Advertisement

ಮೈಸೂರು ಶಿಲ್ಪಿಯಿಂದ ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ

10:27 PM Nov 04, 2021 | Team Udayavani |

ಮೈಸೂರು: “ಈ ಪವಿತ್ರ ಕಾರ್ಯದಲ್ಲಿ ನಾನು ನಿಮಿತ್ತ ಮಾತ್ರ. ಆದಿಗುರು ಶಂಕರಾಚಾರ್ಯರು ನನ್ನ ಕೈಯಲ್ಲಿ ಈ ಕಾರ್ಯವನ್ನು ಮಾಡಿಸಿಕೊಂಡಿದ್ದಾರೆ’ -ಹೀಗೆ ಅತ್ಯಂತ ವಿನಯದಿಂದ ಹೇಳಿಕೊಂಡಿದ್ದಾರೆ ಮೈಸೂರಿನ ಹೆಸರಾಂತ ಶಿಲ್ಪಿ ಅರುಣ್‌ ಯೋಗಿರಾಜ್‌.

Advertisement

ಅದ್ವೈತ ಸಿದ್ದಾಂತದ ಪ್ರತಿಪಾದಕರಾದ ಶಂಕರಾಚಾರ್ಯರ 12 ಅಡಿ ಎತ್ತರದ ಕುಳಿತಿರುವ ಭಂಗಿಯ ಸುಂದರ, ಬೃಹತ್‌ ಮೂರ್ತಿ ಉತ್ತರಾಖಂಡದ ಕೇದಾರನಾಥದಲ್ಲಿ ಶುಕ್ರವಾರ (ನ.5) ನೆಲೆಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶಂಕರಾಚಾರ್ಯರ ಪುನರ್‌ ನಿರ್ಮಾಣ ಸಮಾಧಿಯನ್ನು ಕೇದಾರನಾಥದಲ್ಲಿ ಶುಕ್ರವಾರ ಉದ್ಘಾಟಿಸಿ,  ಮೂರ್ತಿಯನ್ನು  ಅನಾವರಣಗೊಳಿಸುವರು. ಈ ಮೂರ್ತಿಯನ್ನು ಕೆತ್ತಿರುವುದು ಯುವ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌.

ಮೂರ್ತಿಯನ್ನು ಕೆತ್ತುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಕೇದಾರನಾಥವು ಪ್ರಧಾನಿ ನರೇಂದ್ರ ಮೋದಿ  ಮನಸ್ಸಿಗೆ ತುಂಬಾ ಹತ್ತಿರವಾದ ಪವಿತ್ರ ಸ್ಥಳ. ಆದಿಶಂಕರರ ಮೂರ್ತಿ ಕೆತ್ತುವಾಗ ಕಲ್ಲಿಗೆ ಬಿದ್ದ ಒಂದೊಂದು ಏಟು ಇತಿಹಾಸ ಸೃಷ್ಟಿಸುತ್ತದೆ ಎಂಬ ಅರಿವು ನನಗಿತ್ತು. ಶಂಕರರೇ ನನ್ನ ಕೈಯಲ್ಲಿ ಈ ಕಾರ್ಯ ಮಾಡಿಸುತ್ತಿದ್ದಾರೆ ಎಂಬ  ಭಾವನೆಯಿತ್ತು. “ನೀವು ಶಿಲೆಯಲ್ಲಿ ಹೇಗೆ ಬರುತ್ತೀರೋ ಬನ್ನಿ’ ಎಂದು  ಶಂಕರರನ್ನು ಮನದಲ್ಲೇ ಭಕ್ತಿಯಿಂದ ನೆನೆದು ತಾಧ್ಯಾತ್ಮ ಭಾವದಿಂದ ಪ್ರತಿದಿನ ಕೆತ್ತನೆ ಕೆಲಸ ಮಾಡುತ್ತಿದ್ದೆ. ಶಿಲೆ ಜತೆ ದಿನವೂ ನನ್ನ ಮಾತುಕತೆ ನಡೆಯುತ್ತಿತ್ತು  ಎಂದು ಅರುಣ್‌ ಯೋಗಿರಾಜ್‌  “ಉದಯವಾಣಿ’ಗೆ ತಿಳಿಸಿದರು.

ನಾನು  11ನೇ ವಯಸ್ಸಿನಿಂದಲೇ ಶಿಲೆಯ ಕೆತ್ತನೆ ಕೆಲಸ ಆರಂಭಿಸಿದ್ದು, ತಂದೆಯ ಒಂದು ಮಾತನ್ನು  ಸದಾ  ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ.  “ನೋಡು ಮಗ.. ಕಲ್ಲು ನಾವು ಹೇಳುವ ರೀತಿ ಕೇಳಬೇಕು’  ಎನ್ನುತ್ತಿದ್ದರು ಅಪ್ಪ. ಶಂಕರಾಚಾರ್ಯರ ಕೃಪೆಯಿಂದ ಬಹಳ ಸುಲಭವಾಗಿ ಕೆತ್ತನೆ ಕಾರ್ಯ ನಡೆಯಿತು’ ಎನ್ನುತ್ತಾರೆ 37 ವರ್ಷದ ಅರುಣ್‌ ಯೋಗಿರಾಜ್‌.

