Advertisement

Scutch Grass: ಬಹೂಪಯೋಗಿ ಗರಿಕೆ ಹುಲ್ಲು

03:27 PM Feb 15, 2024 | Team Udayavani |

ಗರಿಕೆ ಹುಲ್ಲು, ಇದು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲೂ ಹೇರಳವಾಗಿ ಕಾಣಸಿಗುವಂತಹ ಹುಲ್ಲಿನ ಪ್ರಭೇದಗಳಲ್ಲಿ ಒಂದು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಈ ಹುಲ್ಲಿಗೆ ವಿಶಿಷ್ಟವಾದ ಮಹತ್ವವಿದೆ. ಪುರಾಣಗಳಲ್ಲಿ ಈ ಹುಲ್ಲಿನ ಬಗೆಗಿನ ಹಲವಾರು ಉಲ್ಲೇಖಗಳೂ ಕಾಣಸಿಗುತ್ತದೆ.

Advertisement

ಎಲ್ಲ ದೇವಾನು-ದೇವತೆಗಳಿಗೂ ಪುಷ್ಪ, ಮರ, ಎಲೆ ಹೀಗೆ ಹಲವಾರು ರೀತಿಯ ಇಷ್ಟದ ವಸ್ತುಗಳಿರುತ್ತದೆ. ಅಂತಹ ಪ್ರಿಯವಸ್ತುಗಳ ಪಟ್ಟಿಯಲ್ಲಿ ಇದೂ ಕೂಡ ಸ್ಥಾನ ಪಡೆದಿದೆ. ಗರಿಕೆ ಹುಲ್ಲು ಗಣಪನಿಗೆ ತುಂಬಾ ಪ್ರಿಯವಾದುದು. ಗರಿಕೆ ಹುಲ್ಲಿಲ್ಲದೆ ಗಣಪತಿಯ ಆರಾಧನೆ ಅಪೂರ್ಣ. ಇದನ್ನು ಗರಿಕೆ ಮಾತ್ರವಲ್ಲದೆ ದೂರ್ವಾ ಹುಲ್ಲು ಎಂದು ಕರೆಯಲಾಗುತ್ತದೆ.

ಆಧ್ಯಾತ್ಮಿಕ ಹಿನ್ನೆಲೆ

ಗರಿಕೆಯು ಪುರಾಣದ ಕಾಲದಿಂದಲೂ ಸ್ಥಾನಮಾನವನ್ನು ಪಡೆದುಕೊಂಡಿದೆ. ಪುರಾಣಗಳ ಪ್ರಕಾರ ಗಣಪತಿ ದೇವರಿಗೂ ಹಾಗೂ ಗರಿಕೆ ಹುಲ್ಲಿಗೂ ಅವಿನಾಭಾವ ನಂಟಿದೆ. ಅನಲಾಸುರ ಎಂಬ ದುಷ್ಟ ರಾಕ್ಷಸನೊಬ್ಬನಿದ್ದನು. ಆತನ ಕಣ್ಣುಗಳಿಂದ ಬೆಂಕಿಯ ಉಂಡೆಗಳೂ ಬರುತ್ತಿದ್ದವು. ಆತ ಭೂಲೋಕ ಮತ್ತು ಸ್ವರ್ಗಲೋಕದಲ್ಲಿದ್ದಂತಹ ದೇವಾನು-ದೇವತೆಗಳಿಗೆ ತೊಂದರೆ ನೀಡುತ್ತಿದ್ದ. ಈತನ ಹಿಂಸೆ ತಾಳಲಾರದೆ ದೇವಾನು-ದೇವತೆಗಳೆಲ್ಲಾ ತಮ್ಮ ರಕ್ಷಣೆಗೆ ಮಹಾದೇವನಾದ ಶಿವನಿಗೆ ಪ್ರಾರ್ಥಿಸುತ್ತಾರೆ.

ಆಗ ಶಿವನು ದುಷ್ಟ ಅನಲಾಸುರನ ಸಂಹಾರವು ಗಣಪತಿಯಿಂದ ಮಾತ್ರ ಸಾಧ್ಯ ಎಂದು ಗಣಪತಿಗೆ ದುಷ್ಟ ರಾಕ್ಷಸನನ್ನು ಸಂಹರಿಸಲು ಆದೇಶ ನೀಡುತ್ತಾರೆ. ತಂದೆಯ ಆಜ್ಞೆಯಂತೆ ಗಣಪತಿಯು ರಾಕ್ಷಸನ ಜತೆ ಯುದ್ಧಕ್ಕೆ ಇಳಿಯುತ್ತಾನೆ. ಈ ಸಂದರ್ಭ ರಾಕ್ಷಸ ತನ್ನ ಕಣ್ಣಿನಿಂದ ಬೆಂಕಿಯ ಉಂಡೆಗಳನ್ನು ಗಣಪತಿಯ ಕಡೆಗೆ ಪ್ರಹರಿಸಲು ಪ್ರಯತ್ನಿಸುತ್ತಾನೆ. ಆಗ ಗಣಪತಿ ದೇವರು ಉಗ್ರದೈತ್ಯ ರೂಪ ತಾಳಿ ರಕ್ಕಸನನ್ನು ನುಂಗುತ್ತಾರೆ. ಬೆಂಕಿಯ ಉಂಡೆಗಳನ್ನು ಹೊತ್ತಂತಹ ದುಷ್ಟರಕ್ಕಸನನ್ನು ನುಂಗಿದ ಪರಿಣಾಮ ಗಣಪತಿಯ ದೇಹದ ಉಷ್ಣದ ತಾಪ ಹೆಚ್ಚಾಗಿ ಹೊಟ್ಟೆ ಉರಿಯನ್ನು ಅನುಭವಿಸುತ್ತಾರೆ.

