ಬೆಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿರುವ ಸೊತ್ತುಗಳಿಗೆ ಹಾಕಲಾಗಿರುವ ಸೀಲ್ (ಮೊಹರು) ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆ. 16ಕ್ಕೆ ಮುಂದೂಡಿದೆ.
ಈ ಸಂಬಂಧ ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎಸ್‌ಡಿಪಿಐ ಮುಂಬರುವ ಚುನಾವಣೆಗೆ ಸಿದ್ದವಾಗಬೇಕಿದೆ. ನೋಟಿಸ್ ನೀಡದೇ 17 ಕಚೇರಿಗಳನ್ನು ಸೀಲ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಕ್ರಮವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.ಇದಕ್ಕೆ ಸರಕಾರದ ಪರ ವಕೀಲರು ಆಕ್ಷೇಪಿಸಿ, ಪಿಎಫ್ಐ ಸಂಘಟನೆಯ ಸಾಮಗ್ರಿಗಳು ಎಸ್‌ಡಿಪಿಐ ಕಚೇರಿಯಲ್ಲಿ ಪತ್ತೆಯಾಗಿವೆ. ಕೇಂದ್ರ ಸರಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಅರ್ಜಿಯಲ್ಲಿ ಕೇಂದ್ರ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂದರು.
ಕೇಂದ್ರ ಸರಕಾರದ ನಿರ್ದೇಶನ ನೀಡಿದ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.