Advertisement
ಉಡುಪಿ ಜಿಲ್ಲೆಯ ಸ್ಕೂಬಾ ಡೈವಿಂಗ್ ತಾಣಕ್ಕೆ ಮತ್ತೊಂದು ಪ್ರದೇಶ ಸೇರ್ಪಡೆಗೊಂಡಿದೆ. ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನದೊಂದಿಗೆ ಕಾಪು ಜತೆ ಮತ್ತೂಂದು ಕುಂದಾಪುರ – ಬೈಂದೂರು ಸಹ ಹೊಸ ಜಲ ಸಾಹಸ ಕ್ರೀಡೆಗೆ ತೆರೆದುಕೊಳ್ಳಲಿದೆ. ಇದರಿಂದ ಈಜು ಗೊತ್ತಿಲ್ಲದವರು ಸಹ ಕಡಲ ಒಡಲಲ್ಲಿರುವ ಕಲ್ಲು, ಸಸ್ಯ, ಜೀವಿ ಪ್ರಪಂಚದ ವೈಶಿಷ್ಟ್ಯ, ಸೌಂದರ್ಯವನ್ನು ಕಣ್ಣಾರೆ ಸವಿಯುವ ಅವಕಾಶ ಉಡುಪಿ, ಕುಂದಾಪುರ, ಬೈಂದೂರು ಸುತ್ತಮುತ್ತಲಿನ ಜನತೆಗೆ ಬಂದೊದಗಿದೆ.
ಸ್ಕೂಬಾ ಡೈವಿಂಗ್ ನಡೆಸಲು ಮೆರಿಡಿಯನ್ ಅಡ್ವೆಂಚರ್ ಗುತ್ತಿಗೆ ಪಡೆದಿದೆ. ಕೋಡಿ ಬೀಚಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕುಂದಾಪುರ ಹಾಗೂ ಬೈಂದೂರು ನಡುವಿನ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್ ಡಿ. 14ರಂದು ಆರಂಭಗೊಳ್ಳಲಿದೆ.
Related Articles
Advertisement
ಕೋಡಿ ಮಾತ್ರವಲ್ಲದೆ ಸೋಮೇಶ್ವರ ಬೀಚ್ ಹಾಗೂ ಶಿರೂರು ಧಕ್ಕೆಯಿಂದಲೂ ಪಿಕಪ್ ಪಾಯಿಂಟ್ ಇದೆ. ಈ 3 ಸ್ಥಳಗಳಿಂದ ಸ್ಕೂಬಾ ಡೈವಿಂಗ್ ಮಾಡಲು ಆಸಕ್ತಿಯಿರುವವರನ್ನು ಕರೆದುಕೊಂಡು ಬೋಟ್ ಮೂಲಕ ನಾಯ್ಕನಕಲ್ಲಿಗೆ ಕರೆದುಕೊಂಡುಹೋಗಲಾಗುತ್ತಿದೆ. ಕೋಡಿ ಸೀವಾಕ್ ಬಳಿ ಮುಖ್ಯ ಪಿಕಪ್ ಪಾಯಿಂಟ್ ಆಗಿದ್ದು, ಅಲ್ಲಿಂದ ಬೆಳಗ್ಗೆ 8 ಗಂಟೆಯಿಂದ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಸುಮಾರು 20 ಕಿ.ಮೀ. ದೂರ ಅಂದರೆ 1.15 ಗಂಟೆ ಸಮುದ್ರದಲ್ಲಿ ಬೋಟ್ ಸಂಚಾರವಿದೆ. 12 ವರ್ಷ ಮೇಲ್ಪಟ್ಟವರಿಗೆ ಮಾತ್ರ
ಡಿಸಿ ಡಾ| ವಿದ್ಯಾ ಕುಮಾರಿ ನೇತೃತ್ವದ ಸಮಿತಿಯು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ, ಅನುಮತಿ ನೀಡಲಾಗಿದೆ. ಅದಕ್ಕೂ ಮೊದಲು ಕರಾವಳಿ ಕಾವಲು ಪಡೆಯಿಂದ ನಿರಕ್ಷೇಪಣ ಪತ್ರ ದೊರೆತಿದೆ. 12 ವರ್ಷ ಮೇಲ್ಪಟ್ಟ ಎಲ್ಲರೂ ಸ್ಕೂಬಾ ಡೈವಿಂಗ್ ನಡೆಸಬಹುದಾಗಿದ್ದು, ಐವರು ನುರಿತ ತರಬೇತು ದಾರರು ಲಭ್ಯವಿದ್ದಾರೆ. ಡೈವಿಂಗ್ ಮಾಡಲು ಅಗತ್ಯವಿರುವ ಜೀವರಕ್ಷಕ, ಆಮ್ಲಜನಕದ ಸಿಲಿಂಡರ್, ಮೀನ ಪಾದ ಸಹಿತವಾಗಿ ಎಲ್ಲ ಉಪಕರಣಗಳು ಲಭ್ಯವಿವೆ.
