ಮಡಿಕೇರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಗರದ ಅರಸು ಭವನದಲ್ಲಿ ಬುಧವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಭಾಗವಹಿಸುವಿಕೆಯಿಂದ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಬೆಳವಣಿಗೆಗೆ ಸಹಕಾರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾದ ಬಸವರಾಜು ಅವರು ಅಭಿಪ್ರಾಯಪಟ್ಟರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ 100 ವರ್ಷದ ಇತಿಹಾಸವಿದ್ದು, ಈ ಸಂಸ್ಥೆಯು ವಿಶ್ವಾದ್ಯಂತ 216 ರಾಷ್ಟ್ರಗಳಲ್ಲಿ ಶಾಖೆ ಹೊಂದಿದ್ದು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿಶೇಷವಾಗಿ ಮಕ್ಕಳಿಗೆ ಶಿಸ್ತು, ಸಂಯಮ, ದೇಶಭಕ್ತಿ, ಉದಾರ ಮನೋಭಾವ ಬೆಳೆಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿ ರುವುದರಿಂದ ಮಕ್ಕಳು ಹೆಚ್ಚು ಭಾಗವಹಿಸುವಂತಾಗಬೇಕು. ಪ್ರತಿ ಶಾಲಾ ಕಾಲೇಜು ಮಟ್ಟದಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ ಸಕ್ರೀಯವಾಗಿ ಭಾಗವಹಿಸುವಲ್ಲಿ ಗಮನ ಹರಿಸುವುದು ಉತ್ತಮ ಮತ್ತು ಸ್ಥಳೀಯವಾಗಿ ಪ್ರಶಸ್ತಿ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗುವಂತೆ ಅವರು ಸಲಹೆ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ದೇಶದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಭವಿಷ್ಯ ನಿರ್ಮಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಸಹಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೆಗೌಡ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮಾಸ್ಟರ್ ಉಷಾರಾಣಿ, ಭಾಸ್ಕರ್, ಜಿಲ್ಲಾ ಸಂಯೋಜಕರಾದ ದಮಯಂತಿ ಇತರರು ಹಾಜರಿದ್ದರು.