Advertisement

ಕೃಷ್ಣ ಶಿಲೆ ಬಳಕೆ:

ಅರುಣ್‌ ಯೋಗಿರಾಜ್‌  ಸಾರಥ್ಯದಲ್ಲಿ ಅವರ ತಂಡದ  ಏಳು ಮಂದಿ  ಮೂರ್ತಿ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದು, 9 ತಿಂಗಳಲ್ಲಿ ಮೂರ್ತಿ ಸಿದ್ಧಗೊಂಡಿದೆ. ಇದಕ್ಕೆ  80 ಟನ್‌ ಕೃಷ್ಣ ಶಿಲೆ ಬಳಕೆಯಾಗಿದೆ. ಪೀಠ ಮತ್ತು ಮೂರ್ತಿಯನ್ನು  ಪ್ರತ್ಯೇಕವಾಗಿ ಕೆತ್ತಿ ಜೋಡಿಸಲಾಗಿದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಮೂರ್ತಿ ಕೆತ್ತನೆ ಕಾರ್ಯ ಆರಂಭವಾಗಿ ಈ ವರ್ಷದ ಜೂನ್‌ನಲ್ಲಿ ಪೂರ್ಣಗೊಂಡಿತ್ತು.

ಮೈಸೂರಿನಲ್ಲಿ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಉತ್ತರಾಖಂಡದ ಚಮೌಲಿಗೆ  ವಿಮಾನದಲ್ಲಿ ಮೂರ್ತಿಯನ್ನು ಕಳುಹಿಸಲಾಯಿತು. ಚಮೌಲಿಯಿಂದ ಚಿನೂಕ್‌ ಹೆಲಿಕಾಪ್ಟರ್‌ ಮೂಲಕ ಕೇದಾರನಾಥ ತಲುಪಿತ್ತು.

28 ಟನ್‌ ತೂಕ :

ಮೂರ್ತಿಯು 28 ಟನ್‌ ತೂಕವಿದೆ.  ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಲಭ್ಯವಿರುವ ಕೃಷ್ಣ ಶಿಲೆಯಿಂದ ಇದನ್ನು ಕೆತ್ತಲಾಗಿದೆ. ಕೃಷ್ಣ ಶಿಲೆಯ ವೈಶಿಷ್ಟ್ಯವೆಂದರೆ ಇದು ಅಗ್ನಿ, ಆ್ಯಸಿಡ್‌, ವಾಯು, ನೀರು ಮುಂತಾದವುಗಳಿಂದ ರಕ್ಷಣೆ ನೀಡುತ್ತದೆ.

ಸಿದ್ಧಗಂಗಾ ಕ್ಷೇತ್ರ ಸಮೀಪದ ಹರಳೂರು ಗ್ರಾಮದಲ್ಲಿರುವ ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಪ್ರತಿಮೆ, ಮೈಸೂರಿನ ಶ್ರೀ ಜಯಚಾಮರಾಜ ಒಡೆಯರ್‌ ಪ್ರತಿಮೆ, ಮೈಸೂರಿನ ಪುರಭವನ ಮುಂಭಾಗದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆ, ರೈಲ್ವೆ ಮ್ಯೂಸಿಯಂನಲ್ಲಿರುವ ಕಾಮನ್‌ಮನ್‌ ಪ್ರತಿಮೆ  ಮುಂತಾದವು   ಅರುಣ್‌ ಯೋಗಿರಾಜ್‌ ಅವರ ಕೈಯಿಂದ ಅರಳಿದವು.

ಕೇಂದ್ರ ಸರಕಾರದ  ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ  ಶಂಕರಾಚಾರ್ಯರ ಮೂರ್ತಿ ಕೆತ್ತನೆಗೆ ಪ್ರತಿ ರಾಜ್ಯಗಳಿಂದಲೂ ಕಲಾವಿದರ ಆಯ್ಕೆಯಾಗಿತ್ತು.  ಅರುಣ್‌ ಯೋಗಿರಾಜ್‌ ಅವರು ಎರಡು ಅಡಿಯಲ್ಲಿ ಮಾದರಿ ಮೂರ್ತಿ ತಯಾರಿಸಿ ಕಳುಹಿಸಿದ್ದರು. ಅದನ್ನು ಪರಿಶೀಲಿಸಿದ ಬಳಿಕ ಅರುಣ್‌ ಯೋಗಿರಾಜ್‌ ಈ ಕಾರ್ಯಕ್ಕೆ ಆಯ್ಕೆಯಾಗಿದ್ದರು.   ಇವರ ತಂದೆ ದಿ| ಯೋಗಿರಾಜ್‌ ಹೆಸರಾಂತ ಶಿಲ್ಪ ಕಲಾವಿದರಾಗಿದ್ದು, ರಾಜ್ಯ ಸರಕಾರದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರು. ತಂದೆಯೇ  ಅರುಣ್‌ಗೆ ಮೊದಲ ಗುರು.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next