ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಶಿಸ್ತುಬದ್ಧ, ಕೌಶಲ ಯುತ ಬದುಕು ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆ ಮಾಡಲು ಸೂಕ್ತ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಹೇಳಿದರು.
ರವಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಿಲ್ಲಾಧಿಕಾರಿ ಬಂಗಲೆಯಲ್ಲಿ ಏರ್ಪಡಿಸಿದ ತೃತೀಯ ಸೋಪಾನ ಪ್ರಶಸ್ತಿ ಪತ್ರ ಪ್ರದಾನಗೈದು ಅವರು ಮಾತನಾಡಿದರು.
ಸುಂದರ ಬದುಕು ಹಾಗೂ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಸ್ತು, ಕೌಶಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಳ್ಳುವ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.
ಶಿಕ್ಷಕರಿಗೆ ಸ್ಕೌಟ್ಸ್ ಮೂಲ ತರಬೇತಿ: ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಪ್ರಸ್ತಾವನೆಗೈದು, ಜಿಲ್ಲೆಯಲ್ಲಿ 1 ಲಕ್ಷ ಮಕ್ಕಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರಿಸುವ ಗುರಿ ಹೊಂದಲಾಗಿದೆ. ಮಕ್ಕಳಲ್ಲಿ ಸ್ಕೌಟ್ಸ್ ಬಗ್ಗೆ ಆಸಕ್ತಿ ಮೂಡಿಸಲು ಅಂಗನವಾಡಿಯಿಂದಲೇ ತರಬೇತಿ ನೀಡಲಾಗುತ್ತಿದೆ. 50 ಶಿಕ್ಷಕರಿಗೆ ಬನ್ನೀಸ್ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿ ವಹಿಸಿ ಎಲ್ಲ ಶಾಲೆಗಳ ಶಿಕ್ಷಕರು ಕಡ್ಡಾಯವಾಗಿ ಸ್ಕೌಟ್ಸ್ ಮೂಲ ತರಬೇತಿ ಪಡೆಯಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಗೈಡ್ಸ್ ಜಿಲ್ಲಾ ಆಯುಕ್ತರಾದ ಐರಿನ್ ಡಿ’ಕುನ್ಹ , ಜಿಲ್ಲಾಧಿಕಾರಿ ಅವರ ತಂದೆ ನ್ಯಾ| ಷಣ್ಮುಗಂ ಹಾಗೂ ತಾಯಿ ಅಂಬಿಕಾ, ಶಾರದಾ ಆಚಾರ್, ವಸಂತ ರಾವ್ ಉಪಸ್ಥಿತರಿದ್ದರು.
ಸ್ಕೌಟ್ಸ್ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಯು.ಗೋಪಾಲಕೃಷ್ಣ ಭಟ್ ವಂದಿಸಿದರು. ಎಂ.ಜಿ. ಕಜೆ ಕಾರ್ಯಕ್ರಮ ನಿರೂಪಿಸಿದರು.