Advertisement

ಪಡಿತರ ಧಾನ್ಯ ತರಲು ಹರಸಾಹಸ; ಉಪಕೇಂದ್ರ ಮಾಡಲು ಗ್ರಾಮಸ್ಥರ ಒತ್ತಾಯ

05:30 PM Jun 01, 2023 | Team Udayavani |

ದೋಟಿಹಾಳ: ತೋನಸಿಹಾಳ ಗ್ರಾಮದ ಮತ್ತು ತಾಂಡಾದ ಜನರು ಪ್ರತಿ ತಿಂಗಳ ಪಡಿತರ ಧಾನ್ಯ ಪಡೆಯಲು ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಗೋತಗಿ ಗ್ರಾಮಕ್ಕೆ ಹೋಗಬೇಕು. ಪಡಿತರ ಪಡೆಯಲು ಗೋತಗಿ ಗ್ರಾಮಕ್ಕೆ ಹೋಗಲು ಸರಿಯಾದ ಸಾರಿಗೆ ಸೌಲಭ್ಯವಿಲ್ಲದಿರುವುದರಿಂದ ತೋಸಿಹಾಳ ತಾಂಡಾ ಮತ್ತು ಗ್ರಾಮದ ಜನರು ಗೋತಗಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಪಡಿತರ ಧಾನ್ಯ ತರುವಂತಾಗಿದೆ.

Advertisement

ಎರಡು ಗ್ರಾಮದಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಬದುಕಿಗೆ ಕೂಲಿಯನ್ನೇ ಅವಲಂಬಿಸಿದ್ದಾರೆ. ಇಲ್ಲಿಯ ಜನ ಪ್ರತಿ ತಿಂಗಳ ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ದಿನವೆಲ್ಲ ಕಳೆಯಬೇಕಾಗಿದೆ. ಇದರಿಂದ ವೃದ್ಧರು, ಮಹಿಳೆಯರು, ಮಕ್ಕಳು ದೂರದ ಊರಿಗೆ ಹೋಗಿ ಪಡಿತರ ತರಲು ಪರದಾಡಬೇಕಾಗಿದೆ. ತೋನಸಿಹಾಳ ಗ್ರಾಮಸ್ಥರು ಗೋತಗಿ ಗ್ರಾಮಕ್ಕೆ ಹೋಗಿ, ಬರಲು ಸರಿಯಾದ ವಾಹನದ ವ್ಯವಸ್ಥೆಯಿಲ್ಲ. ಕೆಲವರು ಬೈಕ್‌ಗಳ ಮೂಲಕ ಪಡಿತರ ಧಾನ್ಯ ತಂದರೆ, ಇನ್ನೂ ಕೆಲವರು ನಡೆದುಕೊಂಡು ಹೋಗಿ ಧಾನ್ಯ ತರುತ್ತಾರೆ. ಈ ತೋನಸಿಹಾಳ ತಾಂಡಾ ಮತ್ತು ಗ್ರಾಮದ ಪಡಿತರ ಕಾರ್ಡ್‌ಗಳನ್ನು ಗೋತಗಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜೋಡಿಸಲಾಗಿದೆ. ಹೀಗಾಗಿ ಇವರು ಗೋತಗಿ ಗ್ರಾಮಕ್ಕೆ ಹೋಗಿ ಬರಬೇಕು.

ಆಹಾರ ಇಲಾಖೆ ನಿಯಮದ ಪ್ರಕಾರ ಸುಮಾರು 500ಕ್ಕೂ ಹೆಚ್ಚು ಪಡಿತರ ಕಾರ್ಡ್‌ಗಳು ಇದ್ದರೆ ಮಾತ್ರ ಅಲ್ಲಿ ಒಂದು ನ್ಯಾಯಬೆಲೆ ಅಂಗಡಿ ಆರಂಭಿಸಲು ಅವಕಾಶವಿದೆ. ಆದರೇ ತೋನಸಿಹಾಳ ಗ್ರಾಮ ಮತ್ತು ತಾಂಡಾದಲ್ಲಿ 326 ಪಡಿತರ ಕಾರ್ಡ್‌ಗಳಿವೆ. ಹೀಗಾಗಿ ಈ ಎರಡು ಗ್ರಾಮದ ಜನರ ಪಡಿತರ ಕಾರ್ಡ್‌ಗಳನ್ನು ಅನಿವಾರ್ಯವಾಗಿ ಗೋತಗಿ ಗ್ರಾಮಕ್ಕೆ ಸೇರಿಸಿದ್ದಾರೆ.

