ಧಾರವಾಡ: ಬೈಕ್ ಅಪಘಾತದಲ್ಲಿ ತುಂಡಾಗಿದ್ದ ಎರಡು ವರ್ಷದ ಮಗುವಿನ ಪಾದವನ್ನು ಶಸ್ತ್ರಚಿಕಿತ್ಸೆ ಮೂಲಕ ಮರಳಿ ಜೋಡಿಸುವ ಮೂಲಕ ಎಸ್‌ಡಿಎಂ ವೈದ್ಯರು ಗಮನ ಸೆಳೆದಿದ್ದಾರೆ.
ಕಳೆದ ಗುರುವಾರ ಸಂಜೆ ಗದಗ ಸಮೀಪ ಸಂಚರಿಸುತ್ತಿದ್ದ ತಂದೆ-ತಾಯಿ ಮತ್ತು ಮಗು ಬೈಕ್ ಅಪಘಾತವಾಗಿ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಮಗುವಿನ ಪಾದ ಬೈಕ್ ಚಕ್ರದಲ್ಲಿ ಸಿಲುಕಿ ತುಂಡಾಗಿತ್ತು. ಗದಗದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಡಾ| ಪ್ರಕಾಶ ಸಂಕನೂರ ಪ್ರಥಮ ಚಿಕಿತ್ಸೆ ನಡೆಸಿ ಮಗುವನ್ನು ಎಸ್‌ಡಿಎಂ ಆಸ್ಪತ್ರೆಗೆ ತುಂಡಾದ ಕಾಲಿನ ಸಮೇತ ಕಳುಹಿಸಿಕೊಟ್ಟರು.
ಮಗುವಿನ ತಪಾಸಣೆ ಮುಗಿದ ತಕ್ಷಣ(20 ನಿಮಿಷದೊಳಗೆ) ಮಗು ಹಾಗೂ ತುಂಡಾದ ಅಂಗಾಲು ಶಸ್ತ್ರಚಿಕಿತ್ಸಾ ಕೊಠಡಿ ತಲುಪಿದೆ. ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಅಂಗಾಲನ್ನು ಯಶಸ್ವಿಯಾಗಿ ಮರುಜೋಡಿಸಿದ್ದಾರೆ. ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ| ನಿರಂಜನಕುಮಾರ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಡಾ| ಅವಿನಾಶ ಪ್ರಭು, ಡಾ| ಅನಿಲ್ ಆರ್. (ಪ್ಲಾಸ್ಟಿಕ್ ಸರ್ಜನ್), ಡಾ| ಶ್ರೀನಾಥ ಕೆ.ಎಂ., ಡಾ| ಅನಮೊಲ್ (ಎಲುಬು ತಜ್ಞ), ಡಾ| ಆಸಿಫ್, (ಅರವಳಿಕೆ ತಜ್ಞ), ಯುವರಾಜ ಮತ್ತು ಸಹಾಯಕ ತಂಡ ತೊಡಗಿಸಿಕೊಂಡಿದ್ದರು.
ಇದುವರೆಗೆ ಎಸ್‌ಡಿಎಂ ತಂಡವು 28 ರೋಗಿಗಳಿಗೆ ಯಶಸ್ವಿಯಾಗಿ ಕೈ ಅಥವಾ ಕೈಬೆರಳುಗಳ ಮರು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೇ ಮೊದಲ ಬಾರಿಗೆ ಅಂಗಾಲಿನ ಮರುಜೋಡಣೆ ಯಶಸ್ವಿಯಾಗಿ ಪೂರೈಸಿದೆ. ಇದು ದೇಶದಲ್ಲಿಯೇ ಅತ್ಯಂತ ವಿರಳವಾಗಿ ನಡೆದ ಶಸ್ತ್ರಚಿಕಿತ್ಸೆಯಾಗಿದೆ.
ತುಂಡಾದ ಭಾಗವನ್ನು ನೀರಿನಲ್ಲಿ ತೊಳೆದು ಸ್ವಚ್ಛ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಮಂಜುಗಡ್ಡೆಗಳು ತುಂಬಿರುವ ಪೆಟ್ಟಿಗೆಯಲ್ಲಿ ಅದನ್ನು ಇಟ್ಟು ಆದಷ್ಟು ಬೇಗ ಆಸ್ಪತ್ರೆಗೆ ಬರಬೇಕು. ಎಸ್‌ಡಿಎಂ ಆಸ್ಪತ್ರೆಯಲ್ಲಿ ತುಂಡಾದ ಅಂಗಾಗ ಮರುಜೋಡಣೆಗೆ ಬೇಕಾಗಿರುವ ಸಕಲ ಸೌಲಭ್ಯಗಳು ಇವೆ. –
ಡಾ| ನಿರಂಜನಕುಮಾರ್