Advertisement
ಮಾರ್ಬಲ್ ಗುಹೆಗಳು ಅಥವಾ “ಕ್ಯುವಾಸ್ ಡೆ ಮಾರ್ಮೊಲ್’ ಎಂದೂ ಕರೆಯುವ ಅಮೃತಶಿಲೆಯ ರಚನೆಗಳಿರುವ ಈ ಸ್ಥಳ ಇರುವುದು ಚಿಲಿ ದೇಶದ ಪ್ಯಾಟಗೋನಿಯನ್ ಆ್ಯಂಡೀಸ್‌ನಲ್ಲಿ. ಅರ್ಜೆಂಟೈನಾ ಮತ್ತು ಚಿಲಿ ನಡುವಿನ ಸಮುದ್ರ ತೀರದಲ್ಲಿ ಕಂಡುಬರುವ ಈ ಅನನ್ಯ ಭೌಗೋಳಿಕ ರಚನೆ ಪ್ರವಾಸಿಗರ ಸ್ವರ್ಗವೆನಿಸಿದೆ ಜೊತೆಗೆ ಕೌತುಕವನ್ನೂ ಮೂಡಿಸುತ್ತದೆ. ಇಲ್ಲಿನ ಮತ್ತೂಂದು ವಿಶೇಷವೆಂದರೆ ಈ ಸ್ಥಳವು ದ್ವೀಪದಂತಹ ಪ್ರದೇಶದಲ್ಲಿದ್ದು ಇಲ್ಲಿಗೆ ತಲುಪಲು ದೋಣಿಯ ಸಹಾಯ ಪಡೆಯಬೇಕು.
ಈ ಸ್ಥಳಕ್ಕೆ ಬಂದು ನೋಡಿದಾಗ ಮನಸ್ಸಿಗೆ ಉಲ್ಲಾಸವಾಗದೇ ಇರದು. ಸುಮಾರು 6,000 ವರ್ಷಗಳಿಗೂ ಹಿಂದಿನಿಂದ, ನೀರಿನ ಹೊಡೆತಕ್ಕೆ ಸಿಕ್ಕ ಕಲ್ಲುಗಳು ಅದ್ಭುತ ರಚನೆಗಳಾಗಿ ಮಾರ್ಪಟ್ಟು ಪ್ರವಾಸಿಗರಿಗೆ ಮುದ ನೀಡುತ್ತವೆ. ಇಲ್ಲಿನ ಪ್ರತಿಯೊಂದು ಕಲ್ಲುಗಳು ಒಂದೊಂದು ಬಣ್ಣ ಹಾಗೂ ಬೇರೆ ಬೇರೆ ಆಕೃತಿಯಲ್ಲಿ ಕಂಡುಬರುತ್ತದೆ. ಹಡಗಿನಲ್ಲಿ ಸಂಚರಿಸುತ್ತಾ ಈ ರಮಣೀಯ ದೃಶ್ಯವನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಪ್ರತಿಯೊಂದು ಕಲ್ಲುಗಳು ನುಣುಪಾದ ಹಾಗೂ ವಿವಿಧ ಆಕಾರಗಳನ್ನು ಪಡೆದು ಶಿಲ್ಪಗಳ ರಚನೆಗಳಂತೆ ಕಾಣುವುದು ಇಲ್ಲಿನ ಮತ್ತೂಂದು ವಿಶೇಷ. ಚಿಲಿಯ ಸ್ಯಾಂಟಿಯಾಗೊದಿಂದ ಬಾಲ್ಮೆಸೆಡಾ ನಗರಕ್ಕೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಸುಮಾರು 193 ಕಿ.ಮೀ ದೂರದ ಜನರಲ್ ಕ್ಯಾರೆರಾ ಸರೋವರವನ್ನು ತಲುಪಿದರೆ 30 ನಿಮಿಷಗಳ ಅಂತರದಲ್ಲಿ ಈ ಸ್ಥಳವನ್ನು ತಲುಪಬಹುದು. ಈ ಸ್ಥಳಕ್ಕೆ ಹೋಗಲು ದೋಣಿಗಳು ಸಿಗುತ್ತವೆ ಹಾಗೂ ಮಾರ್ಗದರ್ಶಕರೂ ಕೂಡಾ.
Related Articles
ಬೆಳಕಿನ ಪ್ರತಿಫಲನ ಹಾಗೂ ಸಮುದ್ರದ ನೀರಿನ ಕಾರಣದಿಂದಾಗಿ ಈ ರಚನೆಗಳು ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿನ ರಚನೆಗಳು ಸಮುದ್ರದ ನೀರಿನ ಮಟ್ಟ ಮತ್ತು ಋತುಗಳ ಆಧಾರದ ಮೇಲೆ ವರ್ಷ ಪೂರ್ತಿ ಬಣ್ಣ ಬದಲಿಸುತ್ತವೆ ಎನ್ನುವುದು ಕೆಲವರ ವಾದ.
Advertisement
– ಪುರುಷೋತ್ತಮ್