Advertisement

BMTC: ಗುಜರಿ ಬಸ್‌ಗಳು ಈಗ ಭೋಜನ ಬಂಡಿ;

02:35 PM Feb 23, 2024 | Team Udayavani |

ಬೆಂಗಳೂರು: ಈ ಹಿಂದೆ ಕೆಎಸ್‌ಆರ್‌ಟಿಸಿಯ ಗುಜರಿ ಬಸ್‌ಗಳು “ಹೈಟೆಕ್‌’ ಸ್ತ್ರೀಶೌಚಾಲಯಗಳಾಗಿ ಮಾರ್ಪಟ್ಟಿದ್ದವು. ಅದರ ಮುಂದುವರಿದ ಭಾಗವಾಗಿ ಬಿಎಂಟಿಸಿಯ ಗುಜರಿ ಬಸ್‌ಗಳು ಈಗ “ಭೋಜನ ಬಂಡಿ’ಗಳಾಗಿ ರೂಪುಗೊಂಡಿವೆ.

Advertisement

ಈ ನಿಟ್ಟಿನಲ್ಲಿ ಬಿಎಂಟಿಸಿಯು ಗುಜರಿ ಬಸ್‌ ಗಳನ್ನು “ಕ್ಯಾಂಟೀನ್‌’ಗಳಾಗಿ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಸಂಸ್ಥೆಯಲ್ಲಿ ಹತ್ತು ಲಕ್ಷ ಕಿ.ಮೀ.ಗೂ ಹೆಚ್ಚು ಕಾರ್ಯಾಚರಣೆ ಮಾಡಿ ಗುಜರಿ ಸೇರಿರುವ ಬಸ್‌ಗಳನ್ನು ಒಂದೊಂದಾಗಿ ಭೋಜನ ಬಂಡಿಗಳನ್ನಾಗಿ ಮಾರ್ಪಡಿಸಲು ಮುಂದಾಗಿದೆ. ಈಗ ಪ್ರಾಯೋಗಿಕವಾಗಿ 10.64 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡಿದ ಬಸ್‌ ವೊಂದಕ್ಕೆ ಕ್ಯಾಂಟೀನ್‌ ಸ್ಪರ್ಶ ನೀಡಲಾಗಿದೆ.

ದಾಸನಪುರದ ಕೇಂದ್ರೀಯ ಘಟಕದಲ್ಲಿ ಈ ವಿನೂತನ ಬಂಡಿಯನ್ನು ರೂಪಿಸಲಾಗಿದೆ. ವರ್ಕ್‌ಶಾಪ್‌ನ ವ್ಯವಸ್ಥಾಪಕ ಆರ್‌.ಆನಂದಕುಮಾರ್‌ ನೇತೃತ್ವದಲ್ಲಿ ನಿರ್ಮಿಸಲಾದ ಈ ಬಂಡಿಯಲ್ಲಿ ಕಾರ್ಮಿಕರು ತಿಂಡಿ, ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಇದರಲ್ಲಿ ಕುಳಿತುಕೊಳ್ಳಲು ಆರಾಮದಾಯಕ ಆಸನಗಳು ಮತ್ತು ಟೇಬಲ್‌ ಗಳು, ಫ್ಯಾನ್‌, ಕೈತೊಳೆಯಲು ವಾಶ್‌ಬೇಸಿನ್‌, ಚಾವಣಿಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಬಂಡಿಗೆ ನೀಲಿ ಬಣ್ಣ ಬಳಿಯಲಾಗಿದ್ದು, ಹೊರಗಡೆ ಭೋಜನ ಬಂಡಿ- ಬನ್ನಿ ಕುಳಿತು ಊಟ ಮಾಡೋಣ ಎಂದು ಬರೆಯಲಾಗಿದೆ. ಇದು ಸಂಚರಿಸುವುದಿಲ್ಲ. ಯಾವುದಾದರೂ ಒಂದು ಘಟಕದಲ್ಲಿ ಕ್ಯಾಂಟೀನ್‌ ರೂಪದಲ್ಲಿ ನಿಲ್ಲಿಸಲಾಗುತ್ತದೆ. ಪ್ರಸ್ತುತ ಸಂಸ್ಥೆಯ ಯಾವುದೇ ಡಿಪೋಗಳಲ್ಲಿ ಕ್ಯಾಂಟೀನ್‌ಗಳಿಲ್ಲ. ಪ್ರಾಯೋಗಿಕವಾಗಿ ಪರಿಚಯಿಸುತ್ತಿರುವ ಈ ಭೋಜನ ಬಂಡಿ ಯಶಸ್ವಿಯಾದರೆ, ಉಳಿದೆಡೆಯೂ ಈ ಮಾದರಿ ಅನುಸರಿಸಲು ಉದ್ದೇಶಿಸಲಾಗಿದೆ.

Advertisement

ಸದ್ಯಕ್ಕೆ ಪೀಣ್ಯ ಅಥವಾ ಯಶವಂತಪುರ ಡಿಪೋದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. “ಬಿಎಂಟಿಸಿಯಿಂದ ಕ್ಯಾಂಟೀನ್‌ ಶುರುಮಾಡುವ ಯಾವುದೇ ಆಲೋಚನೆ ಇಲ್ಲ.

ಗುತ್ತಿಗೆ ನೀಡುವ ಚಿಂತನೆ ಇದೆ. ಸದ್ಯಕ್ಕೆ ಸಂಸ್ಥೆ ಸಿಬ್ಬಂದಿಗೆ ಇಲ್ಲಿ ಊಟ-ತಿಂಡಿ ಒದಗಿಸುವ ಚಿಂತನೆ ಇದೆ’ ಎಂದೂ ಹೇಳಿದರು. ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್‌ ಉಪಸ್ಥಿತರಿದ್ದರು.

ತಾಂತ್ರಿಕ ಸಿಬ್ಬಂದಿ ಕೌಶಲ್ಯಕ್ಕೆ ಸಂಸ್ಥೆಯ ಎಂಡಿ ಶ್ಲಾಘನೆ

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್‌.ರಾಮಚಂದ್ರನ್‌ ಗುರುವಾರ ನೂತನ ಭೋಜನ ಬಂಡಿಯನ್ನು ವೀಕ್ಷಿಸಿ, ತಾಂತ್ರಿಕ ಸಿಬ್ಬಂದಿಯ ಕ್ರಿಯಾತ್ಮಕ ಕೌಶಲ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇಂತಹ ಹೊಸ ಹೊಸ ಪ್ರಯತ್ನಗಳನ್ನು ಮಾಡುವಂತೆ ಪ್ರೋತ್ಸಾಹಿಸಿದರು.

■ ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next