Advertisement

ಏಕದಿನ: ಇಂಗ್ಲೆಂಡ್‌ ವಿರುದ್ಧ  ಸ್ಕಾಟ್ಲೆಂಡ್‌ ವಿಕ್ರಮ

06:00 AM Jun 12, 2018 | |

ಎಡಿನ್‌ಬರ್ಗ್‌: ತನ್ನ ಏಕದಿನ ಚರಿತ್ರೆಯಲ್ಲಿ ಸ್ಕಾಟ್ಲೆಂಡ್‌ ತಂಡ ಇಂಗ್ಲೆಂಡ್‌ ವಿರುದ್ಧ ಮೊದಲ ಗೆಲುವು ಸಾಧಿಸಿದೆ. ರವಿವಾರ ರಾತ್ರಿ ಎಡಿನ್‌ಬರ್ಗ್‌ನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಪಡೆ 6 ರನ್ನುಗಳ ರೋಚಕ ಜಯ ಸಾಧಿಸಿತು. ದೊಡ್ಡ ಮೊತ್ತದ ಕಾದಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್‌ 5 ವಿಕೆಟಿಗೆ 371 ರನ್‌ ಪೇರಿಸಿ ಸವಾಲೊಡ್ಡಿದರೆ, ಇಂಗ್ಲೆಂಡ್‌ ದಿಟ್ಟ ಚೇಸಿಂಗ್‌ ನಡೆಸಿಯೂ 48.5 ಓವರ್‌ಗಳಲ್ಲಿ 365ಕ್ಕೆ ಆಲೌಟ್‌ ಆಯಿತು. 

Advertisement

ಮೆಕ್‌ಲಿಯೋಡ್‌ ಅಜೇಯ 140
ಸ್ಕಾಟ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಕಲಮ್‌ ಮೆಕ್‌ಲಿಯೋಡ್‌ ಬಾರಿಸಿದ ಆಕರ್ಷಕ ಶತಕ. ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಮೆಕ್‌ಲಿಯೋಡ್‌ 140 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದು ಏಕದಿನದಲ್ಲಿ ಮೆಕ್‌ಲಿಯೋಡ್‌ ಬಾರಿಸಿದ 7ನೇ ಶತಕ. ಕೇವಲ 94 ಎಸೆತ ಎದುರಿಸಿದ ಅವರು 16 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸಿ ಆಂಗ್ಲರ ಬೌಲಿಂಗ್‌ ದಾಳಿಯನ್ನು ಪುಡಿಗುಟ್ಟಿದರು. ಅವರ ಈ ಬ್ಯಾಟಿಂಗ್‌ ಸಾಹಸಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

 ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಕ್ರಾಸ್‌ (48) ಮತ್ತು ನಾಯಕ ಕೈಲ್‌ ಕೋಟ್ಜರ್‌ (58) ಸ್ಕಾಟ್ಲೆಂಡಿಗೆ ಉತ್ತಮ ಆರಂಭ ಒದಗಿಸಿದ್ದರು. ಇವರ ಮೊದಲ ವಿಕೆಟ್‌ ಜತೆಯಾಟದಲ್ಲಿ 13.4 ಓವರ್‌ಗಳಿಂದ 103 ರನ್‌ ಒಟ್ಟುಗೂಡಿತು. 

ಜಾನಿ ಬೇರ್‌ಸ್ಟೊ ಶತಕದಾಟ
ಇಂಗ್ಲೆಂಡಿನ ಆರಂಭ ಸ್ಕಾಟ್ಲೆಂಡಿಗಿಂತಲೂ ಬಿರುಸಿನಿಂದ ಕೂಡಿತ್ತು. ಜಾನಿ ಬೇರ್‌ಸ್ಟೊ ಶತಕದ ಮೂಲಕ ಅಬ್ಬರಿಸಿದರು. ಬೇರ್‌ಸ್ಟೊ ಕೇವಲ 59 ಎಸೆತಗಳಿಂದ 105 ರನ್‌ ಬಾರಿಸಿದರು. ಈ ವೇಳೆ ಸಿಡಿದದ್ದು 12 ಬೌಂಡರಿ ಹಾಗೂ 6 ಸಿಕ್ಸರ್‌. ಬೇರ್‌ಸ್ಟೊ-ಜಾಸನ್‌ ರಾಯ್‌ ಜೋಡಿ ಕೇವಲ 12.4 ಓವರ್‌ಗಳಲ್ಲಿ ಆರಂಭಿಕ ವಿಕೆಟಿಗೆ 129 ರನ್‌ ಪೇರಿಸಿತು. ಅಲೆಕ್ಸ್‌ ಹೇಲ್ಸ್‌ 52 ರನ್‌ ಬಾರಿಸಿದರು. ಕೇವಲ 2 ವಿಕೆಟಿಗೆ 220 ರನ್‌ ಮಾಡಿದ್ದ ಇಂಗ್ಲೆಂಡ್‌ ದೊಡ್ಡ ಮೊತ್ತವನ್ನು ಬೆನ್ನಟ್ಟುವ ಎಲ್ಲ ಸೂಚನೆ ನೀಡಿತ್ತು.  ಆದರೆ ತಂಡ ಗುರಿ ಮುಟ್ಟುವಲ್ಲಿ ವಿಫ‌ಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next