Advertisement

ಪ.ಜಾತಿ, ಪಂಗಡದ ನಿರುದ್ಯೋಗಿಗಳಿಗೆ “ಸಮೃದ್ಧಿ’ಯೋಜನೆ 

06:00 AM Oct 31, 2018 | Team Udayavani |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ 800 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಖಾಸಗಿ ಸಹಭಾಗಿತ್ವದೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ “ಸಮೃದ್ಧಿ’ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Advertisement

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 10,600 ಫ‌ಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಬೃಹತ್‌ ಯೋಜನೆ ಇದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಹಾಗೂ ಕನಿಷ್ಠ 10 ವರ್ಷ ಅನುಭವ ಹೊಂದಿರುವ ಖಾಸಗಿ ಹಾಗೂ ಕಾರ್ಪೋರೇಟ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವುಗಳಲ್ಲಿ ಅಭ್ಯರ್ಥಿಗಳಿಗೆ ಮೂಲ ತರಬೇತಿ ಕೊಡಿಸಿ ಆನಂತರ ಶಾಖೆ ತೆರೆಯಲು, ನಿರ್ವಹಣೆ ಮಾಡಲು ಅಗತ್ಯ ಹಣಕಾಸು ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪ್ರತಿಷ್ಠಿತ ಕಂಪನಿಗಳಾದ ಬಾಟಾ, ನೀಲಗಿರೀಸ್‌, ಹಟ್ಟಿ ಕಾಫಿ, ಪ್ಯಾರಾಗಾನ್‌, ಮೇರು, ವೋಲ, ಬಿಗ್‌ ಬಜಾರ್‌, ಸ್ವೀಗಿ ಸೇರಿ 60ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ಬಹುತೇಕ ಎಲ್ಲವೂ ಒಪ್ಪಿಗೆ ಸೂಚಿಸಿವೆ. ಈಗಾಗಲೇ 30 ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಮಾಡಿವೆ ಎಂದು ತಿಳಿಸಿದರು.

ಮೊದಲು ಪರಿಶಿಷ್ಟ ನಿರುದ್ಯೋಗಿಗಳಿಂದ ಯೋಜನೆಗೆ ಆರ್ಜಿ ಅಹ್ವಾನಿಸಲಾಗುವುದು. ಅರ್ಜಿ ಸಲ್ಲಿಸಿ ಅರ್ಹತೆ ಪಡೆದ ನಂತರ ಒಪ್ಪಂದ ಮಾಡಿಕೊಂಡಿರುವ ಕಂಪನಿಗೆ ತರಬೇತಿಗೆ ಕಳುಹಿಸಲಾಗುತ್ತದೆ. ಅಲ್ಲಿ ಉತ್ತಮವಾಗಿ ತರಬೇತಿ ಪಡೆದು ಪ್ರಮಾಣ ಪತ್ರ ತರುವ ಅಭ್ಯರ್ಥಿಗಳಿಗೆ ಉದ್ಯಮ ಆರಂಭಿಸುವುದಕ್ಕೆ 10 ಲಕ್ಷ ರೂ. ವರೆಗೂ ಅನುದಾನ ನೀಡಲಾಗುತ್ತದೆ ಎಂದು ವಿವರಿಸಿದರು.

ಈ ಯೋಜನೆಯಿಂದ ಖಾಸಗಿ ಕಂಪನಿಗಳ ಉದ್ಯಮ ವ್ಯಾಪ್ತಿಯು ಹೆಚ್ಚಾಗುವುದರಿಂದ ಅಭ್ಯರ್ಥಿಯ ತರಬೇತಿ ವೆಚ್ಚವನ್ನು ಕಂಪನಿಗಳೇ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಇಲಾಖೆ ವತಿಯಿಂದ ನೀಡುತ್ತಿರುವ ಸಬ್ಸಿಡಿ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹೀಗಾಗಿ, ಯಾವುದೇ ನ್ಯೂನತೆ ಇಲ್ಲದಂತೆ ಸಮೃದ್ಧಿ ಯೋಜನೆ ರೂಪಿಸಲಾಗಿದ್ದು, ಪರಿಶಿಷ್ಟ ನಿರುದ್ಯೋಗಿ ಯುವಜನತೆ ಹೆಚ್ಚಿನ ಅನುಕೂಲವಾಗಲಿದೆ. ಒಟ್ಟಾರೆ ಮಂಜೂರಾತಿಯಲ್ಲಿ ಮಹಿಳೆ ಯರು, ವಿಕಲ ಚೇತನರು, ಅಂಧರು ಹಾಗೂ
ಅಂತರ್ಜಾತಿ ವಿವಾಹಿತ ಫ‌ಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.

Advertisement

ಏನೇನು ಅರ್ಹತೆ?: ಸಮೃದ್ಧಿ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾತ್ರ ಸೀಮೀತವಾಗಿದ್ದು, ಫ‌ಲಾನುಭವಿಗಳಾಗಲು ಈ ಅರ್ಹತೆ ಹೊಂದಿರಬೇಕು. ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. ಕನಿಷ್ಠ ಎಸ್‌ಎಸ್‌ ಎಲ್ ಸಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗೆ 21 ವಯಸ್ಸು ತುಂಬಿರಬೇಕು ಹಾಗೂ ಗರಿಷ್ಠ 50 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂ ಮೀರಿರಬಾರದು.ಅಭ್ಯರ್ಥಿಯ ಮೆರಿಟ್‌ ಹಾಗೂ
ವಯಸ್ಸನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. ನ.7 ರಿಂದ ಅರ್ಜಿ ಆರಂಭ: ನ.7ರಿಂದ
www.kalyanakendra.com ನಲ್ಲಿ ಅರ್ಜಿಗಳು ಲಭ್ಯವಾಗಲಿದ್ದು, ಎಲ್ಲ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ
ಕಾಲಾವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next