ವಾಷಿಂಗ್ಟನ್: ಡೆಸ್ಕ್ಟಾಪ್‌ನಲ್ಲಿ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್, ಹೊಸ ಫೀಚರ್ “ಸ್ಕ್ರೀನ್ ಲಾಕ್’ ಅನ್ನು ಪರಿಚಯಿಸುತ್ತಿದೆ.
ಭದ್ರತೆ ಹೆಚ್ಚಿಸುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್ ಓಪನ್ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ಟಾಪ್‌ನಲ್ಲಿ ವಾಟ್ಸ್‌ಆ್ಯಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಆದರೆ ಈ “ಸ್ಕ್ರೀನ್ ಲಾಕ್’ ಫೀಚರ್ ಬಳಕೆದಾರರಿಗೆ ಐಚ್ಛಿಕ ಆಯ್ಕೆಯಾಗಿದೆ.
ಸ್ಕ್ರೀನ್ ಲಾಕ್ ಪಾಸ್‌ವರ್ಡ್ ಬೇಕೇ ಅಥವಾ ಬೇಡವೇ ಎಂಬುದನ್ನು ಬಳಕೆದಾರರು ನಿರ್ಧರಿಸಬಹುದು. ಒಂದು ವೇಳೆ ಬಳಕೆದಾರರು ಪಾಸ್‌ವರ್ಡ್ ಮರೆತು ಹೋದರೆ, ಡೆಸ್ಕ್ಟಾಪ್‌ನಲ್ಲಿ ವಾಟ್ಸ್‌ಆ್ಯಪ್ ಲಾಗ್‌ಔಟ್ ಮಾಡಿ, ನಂತರ ಪುನಃ ಲಾಗ್‌ಇನ್ ಆಗಬೇಕಾಗುತ್ತದೆ ಎಂದು ಕಂಪನಿ ವಿವರಿಸಿದೆ.