ತೋನಸಿಹಾಳ ತಾಂಡಾ ಮಹಿಳೆ ಲಕ್ಷ್ಮೀ ರಾಠೊಡ ಅವರು ಮಾತನಾಡಿ, ಪ್ರತಿ ತಿಂಗಳ ಪಡಿತರ ಧಾನ್ಯ ತರಲು ನಾವು ಒಂದು ದಿನ ಕೂಲಿ ಕೆಲಸ ಬಿಟ್ಟು ಹೋಗಬೇಕು. ಜೀವನ ನಡೆಸಲು ಕೂಲಿ ಕೆಲಸ ಅನಿವಾರ್ಯ. ಆದರೂ ಒಂದು ದಿನ ಕೂಲಿ ಕೆಲಸ ಬಿಟ್ಟು ಪಡಿತರ ಅಕ್ಕಿ ತರಲು ನಡೆದುಕೊಂಡು ಹೋಗುತ್ತೇವೆ. ಮರಳಿ ಬರುವಾಗ ಯಾವುದಾದರೂ ವಾಹನ ಸಿಕ್ಕರೆ ವಾಹನದ ಮೂಲಕ ಬರುತ್ತೇವೆ. ಇಲ್ಲದಿದ್ದರೆ ತಲೆ ಮೇಲೆ ಚೀಲ ಹೊತ್ತಕೊಂಡು ಬರಬೇಕು ಎಂದು ಹೇಳಿದರು.

ತೋನಸಿಹಾಳ ಗ್ರಾಮ ಮತ್ತು ತಾಂಡಾ ಸೇರಿ ಸುಮಾರು 320ಕ್ಕೂ ಹೆಚ್ಚು ಪಡಿತರ ಕುಟುಂಬಗಳಿವೆ. ನಮ್ಮ ಗ್ರಾಮದಲ್ಲಿ ಒಂದು ನ್ಯಾಯ ಬೆಲೆ ಅಂಗಡಿ ಆರಂಭವಾದರೇ ಒಳ್ಳೆಯದು ಎಂದು ತೋನಸಿಹಾಳ ತಾಂಡಾದ ಮಹಿಳೆಯರು ತಿಳಿಸಿದರು.

Advertisement

ಕುಷ್ಟಗಿಯಿಂದ ಗೋತಗಿ ನ್ಯಾಯಬೆಲೆ ಅಂಗಡಿ ಹೋಗುವ ಪಡಿತರ ಧಾನ್ಯದ ಸರಬರಾಜು ಮಾಡುವ ವಾಹನ ತೋನಸಿಹಾಳ ಮಾರ್ಗವಾಗಿ ಗೋತಗಿ ಗ್ರಾಮಕ್ಕೆ ಹೋಗುತ್ತದೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಒಂದು ಉಪಕೇಂದ್ರ ಪ್ರಾರಂಭಿಸಿದರೆ ಎರಡು ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಲೂಕಿನ ಗಡಿಭಾಗದ ಅನೇಕ ಹಳ್ಳಿಗಳಲ್ಲಿ ಇಂತಹ ಸ್ಥಿತಿ ಇದೆ. ಮೇಣಸಗೇರಿ ಮತ್ತು ಮೇಣಸಗೇರಿ ತಾಂಡಾ ಜನರು ಸೂಮಾರು 5 ಕಿ.ಮೀ. ದೂರದ ಕ್ಯಾದಿಗುಪ್ಪಿ ಗ್ರಾಮಕ್ಕೆ ಹೋಗುತ್ತಿದ್ದಾರೆ.

ತೋನಸಿಹಾಳ ಗ್ರಾಮದಲ್ಲಿ ಅಥವಾ ತಾಂಡಾದಲ್ಲಿಎರಡರಲ್ಲಿ ಒಂದು ಕಡೆ ನ್ಯಾಯಬೆಲೆ ಅಂಗಡಿ ಸ್ಥಾಪಿಸಬೇಕೆಂದು 2-3 ಬಾರಿ ಮಾಜಿ ತಾಪಂ ಸದಸ್ಯರು, ನಾನು ಭೇಟಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದುವರೆಗೂ ಯಾವುದೇ  ಪ್ರಯೋಜನವಾಗಿ. ಈಗ ಮತ್ತೊಮ್ಮೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತೇವೆ. ಇದರಿಂದ ನಮ್ಮ ಎರಡು ಗ್ರಾಮದ ಜನರಿಗೆ
ಒಳ್ಳೆಯದಾಗುತ್ತದೆ.
ಶೇಖಪ್ಪ ಸಾಂತಪ್ಪ ಪೂಜಾರ,
ಕೇಸೂರ ಗ್ರಾಪಂ ಅಧ್ಯಕ್ಷ

ತಾಲೂಕಿನ ಅನೇಕ ಹಳ್ಳಿಗಳಲ್ಲಿ ಇಂತಹ ಸ್ಥಿತಿ ಇದೆ. ತೋನಸಿಹಾಳ ಗ್ರಾಮ ಮತ್ತು ತಾಂಡಾದಲ್ಲಿ 326 ಪಡಿತರ ಕುಟುಂಬಗಳು ಇವೆ. ಗೋತಗಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಈ ಎರಡು ಗ್ರಾಮ ಬರುವುದರಿಂದ ಇದರಲ್ಲಿ ಒಂದು ಕಡೆ ಉಪಕೇಂದ್ರ ತೆರೆಯಲು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇವೆ.
ಚನ್ನಬಸಪ್ಪ ಹಟ್ಟಿ, ಆಹಾರ ಇಲಾಖೆ, ಕುಷ್ಟಗಿ

ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next