Advertisement

ಗಣಪತಿ ದೇವರ ಹೊಟ್ಟೆ ಉರಿಯ ಒದ್ದಾಟವನ್ನು ನೋಡಲಾರದೆ ಋಷಿಮುನಿಗಳೆಲ್ಲರೂ ಸೇರಿ ಹೊಟ್ಟೆ ಉರಿ ಶಮನಕ್ಕೆ 21 ಗರಿಕೆ ಹುಲ್ಲನ್ನು ಕಟ್ಟುಗಳಾಗಿ ಕಟ್ಟಿ ಗಣಪತಿ ದೇವರ ತಲೆಯ ಮೇಲಿರಿಸುತ್ತಾರೆ. ಇದರಿಂದಾಗಿ ಗಣಪತಿ ದೇವರ ಹೊಟ್ಟೆ ಉರಿ ಶಮನವಾಗಿ ತಂಪಾಗಿಬಿಡುತ್ತದೆ. ಆದ್ದರಿಂದ ಗರಿಕೆಯನ್ನು ತಂಪುಕಾರಕ ಎಂದು ಕರೆಯುತ್ತಾರೆ.

ಈ ಪುರಾಣದ ಕಥೆಯ ಉಲ್ಲೇಖದಿಂದಾಗಿ ಇಂದಿಗೂ ಗಣಪತಿ ದೇವರ ಆರಾಧನೆ ಸಮಯದಲ್ಲಿ 7 ಗರಿಕೆಗಳನ್ನು ಅರ್ಪಿಸಬೇಕು. ಹೂ ಬಿಟ್ಟಿರುವಂತಹ ಗರಿಕೆ ನಿಷಿದ್ಧ. ಗರಿಕೆ ಮೂರು ಅಥವಾ ಐದು ಎಲೆಯನ್ನು ಹೊಂದಿರಬೇಕು. ಇದರರ್ಥ ಗರಿಕೆಯಲ್ಲಿ ಮಧ್ಯದೆಲೆ ಗಣಪತಿ ದೇವರಿಗೆ ಅರ್ಪಿತವಾದರೆ ಇನ್ನುಳಿದ ಎರಡೆಲೆ ಶಿವ ಹಾಗೂ ಪಾರ್ವತಿಗೆ ಅರ್ಪಿತವಾಗುತ್ತದೆ ಎಂದು. ಯಾರು ಗಣಪತಿ ದೇವರನ್ನು 21 ಗರಿಕೆಯನ್ನು ಅರ್ಪಿಸಿ ಆರಾಧಿಸುತ್ತಾರೋ ಅಂತಹ ಭಕ್ತರನ್ನು ಗಣಪತಿ ದೇವರು ಸದಾ ಅನುಗ್ರಹಿಸುತ್ತಾರೆ ಎಂಬ ನಂಬಿಕೆಯೂ ಇದೆ.

ಮತ್ತೂಂದು ಪುರಾಣದ ಕಥೆಯ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳ ಹಾಗೂ ರಕ್ಕಸರ ನಡುವೆ ಅಮೃತಕ್ಕಾಗಿ ಜಗಳ ನಡೆಯುತ್ತದೆ. ಆ ಸಂದರ್ಭದಲ್ಲಿ ಅಮೃತದ ಕೆಲವು ಹನಿಗಳು ಅಲ್ಲೇ ಬೆಳೆದ ಗರಿಕೆ ಹುಲ್ಲಿನ ಮೇಲೆ ಬೀಳುತ್ತದೆ ಆಗ ಗರಿಕೆಯೂ ಅಮೃತಕ್ಕೆ ಸಮಾನವಾದ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಕಥೆ ಉಲ್ಲೇಖದಿಂದಾಗಿ ನಾವು ಎಷ್ಟೇ ಬಾರಿ ಗರಿಕೆಯನ್ನು ಕಿತ್ತರು ಅದು ಮರಳಿ ಹುಟ್ಟಿ ಬೆಳೆಯುತ್ತದೆ. ಗರಿಕೆಯ ವಿಶೇಷವೆಂದರೆ ಮನುಷ್ಯರು ಕಾಲಿರಿಸುವಂತಹ ಜಾಗದಲ್ಲಿ ಮಾತ್ರ ಇದು ಬೆಳೆಯುತ್ತದೆ. ಆದ್ದರಿಂದ ಗಣಪತಿ ದೇವರಿಗೆ ಗರಿಕೆ ಹುಲ್ಲು ಎಂದರೆ ಅತ್ಯಂತ ಪವಿತ್ರ ಮತ್ತು ಪ್ರಿಯವಾದುದಾಗಿದೆ.

