ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ನಿರ್ಧಾರದ ಬಗ್ಗೆ ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದೆ.
ಜಮ್ಮು-ಕಾಶ್ಮೀರ 370ನೇ ಕಲಂನಿಂದಾಗಿ ಸಾಕಷ್ಟು ನಲುಗಿಹೋಗಿದೆ. ಕಳೆದ 70 ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಏನೇನು ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಮಗೆ ಐದು ವರ್ಷಗಳ ಕಾಲಾವಕಾಶ ಕೊಡಿ. ಕಾಶ್ಮೀರ ಎಂದೆಂದಿಗೂ ಸ್ವರ್ಗವಾಗಿಯೇ ಇರಲಿದೆ. ಈ ವಿಷಯದಲ್ಲಿ ಕಾಶ್ಮೀರ ಜನತೆಗೆ ಭರವಸೆ ನೀಡುತ್ತೇನೆ ಎಂದು ಅಮಿತ್ ಶಾ ಹೇಳಿದರು.
ರಾಜ್ಯಸಭೆಯಲ್ಲಿ ಶಾ ಮಂಡಿಸಿದ ಜಮ್ಮು ಮತ್ತು ಕಾಶ್ಮೀರ ಮೀಸಲು(ಎರಡನೇ ತಿದ್ದುಪಡಿ) ಮಸೂದೆ 2019 ಅಂಗೀಕಾರಗೊಂಡಿದೆ. ಈ ಮಸೂದೆಯಿಂದ ಶೇ.10ರಷ್ಟು ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಕ್ಕೆ ಅನುಕೂಲಕರವಾಗಲಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನೇ ವಿಧಿಯನ್ನು ರದ್ದುಪಡಿಸಿದ್ದರಿಂದ ಕಾಶ್ಮೀರಕ್ಕೆ ಅನುಕೂಲವಾಗಲಿದೆ ಎಂಬುದನ್ನು ದೇಶದ ಜನರು ನಂಬಿದ್ದಾರೆ. ನೆಹರು ಅವರ ನಿರ್ಧಾರದಿಂದಾಗಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕುವಂತಾಯ್ತು. ನಾವು ಕೂಡಾ ಹಲವು ಹೊಸ ರಾಜ್ಯಗಳನ್ನು ಘೋಷಿಸಿದ್ದೇವೆ. ನೀವು(ಕಾಂಗ್ರೆಸ್) ಕೂಡಾ ತೆಲಂಗಾಣ, ಆಂಧ್ರಪ್ರದೇಶವನ್ನು ವಿಭಜಿಸಿದ್ದೀರಿ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಶಾ ತಿರುಗೇಟು ನೀಡಿದರು.
ಜಮ್ಮು ಕಾಶ್ಮೀರ ಎಲ್ಲಿಯವರೆಗೆ ಕೇಂದ್ರಾಡಳಿತ ಪ್ರದೇಶವಾಗಿರಲಿದೆ ಎಂದು ಹಲವು ಸಂಸದರು ಪ್ರಶ್ನಿಸಿದ್ದಾರೆ, ಯಾವಾಗ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತದೆಯೋ ಆಗ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆ ನೀಡುತ್ತೇನೆ. ಆ ಸೂಕ್ತ ಸಮಯ ಬರುತ್ತದೆ. ಜಮ್ಮು-ಕಾಶ್ಮೀರವನ್ನು ರಾಜ್ಯವನ್ನಾಗಿ ಮಾಡಲು ನಾವು ತಯಾರಾಗಿದ್ದೇವೆ. ಇದು ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಆದರೆ ಇದು ಮತ್ತೊಮ್ಮೆ ರಾಜ್ಯವಾಗಲಿದೆ ಎಂದು ಮಾರ್ಮಿಕ ಶಾ ಉತ್ತರಿಸಿದ್ದಾರೆ.