Advertisement

ಶಿಲ್ಪಕಲೆ ದೇಶದ ಸಂಸ್ಕೃತಿ ಪ್ರತೀಕ

03:42 PM Feb 27, 2017 | Team Udayavani |

ಕಲಬುರಗಿ: ಪುರಾತನ ಕಾಲದಿಂದಲೂ ನಮ್ಮ ದೇಶದ ಶಿಲ್ಪ ಕಲೆಗಳು ವಿಶಿಷ್ಟ ಸ್ಥಾನಮಾನ ಪಡೆದಿದ್ದು, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

Advertisement

ಕಲಬುರಗಿ-ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಸಿದ್ಧಾರ್ಥ ವಿಹಾರ ಟ್ರಸ್ಟ್‌ ಕಲಬುರಗಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 20 ದಿನಗಳ ರಾಜ್ಯ ಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 30 ಜನ ಶಿಲ್ಪ ಕಲಾವಿದರು 20 ದಿನಗಳ ಕಾಲ ಶ್ರಮಪಟ್ಟು ಗಟ್ಟಿಯಾದ ಶಿಲೆಗಳಲ್ಲಿ ಜೀವಕಳೆ ತುಂಬಿ ಬುದ್ಧನ ವಿವಿಧ ಭಂಗಿಯ ಶಿಲ್ಪಕಲಾ ಕೃತಿಗಳನ್ನು ಸಿದ್ಧ ಪಡಿಸಿರುವುದು ಶ್ಲಾಘನೀಯ. ಇಡೀ ದಕ್ಷಿಣ ಭಾಗದಲ್ಲೇ ಬೃಹತ್‌ ಪ್ರಮಾಣದಲ್ಲಿರುವ ಬುದ್ಧ ವಿಹಾರದಲ್ಲಿ ಶಿಲ್ಪಕಲಾ ಶಿಬಿರ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಸಂಯೋಜಕಿ ಪ್ರೊ| ಪ್ರಮಿಳಾ ಅಂಬೇಕರ್‌ ಮಾತನಾಡಿ, ಶಿಲ್ಪಿಯು ತನ್ನ ಭಾವನೆ ಮತ್ತು ಕಲ್ಪನೆಗಳನ್ನು ಶಿಲೆಯಲ್ಲಿ ಕೆತ್ತನೆ ಮಾಡುವ ಮೂಲಕ ಅದಕ್ಕೆ ಮೂರ್ತ ಸ್ವರೂಪ ನೀಡುತ್ತಾನೆ. ಈ ಶಿಲ್ಪಕಲಾ ಕೃತಿಗಳಲ್ಲಿ ಶಿಲ್ಪಿಗಳ ಅಪಾರ ಶ್ರಮಶಕ್ತಿ ಅಡಗಿದೆ ಎಂದು ಹೇಳಿದರು. 

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಮಾಜಿ ಸದಸ್ಯ, ಕಲಬುರಗಿ ಸಿದ್ಧಾರ್ಥ ವಿಹಾರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಡಾ| ಮಾರುತಿರಾವ್‌ ಡಿ. ಮಾಲೆ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಸದಸ್ಯ ಮಾಪಣ್ಣ ಗಂಜಿಗೇರಿ, ಸಿಂಡಿಕೇಟ್‌ ಸದಸ್ಯ ಈಶ್ವರ ಎಂ. ಇಂಗನ್‌, ಶಿಲ್ಪಕಲಾ ಅಕಾಡೆಮಿ ಸದಸ್ಯ ಕುಮಾರ ವೈ., ಸದಸ್ಯ ಸಂಚಾಲಕ ಮಹೇಶಕುಮಾರ ಡಿ.ತಳವಾರ, ರಿಜಿಸ್ಟ್ರಾರ್‌ ಇಂದ್ರಮ್ಮ ಎಚ್‌.ವಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

Advertisement

ಸಮಾರೋಪ ಸಮಾರಂಭದ ಅಂಗವಾಗಿ ಬುದ್ಧನ ಧ್ಯಾನಾಸಕ್ತ, ನಿದ್ರಾಭಂಗಿಯ, ಚಲನೆಯ ಮುಂತಾದ ವಿವಿಧ ಭಂಗಿಯ ಹಾಗೂ ಡಾ| ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನವನ್ನು ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದ ಅವರಿಗೆ ಸಮರ್ಪಿಸುತ್ತಿರುವ ಮತ್ತು ಇತರ ಶಿಲ್ಪಗಳ ಲೋಕಾರ್ಪಣೆ ಮಾಡಲಾಯಿತು. “ಕರ್ನಾಟಕದ ಶಿಲ್ಪ ಕಲಾವಿದರು’ ಹಾಗೂ “ಕರ್ನಾಟಕ ಶಿಲ್ಪ ಸಂಚಲನ’ಸ್ಮರಣ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಶಿವಕುಮಾರ ಶಿಬಿರದ ನಿರ್ದೇಶಕರಾಗಿದ್ದರು. ಶಿಬಿರದಲ್ಲಿ ಕಲಬುರಗಿ, ಬಾಗಲಕೋಟೆ, ಗದಗ, ಧಾರವಾಡ, ಬೆಂಗಳೂರು, ರಾಮನಗರ, ಉಡುಪಿ, ಉತ್ತರಕನ್ನಡ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ 15 ಹಿರಿಯ ಮತ್ತು 15 ಸಹಾಯಕ ಶಿಲ್ಪಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next