ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸರಕಾರಿ ಕೆಲಸದ ಗ್ರೂಪ್ “ಎ’ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ತರಲಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಹೇಳಿದೆ. ಅಲ್ಲದೆ ಇದಕ್ಕೆ “ನೀವೇ ಏನಾದರೂ ಮಾಡಿ’ ಎಂದೂ ಕೇಂದ್ರ ಕೇಳಿಕೊಂಡಿದೆ.
ಸರಕಾರಿ ಉದ್ಯೋಗಗಳಲ್ಲಿ ಎಸ್‌ಸಿ,ಎಸ್‌ಟಿ ಉದ್ಯೋಗಿಗಳಿಗೆ ಬಡ್ತಿ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಈ ರೀತಿ ಹೇಳಿದೆ.
“ವರದಿಗಳ ಪ್ರಕಾರ ಎ ವರ್ಗದಲ್ಲಿ ಆ ಸಮುದಾಯದವರ ಪ್ರಾತಿನಿಧ್ಯ ಕಡಿಮೆಯಿದೆ. ಅದನ್ನು ಸರಿಪಡಿಸುವ ಬದಲು “ಬಿ, ಸಿ ವರ್ಗ’ದಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಪ್ರಾತಿನಿಧ್ಯ ನೀಡುವ ಬಗ್ಗೆಯೇ ಗಮನ ಹರಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲ ಕೆ.ಕೆ.ವೇಣುಗೋಪಾಲ್, “ಎ ವರ್ಗಕ್ಕೆ ಭಡ್ತಿ ಅವರ ಕೆಲಸವನ್ನು ಆಧರಿಸಿರುತ್ತದೆ. ಇಲ್ಲಿ ಕಾರ್ಯ ಕ್ಷಮತೆಯನ್ನು ನೋಡಲಾಗುತ್ತದೆಯೇ ಹೊರತು ಹಿಂದುಳಿದವರು ಎನ್ನುವ ಪ್ರಶ್ನೆ ಬರುವುದಿಲ್ಲ.
ಹಾಗಾಗಿ ಈ ವರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಚ್ಚಿಲ್ಲ. ಹೀಗಾಗಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸಂಬಂಧಿಸಿ ನೀವೇ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಲೆ ಏರಿಳಿತದಿಂದ ತಂಬಾಕು ಬೆಳೆಗಾರ ಸಂಕಷ್ಟದಲ್ಲಿದ್ದಾನೆ : ಶಾಸಕ ಎಚ್.ಪಿ.ಮಂಜುನಾಥ್
ಇದಕ್ಕೆ ಸುಪ್ರೀಂ ನ್ಯಾಯಪೀಠ, ನಾವು ಒಬಿಸಿಗಳಿಗೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಏಕೆಂದರೆ ಈ ಪ್ರಕರಣ ಎಸ್ಸಿ, ಎಸ್ಟಿಗಳ ಭಡ್ತಿಗೆ ಸಂಬಂಧಿಸಿದ್ದು ಎಂದು ಹೇಳಿದೆ.