ತುಮಕೂರು: ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಶೇ. 100ರಷ್ಟು ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮನಾಥ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಕೃಷಿ, ಮಧುಗಿರಿಯ ಪಂಚಾ ಯತ್ ರಾಜ್ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಗಳು 2019-20ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ನಿಗದಿತ ಪ್ರಗತಿ ಸಾಧಿಸಿಲ್ಲ. ಕೂಡಲೇ ನಿಗದಿತ ಗುರಿಯನ್ನು ಸಾಧಿಸಬೇಕು ಎಂದರು.
ಪೂರ್ಣ ಪ್ರಗತಿ: ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡುತ್ತಾ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ, ಕೈಮಗ್ಗ ಮತ್ತು ಜವಳಿ ಇಲಾಖೆ, ಸಹಕಾರ ಇಲಾಖೆಗಳು ಪೂರ್ಣ ಪ್ರಮಾಣದ ಪ್ರಗತಿ ಸಾಧಿಸಿವೆ ಎಂದು ಹೇಳಿದರು.
ಕ್ರಿಯಾ ಯೋಜನೆ ರೂಪಿಸಿ: ಕೋವಿಡ್-19 ಸೋಂಕು ರೋಗವಿದೆ ಎಂದು ಪ್ರಗತಿ ಸಾಧಿ ಸದೆ ಅಧಿಕಾರಿಗಳು ಸುಮ್ಮನೆ ಕೂಡಬಾರದು. ಪ್ರಗತಿ ಕುಂಠಿತವಾಗದಂತೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕೆಂದು ನಿರ್ದೇಶಿಸಿ ದರು. ಪ್ರಸಕ್ತ ಸಾಲಿನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಅನುದಾನ ಬಿಡುಗಡೆ ಯಾಗಲಿದ್ದು, ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ ನಿಗದಿತ ಪ್ರಗತಿ ಸಾಧಿಸ ಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕುಂದುಕೊರತೆ ಸಭೆ ನಡೆಸಿ: ಜಿಲ್ಲೆಯಲ್ಲಿ ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ದಲಿತರ ಕುಂದುಕೊರತೆ ಸಭೆ ನಡೆಸಲು ಸೂಚನೆ ನೀಡಿದ್ದರೂ ನಿಗದಿತ ಸಮಯದಲ್ಲಿ ಸಭೆ ನಡೆಸಿರುವುದಿಲ್ಲ. ಕಳೆದ 2019ನೇ ಕ್ಯಾಲೆಂಡರ್ ವರ್ಷದಲ್ಲಿ ಶಿರಾ, ಕೊರಟಗೆರೆ, ಕುಣಿಗಲ್ ತಾಲೂಕುಗಳಲ್ಲಿ ಕೇವಲ ಒಂದೇ ಒಂದು ದಲಿತರ ಕುಂದು ಕೊರತೆ ಸಭೆ ನಡೆಸಲಾಗಿದೆ. ಸಭೆ ನಡೆಸದ ತಹಶೀಲ್ದಾರರಿಗೆ ಎಚ್ಚರಿಕೆ ನೋಟಿಸ್ ನೀಡಲು ಸೂಚನೆ ನೀಡಿದರು.
ಸಭೆಯಲ್ಲಿ ಸಫಾಯಿ ಕರ್ಮಚಾರಿಗಳ ರಾಜ್ಯ ಮಟ್ಟದ ಸದಸ್ಯ ಓಬಳೇಶ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್, ಸಮಿತಿ ಸದಸ್ಯ ಕದುರಪ್ಪ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನ ಬಸಪ್ಪ, ವಿವಿಧ ಉಪವಿಭಾಗಾಧಿಕಾರಿ ಅಜಯ್, ನಂದಿನಿ, ನಂದಿನಿದೇವಿ, ಎಲ್ಲಾ ತಾಲೂಕಿನ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇದ್ದರು.