Advertisement
ಸುತ್ತಲೂ ಹಚ್ಚ ಹಸಿರು. ನಡುವೆ ಸಾಂಪ್ರದಾಯಿಕ, ಕಲಾತ್ಮಕ ಶೈಲಿಯಲ್ಲಿರುವ ವಿಗ್ರಹಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಒಳಗೆ ಕಾಲಿಟ್ಟರೆ ಕಾಣುವುದು ಹಳ್ಳಿಯ ಸಂರಕ್ಷಣೆ ಮಾಡಲು ಕಾದಾಡಿ ಮಡಿದ ವೀರರ ಶಿಲ್ಪ, ನಾಡಿಗಾಗಿ ಹೋರಾಡಿದ ವೀರಗಲ್ಲು, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳು, ಹಳ್ಳಿ ಸೊಗಡಿನ ಕೃಷಿ ಸಾಮಗ್ರಿಗಳು, ಹಿಂದಿನ ಕಾಲದಲ್ಲಿ ಪೂಜಿಸಲಾಗುತ್ತಿದ್ದ ವಿವಿಧ ದೇವತೆಗಳ ಶಿಲ್ಪಕಲಾ ಮೂರ್ತಿಗಳು… ಇವೆಲ್ಲವೂ ಪ್ರಕೃತಿದೇಯ ಆರಾಧನೆಯಲ್ಲಿರುವಂತೆ ಭಾಸವಾಗುತ್ತದೆ.
Related Articles
Advertisement
ಈ ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆ, ಚಾಲುಕ್ಯರ ಶಾಸನ. ವಿಜಯ ಪಾಂಡ್ಯ ದೇವರು ಆಳ್ವಿಕೆ ಮಾಡುತ್ತಿದ್ದ ಕ್ರಿ.ಶ 1175ರ ಕಾಲದ ಶಾಸನ ಇದಾಗಿದೆ. ಇದು 48 ಸಾಲುಗಳನ್ನೊಳಗೊಂಡಿದ್ದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪೊನ್ನವ್ವ ಎಂಬಾಕೆ ಅಲ್ಲಿನ ಈಶ್ವರ ದೇವಸ್ಥಾನದ ನಿರ್ಮಾಣಕ್ಕೆ 1200 ಕಂಬ ಹಡಗುಲವನ್ನು ದಾನ ಮಾಡುತ್ತಾಳೆ. ಹೆಣ್ಣೊಬ್ಬಳು ದಾನಕೊಟ್ಟಿದ್ದು ಶಾಸನದಲ್ಲಿರುವ ಪ್ರಮುಖ್ಯ ಅಂಶ. ಈ ಶಾಸನ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೆರೆಯಲ್ಲಿ ಸಂಗ್ರಹಿಸಿ ತಂದದ್ದು.
ಗೋವರ್ಧನ ಗಿರಿಧಾರಿ, ನಂದಿ ಹಳ್ಳಿಯಿಂದ ತರಲಾದ ಗಾಣದಕಲ್ಲು, ತುಮಕೂರು ತಾಲೂಕಿನ ದುರ್ಗದಹಳ್ಳಿಯಿಂದ ತರಲಾದ ಕಾಳಿಕಾದೇವಿ ವಿಗ್ರಹ, ಧಾನ್ಯಗಳನ್ನು ಬೇರ್ಪಡಿಸುವ ರೋಣದ ಕಲ್ಲನ್ನು ಬೆಳ್ಳಗಿರಿ ಗ್ರಾಮದಿಂದ ಸಂಗ್ರಹಿಸಿ ತರಲಾಗಿದೆ. ಶೈವ ದ್ವಾರಪಾಲಕರ ಕಲ್ಲಿನ ಸ್ತಂಭಗಳು, ಸ್ತ್ರೀದೇವತೆಗಳ ವಿಗ್ರಹ, ವಿಷ್ಣುಶಿಲ್ಪ ಎಲ್ಲವೂ ಸೇರಿ- “ಕಲಾರಾಧನೆ’ ಹೆಸರಿಗೆ ತಕ್ಕಂತೆ ವೈವಿಧ್ಯಮಯವೆನಿಸಿದೆ.
ವಿವಿ ಕಲಾ ಕಾಲೇಜಿನ ಮೈದಾನದಲ್ಲಿರುವ ಸ್ಮಾರ್ಟ್‌ಪಾರ್ಕ್‌ನಲ್ಲಿ ಯುವಜನರು ಸೆಲ್ಫಿ ತೆಗದುಕೊಳ್ಳಲು ವಿಶೇಷವಾದ ಅಂಕಣ ನಿರ್ಮಿಸಲಾಗಿದ್ದು, ಉದ್ಯಾನದಲ್ಲಿ ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ಚಿತ್ರಗಳನ್ನೂ ಬಿಡಿಸಲಾಗಿದೆ. ಇದರಿಂದಾಗಿ ಇಡೀ ಪ್ರಾಂಗಣಕ್ಕೆ ಮತ್ತಷ್ಟು ಮೆರುಗು ನೀಡಿದಂತಾಗಿದೆ.
ಕಾವ್ಯ ಎನ್.