ಆರೋಗ್ಯ ಸಂಜೀವಿನಿ

ಗರಿಕೆ ಹುಲ್ಲಿನ ವೈಜ್ಞಾನಿಕ ಹೆಸರು ಸೈನೋ ಡಾನ್‌ ಡ್ಯಾಕ್ಟಿಲಾನ್‌. ವಿಜ್ಞಾನದ ಪ್ರಕಾರ ಈ ಸಸ್ಯದಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್‌, ಪೊಟ್ಯಾಸಿಯಂ, ಪ್ರೊಟೀನ್‌, ಪಾಸ್ಫರಸ್‌, ಮ್ಯಾಂಗನೀಸ್‌ ಮತ್ತು ಕಾರ್ಬೋಹೈಡ್ರೇಟ್‌ ನಂತಹ ರಾಸಾಯನಿಕ ಅಂಶಗಳಿವೆ. ಗರಿಕೆ ಹುಲ್ಲನ್ನು ಆಯುರ್ವೇದ ಔಷಧಿಯಾಗಿಯೂ ಬಳಸುತ್ತಾರೆ.

ಗರಿಕೆ ಹುಲ್ಲು ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಗರ್ಭಕೋಶದ ಸಮಸ್ಯೆ, ಗರ್ಭಶಯದ ರಕ್ತಸ್ರಾವದ, ಮೂತ್ರದ ಸೋಂಕು, ಪಿ.ಸಿ.ಓ.ಡಿ. ಮತ್ತು ಪಿ.ಸಿ.ಓ.ಎಸ್‌., ಬಾಣಂತಿಯರಲ್ಲಿ ಕಂಡುಬರುವ ಹಾಲಿನ ಕೊರತೆ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಗರಿಕೆ ಸೇವೆನೆಯಿಂದಾಗಿ ಆಮ್ಲಿàಯತೆ, ಪದೇ ಪದೇ ಶೀತ, ಕಫ‌, ಕೊಬ್ಬು, ಗಾಯಗಳಿಗೆ, ತುರಿಕೆ, ದದ್ದು, ಕುಷ್ಟರೋಗ, ನಂಜು, ಉರಿಯೂತ, ಶುಷ್ಕತೆ, ಪೋಷಕಾಂಶಗಳ ಕೊರತೆ ಇಂತಹ ಸಮಸ್ಯೆಯನ್ನು ಕಡಿಮೆಯಾಗುತ್ತದೆ. ಇದು ಅನಿಯಂತ್ರಿತ ಮಧುಮೇಹಿಗಳಿಗೆ ಇನ್ಸುಲಿನ್‌ ಪ್ರತಿರೋಧವಾಗಿಯೂ ಸಹಕರಿಸುತ್ತದೆ.

ಇದು ನೈಸರ್ಗಿಕವಾಗಿ ರಕ್ತ ಶುದ್ಧೀಕಾರಕವಾಗಿದೆ ಮತ್ತು ರಕ್ತ ಕಣಗಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟ ಹೆಚ್ಚಿಸಿ, ರಕ್ತ ಹೀನತೆ ಸಮಸ್ಯೆ ಕಡಿಮೆಗೊಳಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ನಿದ್ರಾಹೀನತೆ, ಆಯಾಸ, ನರ ದೌರ್ಬಲ್ಯ, ಹುಣ್ಣುಗಳಂತಹ ಸಮಸ್ಯೆಗಳಿಗೂ ಇದು ಪರಿಹಾರವಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡಿ, ದಿನ ನಿತ್ಯ ಕ್ರಿಯಾಶೀಲರಾಗಿರುವಂತೆ ಮಾಡುವಲ್ಲಿಯೂ ಇದು ಶಸಕ್ತವಾಗಿದೆ.

ನಮ್ಮ ಸುತ್ತಮುತ್ತಲಿನ ಇಂತಹ ಅನೇಕ ಸಸ್ಯಗಳು ಅದೆಷ್ಟೊ ಕಾಯಿಲೆಗಳಿಗೆ ಔಷಧಿಗಳಾಗಿರುತ್ತದೆ. ಆದ್ದರಿಂದ ದೇಹಕ್ಕೆ ಕಷ್ಟ ಬಂದಾಗ ಒಂದು ಹುಲ್ಲು ಕೂಡ ಉಪಯೋಗಕ್ಕೆಬಾರದು ಎಂಬ ಮಾತು ಈ ಸಸ್ಯ ಸುಳ್ಳು ಮಾಡಿದೆ ಎಂದೇ ಹೇಳಬಹುದು.

ವಿದ್ಯಾಪ್ರಸಾದ್‌

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next