ಧಾರವಾಡ: ವಾರದ ಪ್ರತಿ ಮಂಗಳವಾರ ಕೃಷಿರಂಗ ಕಾರ್ಯಕ್ರಮದಲ್ಲಿ ಪ್ರಸಾರ ಆಗುತ್ತಿರುವ ಎಸ್‌ಡಿಎಂ ಡಾಕ್ಟರ್ ಆರೋಗ್ಯ ಸಂವಾದ ಕಾರ್ಯಕ್ರಮದ 700ನೇ ಸಂಚಿಕೆಯ ಮಹೋತ್ಸವವನ್ನು ನಗರದ ಆಕಾಶವಾಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
700ನೇ ಸಂವಾದವನ್ನು ಸಾರ್ವಜನಿಕರೊಂದಿಗೆ ನಡೆಸಿಕೊಟ್ಟ ಎಸ್‌ಡಿಎಂ ವಿವಿ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಡಾ|ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಪ್ರಾರಂಭವಾದ ಎಸ್‌ಡಿಎಂ ಡಾಕ್ಟರ್ ಆರೋಗ್ಯ ಸಂವಾದ ಕಾರ್ಯಕ್ರಮವು ತನ್ನ 14ನೇ ವರ್ಷದ ಈ ಇತಿಹಾಸದಲ್ಲಿ ಒಂದು ವಾರವೂ ತಪ್ಪದೇ ಪ್ರತಿ ಮಂಗಳವಾರ ಸಂಜೆ 7ರಿಂದ 7:30 ಗಂಟೆವರೆಗೆ ಬಿತ್ತರಗೊಳ್ಳುತ್ತಿದೆ ಎಂದು ಹೇಳಿದರು.
ಎಸ್‌ಡಿಎಂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ 2006 ಏ. 4ರಂದು ನಡೆಸಿಕೊಟ್ಟ ಮೊದಲ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಮಾತನಾಡಿದ್ದೆ. ಆ ಬಳಿಕ 2015 ನ. 17ರಂದು 500ನೇ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಟೆಲಿವಿಷನ್ ಯುಗದಲ್ಲಿ ರೇಡಿಯೋದಲ್ಲಿ ಬಿತ್ತರವಾಗುವ ಶ್ರವಣ ಮಾಧ್ಯಮದ ಮಾತುಕತೆ ಎಷ್ಟರ ಮಟ್ಟಕ್ಕೆ ಸಾಧನೆ ಮಾಡಬಹುದು ಎಂಬ ಸಂಶಯವಿತ್ತು. ಆದರೆ, ಆರೋಗ್ಯದ ಕಳಕಳಿಯ ಒಂದು ಪ್ರಯತ್ನವು ಸಂಗೀತ ಕಾರ್ಯಕ್ರಮದ ಹೊರತಾಗಿ ಎರಡನೇ ಸ್ಥಾನದಲ್ಲಿದೆ ಎಂದರು.
ಆಕಾಶವಾಣಿ ಸಹಾಯಕ ನಿರ್ದೇಶಕ ಸತೀಶ ಪರ್ವತೀಕರ ಸಂವಾದ ನಿರೂಪಿಸಿದರು. ಎಸ್‌ಡಿಎಂ ಆಡಳಿತ ವರ್ಗದಿಂದ ಆಕಾಶವಾಣಿಯ ಸತೀಶ ಪರ್ವತೀಕರ, ಗಿರೀಶ ಪಾಟೀಲ ಹಾಗೂ ಸುನಿಲ್ ಕುಮಾರ ಅವರನ್ನು ಸನ್ಮಾನಿಸಲಾಯಿತು. 2005ರಲ್ಲಿ ಮಂಗಳೂರಿನಿಂದ ಧಾರವಾಡಕ್ಕೆ ಈ ಕಾರ್ಯಕ್ರಮ ತಂದ ವಿರೂಪಾಕ್ಷ ಬಡಿಗೇರ ಅವರನ್ನು, ಕಾರ್ಯಕ್ರಮ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಏ.ಖ. ಪ್ರವೀಣಚಂದ್ರ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ, ಮಾಯಾ ಚಿಕ್ಕೇರೂರು, ಮಂಜುಳಾ ಪುರಾಣಿಕ, ಮಾಲಾ ಸಾಂಬ್ರಾಣಿ ಇದ್ದರು.