆದಿತ್ತು. ಆದರೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಿದ್ದರಿಂದ ಮತ್ತು ಉಚ್ಚಿಲ ಬಟ್ಟಪ್ಪಾಡಿ ಬಳಿ ಯಾವುದೇ ಶಾಶ್ವತ ಕಾಮಗಾರಿ ನಡೆಸದ ಕಾರಣ ಸಮುದ್ರದ ಅಲೆಗಳು ತೀರ ಪ್ರದೇಶಕ್ಕೆ ಹಾನಿ ಮಾಡುತ್ತಿವೆ. ತಲಪಾಡಿ ಗಡಿಭಾಗದ ಉಚ್ಚಿಲ ಎಂಡ್ ಪಾಯಿಂಟ್ ವರೆಗಿನ ಸಮುದ್ರದಲ್ಲಿ ನಡೆಸಿದ್ದರೆ ಬಟ್ಟಪ್ಪಾಡಿ ಪ್ರದೇಶಕ್ಕೆ ಹಾನಿಯಾಗುತ್ತಿರಲಿಲ್ಲ ಎಂದು ಸ್ಥಳೀಯ ಹೋರಾಟಗಾರ ರಂಜಿತ್ ಉಚ್ಚಿಲ ಆರೋಪಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಎಡಿಬಿ ಕೇಂದ್ರ ಕಚೇರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.