ಕೋಡಿಯಿಂದ ಬೋಟ್ ಮೂಲಕ ತೆರಳುವ ದಾರಿಯಲ್ಲಿ ಡಾಲ್ಫಿನ್‌ಗಳು ಕಾಣ ಸಿಗುತ್ತವೆ. ವಿಶ್ವ ವಿಖ್ಯಾತ ಮರವಂತೆ ಬೀಚನ್ನು ಸಮುದ್ರ ಕಡೆಯಿಂದ ನೋಡುವ ಅವಕಾಶ ಸಿಗಲಿದೆ. 1 ಗಂಟೆಗೂ ಹೆಚ್ಚು ಕಾಲ ಬೋಟ್ ಸಂಚಾರದ ಅನುಭವ ಸಿಗಲಿದೆ. ನಾಯ್ಕನಕಲ್ಲುವಿನಲ್ಲಿ ಬೃಹತ್ ಬಂಡೆಯಿದ್ದು, ಅಲ್ಲಿಂದ ಸ್ಕೂಬಾ ಡೈವಿಂಗ್ ನಡೆಯಲಿದೆ. ಕಡಲ ಒಡಲಲ್ಲಿರುವ ಬ್ಲೂ ಫಿಶ್, ಗ್ರೀನ್ ಫಿಶ್, ಸ್ಟೈಪ್ ಫಿಶ್, ಪ್ಯಾರೆಟ್ ಫಿಶ್, ಬಟರ್ ಫ್ಲೈ ಫಿಶ್, ಫ್ರಾಗ್ ಫಿಶ್, ಟ್ರಿಗರ್ ಫಿಶ್, ಕಟಲ್ ಫಿಶ್, ಲಯನ್ ಫಿಶ್, ಸ್ನಾಪರ್, ಬ್ಯಾನರ್ ಫಿಶ್, ಯೆಲ್ಲೊ ಟೈಲ್ ಸ್ನಾಪರ್ ಹೀಗೆ ಈವರೆಗೆ ನೋಡದಿರುವಂತಹ ವೈವಿಧ್ಯಮಯ ಕಡಲ ಜೀವಿಗಳನ್ನು ಕಾಣಬಹುದು. ಇನ್ನು ಆಕರ್ಷಕ ಕಲ್ಲು, ಸಸ್ಯಗಳನ್ನು ಸಹ ಗುರುತಿಸಲಾಗಿದೆ. ದರ ಎಷ್ಟು? ಎಷ್ಟು ಸಮಯ?
ಆರಂಭದಲ್ಲಿ ಡಿಸ್ಕವರ್ ಸ್ಕೂಬಾ ಡೈವಿಂಗ್ ಹಾಗೂ ಫನ್ ಡೈವಿಂಗ್ ಈ ಎರಡು ವಿಧದ ಡೈವಿಂಗ್ ಇರಲಿದೆ. ಈಗ 25ರಿಂದ 30 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ಮಾಡಬಹುದು. ಒಬ್ಬರಿಗೆ 2,999 ರೂ. ಉದ್ಘಾಟನಾ ಆಫರ್ ಆಗಿ ನಿಗದಿಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ದರ ಹೆಚ್ಚು ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಧದ ಸ್ಕೂಬಾ ಡೈವಿಂಗ್ ಸೇರ್ಪಡೆಯಾಗಲಿದೆ ಎನ್ನುವುದಾಗಿ ಇದರ ನಿರ್ವಹಣೆ ವಹಿಸಿಕೊಂಡಿರುವ ಮೆರಿಡಿಯನ್ ಅಡ್ವೆಂಚರ್‌ನ ವಿಶಾಖ ಹೆಬ್ಬಾರ್ ಕೊಲ್ಲೂರು ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಾಹಸಪ್ರಿಯರಿಗೆ, ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್‌ಗೆ ಅವಕಾಶ
ಒದಗಿಸುವ ನಿಟ್ಟಿನಲ್ಲಿ ಕುಂದಾಪುರದ ನಾಯ್ಕನಕಲ್ಲುವಿನಲ್ಲಿ ಡಿ. 14ರಂದು ಆರಂಭಿಸಲಾಗುತ್ತಿದೆ. ಡಿಸಿ ನೇತೃತ್ವದಲ್ಲಿ ಎಲ್ಲ ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಿ, ಅನುಮತಿ ನೀಡಲಾಗಿದೆ.
ಕುಮಾರ ಸಿ.ಯು., ಪ್ರವಾಸೋದ್ಯಮ
ಇಲಾಖೆ ಸಹಾಯಕ ನಿರ್ದೇಶಕ ಉಡುಪಿ *ಪ್ರಶಾಂತ್ ಪಾದೆ