ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯು ಬುಧವಾರ ಮುಂಜಾನೆ 3 ಗಂಟೆವರೆಗೂ ನಡೆದಿದೆ. ಬಹುತೇಕ 163 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹಲವರಿಗೆ ಚುನಾವಣೆಗೆ ಸಜ್ಜಾಗುವಂತೆಯೂ ಸಭೆಯಲ್ಲಿಯೇ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಡಿಕೆಶಿ ನಿವಾಸದಲ್ಲಿ ಉಪಾಹಾರ
ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಒಗ್ಗಟ್ಟಿಲ್ಲ ಹಾಗೂ ಹೊಂದಾಣಿಕೆ ಇಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿ ಅವರಿಬ್ಬರ ನಡುವೆ ತೇಪೆ ಹಾಕುವ ಪ್ರಯತ್ನ ಇನ್ನೂ ಮುಂದುವರಿದಿದೆ.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಸಂಸದ ಡಿ.ಕೆ.ಸುರೇಶ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್, ಕೆಪಿಸಿಸಿ ಕಾರ್ಯದರ್ಶಿ ವಿಜಯ ಮುಳುಗುಂದ್ ಹಾಗೂ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಭಾಗವಹಿಸಿದ್ದರು. ಆರಂಭದಲ್ಲಿ ಡಿ.ಕೆ.ಸುರೇಶ್ ನಾಯಕರನ್ನು ಬರ ಮಾಡಿಕೊಂಡರು.