ಮೈಸೂರು: ಅಂಕಗಳಿಕೆಯೇ ಸಾಧನೆಯಲ್ಲ. ಜೀವನದ ಗುರಿ ತಲುಪುವುದು ಮುಖ್ಯ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ಅನುಮತಿ ಪಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಮೈಸೂರು ಜಿಲ್ಲಾ ಸಮಿತಿಯು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವುದು, ವೈದ್ಯಕೀಯ, ಇಂಜಿನಿಯರಿಂಗ್ ಸೀಟ್ ಪಡೆಯುವುದೇ ಸಾಧನೆಯಲ್ಲ. ತಮ್ಮ ಆಸಕ್ತಿಯ ವಿಷಯಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ಬದುಕು ರೂಪಿಸಿಕೊಳ್ಳುವುದು ನಿಜವಾದ ಸಾಧನೆ ಎಂದರು.
ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಹೆಚ್ಚು. ಹೆಚ್ಚು ಅಂಕ ಪಡೆದರೂ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಜತೆಗೆ, ಅವಕಾಶಗಳೂ ಕಡಿಮೆಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತ ಕ್ಷೇತ್ರಗಳಲ್ಲೇ ಮುಂದುವರಿದು, ಅದನ್ನೇ ಪ್ರವೃತ್ತಿಯಾಗಿ ಸ್ವೀಕರಿಸಬೇಕು. ಆಗಲೇ ಗೆಲುವಿನ ಹಾದಿ ಸುಲಭ ವಾಗಲಿದೆ ಎಂದರು.
ಸೆಸ್ಕ್ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೈಸೂರು, ಶಿವಮೊಗ್ಗ, ಬಾಗಲಕೋಟೆ ಜಿಲ್ಲಾ ಸಮಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗುತ್ತಿಗೆದಾರ ಸದಸ್ಯರ ಮತ್ತು ಅವರ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಂ.ಆರ್.ಧರ್ಮವೀರ, ಪದಾಧಿಕಾರಿಗಳಾದ ಎಚ್.ಜೆ.ರಾಘವೇಂದ್ರ, ಎಂ.ಆರ್.ಮಧುಸೂದನ, ಬಿ.ಎಂ.ಗಿರೀಶ್‌ಕುಮಾರ್, ಎಚ್.ಆರ್.ಕೃಷ್ಣಾಚಾರಿ, ವೆಂಕಟೇಶ್‌ಮೂರ್ತಿ, ಪ್ರಕಾಶ್, ಅನಿಲ್ ಇದ್ದರು.