Advertisement

ಪ್ರಸ್ತಾವನೆ ಪರಿಶೀಲನೆಗೆ “ಸ್ಕ್ರೀನಿಂಗ್‌ ಕಮಿಟಿ’

06:46 AM Mar 13, 2019 | |

ಬೆಂಗಳೂರು: ಲೋಕಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆ ವಿವಿಧ ಇಲಾಖೆಗಳ ತುರ್ತು ಪ್ರಸ್ತಾವನೆಗಳ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ “ಸ್ಕ್ರೀನಿಂಗ್‌ ಕಮಿಟಿ’ ರಚಿಸುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

Advertisement

ಈ ಕುರಿತು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸತ್ತೋಲೆ ಹೊರಡಿಸಿರುವ ಚುನಾವಣಾ ಆಯೋಗ, ಸ್ಕ್ರೀನಿಂಗ್‌ ಕಮಿಟಿ ರಚಿಸಿ, ಅದರ ವಿವರಗಳನ್ನು ಮಾ.14ರೊಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸುವಂತೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿರುವ ಈ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಪ್ರಸ್ತಾವನೆಗಳು ಇರುವ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಹಾಗೂ ಸಾಮಾನ್ಯ ಆಡಳಿತ ಹಾಗೂ ಸಮನ್ವಯಕ್ಕೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು ಸದಸ್ಯರಾಗಿರಬೇಕು. ತಕ್ಷಣ ಸಮಿತಿ ರಚಿಸಿ ಕಾರ್ಯಾರಂಭ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇಲಾಖೆಗಳಿಂದ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು “ಚುನಾವಣಾ ಮಾದರಿ ನೀತಿ ಸಂಹಿತೆ’ಯ ಮಾರ್ಗಸೂಚಿಗಳ ಆಧಾರದಲ್ಲಿ ಕೂಲಂಕುಷವಾಗಿ ಪರಿಶೀಲಿಸಿ, ಆ ಪ್ರಸ್ತಾವನೆಯ ತುರ್ತು ಏನಿದೆ ಮತ್ತು ಎಷ್ಟಿದೆ. ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಯೋಜನೆ ಅಥವಾ ಕಾರ್ಯಕ್ರಮದ ಅನುಷ್ಠಾನವನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾಕೆ ತಡೆಹಿಡಿಯಬಾರದು ಅಥವಾ ಮುಂದೂಡಬಾರದು ಎಂಬ ಬಗ್ಗೆ ಸಮರ್ಥ ಕಾರಣಗಳನ್ನು ನೀಡಿ ಟಿಪ್ಪಣಿಯೊಂದಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಬೇಕು.

ಪ್ರಸ್ತಾವನೆ ನೇರ ಕಳಿಸುವಂತಿಲ್ಲ: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಕೆಲವೊಂದು ತುರ್ತು ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಬೇಕು ಎಂದು ಆಯಾ ಇಲಾಖೆಗಳು ನೇರವಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತಿದ್ದವು. ಆದರೆ, ಯಾವುದೇ ಇಲಾಖೆಯ ತನಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ನೇರವಾಗಿ ಚುನಾವಣಾ ಆಯೋಗಕ್ಕೆ ಕಳಿಸುವಂತಿಲ್ಲ. ಬದಲಿಗೆ ಅದನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿಗೆ ಸಲ್ಲಿಸಬೇಕು. 

Advertisement

ಅದನ್ನು ಪರಿಶೀಲಿಸಿ ಕಮಿಟಯು ಪ್ರಸ್ತಾವನೆಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಕಳಿಸಿಕೊಡಬೇಕು. ಅವರು ಆ ಪ್ರಸ್ತಾವನೆಯನ್ನು ಕಮಿಟಿಯ ಟಿಪ್ಪಣಿಯೊಂದಿಗೆ ಆಯೋಗಕ್ಕೆ ರವಾನಿಸಬೇಕು. ಅದೇ ರೀತಿ ಆಯಾ ಇಲಾಖೆಗಳು ಪ್ರಸ್ತಾವನೆಯ ಮೂಲ ಕಡತವನ್ನೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನೀಡುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತನ್ನ ಸುತ್ತೋಲೆಯಲ್ಲಿ ತಾಕೀತು ಮಾಡಿದೆ.

ಅನುದಾನ ಬಿಡುಗಡೆಗೆ ಶರತ್ತು: ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂಸದರ (ಲೋಕಸಭೆ, ರಾಜ್ಯಸಭೆ) ಹಾಗೂ ಶಾಸಕರ (ವಿಧಾನಸಭೆ, ವಿಧಾನಪರಿಷತ್‌) ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಡಿ ಹೊಸದಾಗಿ ಅನುದಾನ ಬಿಡುಗಡೆ ಮಾಡುವಂತಿಲ್ಲ. ನೀತಿ ಸಂಹಿತೆ ಜಾರಿಗೆ ಬರುವುದಕ್ಕಿಂತ ಮುಂಚೆ ಕಾಮಗಾರಿಗಳಿಗೆ ಕಾರ್ಯಾದೇಶಗಳನ್ನು ನೀಡಿದ್ದು, ಆದರೆ ಅಂತಹ ಕಾಮಗಾರಿಗಳು ಇನ್ನೂ ಆರಂಭವಾಗದಿದ್ದರೆ ಅವುಗಳನ್ನು ಆರಂಭಿಸದೆ ಚುನಾವಣೆ ಪೂರ್ಣಗೊಳ್ಳುವವರೆಗೆ ತಡೆ ಹಿಡಿಯಬೇಕು.

ಒಂದೊಮ್ಮೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದರೆ ಅದನ್ನು ಮುಂದುವರಿಸಲು ಯಾವುದೇ ಅಭ್ಯಂತರವಿಲ್ಲ. ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಈಗಾಗಲೇ ಯೋಜನೆಗೆ ಒಪ್ಪಿಗೆ ಸಿಕ್ಕು, ಹಣ ಬಿಡುಗಡೆ ಆಗಿ ಸಾಮಗ್ರಿಗಳನ್ನು ಖರೀದಿಸಿ ಅವುಗಳನ್ನು ಕಾಮಗಾರಿಯ ಸ್ಥಳಕ್ಕೆ ಸಾಗಿಸಿದ್ದರೆ, ನಿಗದಿಯಂತೆ ಅಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. 

“ತುರ್ತು ಪ್ರಸ್ತಾವನೆಗಳ ಪರಿಶೀಲನೆಗೆ ಸ್ಕ್ರೀನಿಂಗ್‌ ಕಮಿಟಿ ರಚಿಸುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಸೂಚನೆ ಬಂದಿದೆ. ಅದರಂತೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’.
-ಟಿ.ಎಂ. ವಿಜಯಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next