ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇದೇನಿದು ಉಳಿಯ ಸದ್ದು ಎಂದು ಇಣುಕಿ ನೋಡಿದರೆ ಧರೆಗುರುಳಿರುವ ನೂರಾರು ವರ್ಷಗಳ ಹಳೆಯ ಮರಗಳು ಶಿಲ್ಪ ಕಲಾಕೃತಿಯಾಗಿ ಅರಳುತ್ತಿದ್ದವು!
ಹೌದು. ಹಗಲು ರಾತ್ರಿಯ ಪರಿವೆಯೇ ಇಲ್ಲದೇ ಶಿಲ್ಪಿಗಳು, ಹೇಗೆಂದರೆ ಹಾಗೆ ಬೆಳೆದು ಒಣಗಿರುವ ಮರಗಳಿಗೆ ಹೊಸ ರೂಪ ಕೊಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಕಿರಿಯ ಕಲಾವಿದರು ಹಿರಿಯರ ಜತೆ ಸಾಥ್ ನೀಡಿದ್ದು, ಬೃಹದಾಕಾರದ ಶಿಲ್ಪಗಳು ರೂಪಗೊಳ್ಳುತ್ತಿವೆ.
ಲಾಲ್‌ಬಾಗ್ ಆಡಳಿತ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜಂಟಿಯಾಗಿ ಶಿಲ್ಪಕಲಾ ಶಿಬಿರ ಆಯೋಜಿಸಿದೆ. ಕರ್ನಾಟಕ ಸೇರಿ ಬೇರೆ ರಾಜ್ಯಗಳ 60ಕ್ಕೂ ಹೆಚ್ಚು ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 200 ರಿಂದ 300 ವರ್ಷ ಹಳೆಯದಾಗಿ, ನೆಲಕ್ಕುರುಳಿರುವ ಹಲಸು, ಮಾವು, ನೀಲಗಿರಿ, ನೇರಳೆ ಮರಗಳನ್ನೇ ಕೆತ್ತನೆಯ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಈಗಾಗಲೇ 60%ರಿಂದ 70%ರಷ್ಟು ಕೆತ್ತನೆ ಕೆಲಸಗಳು ಪೂರ್ಣಗೊಂಡಿವೆ. ಇದೇ ತಿಂಗಳು 12ರಂದು ಆರಂಭವಾದ ಶಿಬಿರ 27ಕ್ಕೆ ಸಂಪನ್ನಗೊಳ್ಳಲಿದ್ದು, ಅಷ್ಟರೊಳಗೆ ಪೂರ್ಣಗೊಳಿಸುವ ತರಾತುರಿಯಲ್ಲಿ ಕಲಾವಿದರಿದ್ದಾರೆ.
50 ದಿಮ್ಮಿಗಳು; 70 ಶಿಲ್ಪಿಗಳು: ಉದ್ಯಾನದಲ್ಲಿ ಬಿದ್ದಿದ್ದ 15 ದೈತ್ಯ ಮರಗಳಿಂದ, 50ಕ್ಕೂ ಹೆಚ್ಚು ಬೃಹತ್ ಮರದ ದಿಮ್ಮಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಈಗ ಮರ, ಪ್ರಾಣಿ, ಪಕ್ಷಿಗಳು, ನೀರಿನ ಝರಿ ಹೀಗೆ ವಿವಿಧ ಕಲಾಕೃತಿಗಳು ಅರಳಿವೆ. ಬರೋಡಾ, ಕೊಲ್ಕತ್ತ ಹಾಗೂ ಮುಂಬೈನಿಂದ ತಲಾ 15 ಪ್ರಮುಖ ಮತ್ತು ಸಹಾಯಕ ಶಿಲ್ಪಿಗಳು, ತೋಟಗಾರಿಕೆ ಇಲಾಖೆಯಿಂದ 15 ಶಿಲ್ಪಿಗಳು, ಸ್ವಯಂಪ್ರೇರಿತವಾಗಿ 25 ಶಿಲ್ಪಿಗಳು ಪಾಲ್ಗೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದರು.
ಸಸ್ಯಕಾಶಿಯೇ ಶಿಲ್ಪಕ್ಕೆ ಸ್ಫೂರ್ತಿ: ಬೆಂಗಳೂರು, ಬಿದರ್, ಬಿಜಾಪುರ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ರಾಜ್ಯದ ಇನ್ನೂ ಕೆಲ ಜಿಲ್ಲೆಗಳ ಶಿಲ್ಪ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಪಶ್ಚಿಮಬಂಗಾಳ, ದೆಹಲಿಯ ಕಲಾವಿದರಿಗೂ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಲಾಗಿದ್ದು, ಈಗಾಗಲೇ ಇವರೆಲ್ಲರೂ ಕಲಾಕೃತಿಗೆ ಅಂತಿಮ ರೂಪ ನೀಡುತ್ತಿದ್ದಾರೆ. ಮಹಿಳಾ ಶಿಲ್ಪಿಗಳೂ ಶಿಬಿರದಲ್ಲಿ ಪಾಲ್ಗೊಂಡು ಸಾಕ್ಷಿಯಾಗುತ್ತಿರುವುದು ಇನ್ನೊಂದು ವಿಶೇಷ.
“ಶಿಬಿರ ಒಂದು ಹೊಸ ಅನುಭವ ನೀಡಿದೆ.ನಾನು ರಚಿಸುತ್ತಿರುವ ಕಲಾಕೃತಿಯಲ್ಲಿ ಮರವನ್ನೇ ತಾಯಿಯಾಗಿ ಬಿಂಬಿಸಿದ್ದೇನೆ. ಈ ತಾಯಿ ಸದಾಕಾಲ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುತ್ತಾಳೆ. ಗರ್ಭಿಣಿಯಾಗಿ ನೂರಾರು ಸಸ್ಯಗಳಿಗೆ ಜನ್ಮ ನೀಡುತ್ತಾಳೆ. ಪಕ್ಷಿಗಳಿಗಂತೂ ತಾಯಿ ಎನಿಸಿಕೊಂಡ ಮರವೇ ಆಸರೆ.
-ಶರಣ್, ರಾಮನಗರ ಕಲಾವಿದ