ಬೇಸಗೆ ರಜೆ ಮುಗಿದು ಶಾಲೆಗಳು ಪುನರಾರಂಭ ಗೊಂಡು ತಿಂಗಳು ಕಳೆದಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿದ್ದಾರೆ. ವಿದ್ಯಾರ್ಥಿಗಳು ಹೇಗೆ ಹೆಚ್ಚಿನ ಅಂಕ ಗಳನ್ನು ಗಳಿಸುವುದು ಎಂದು ಮನದಲ್ಲಿಯೇ ಯೋಚಿ ಸುತ್ತಿದ್ದರೆ, ತಮ್ಮ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡುವುದು ಹೇಗೆ? ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ ಶಿಕ್ಷಕರು.ಅಂತೂ ಇಂದಿನ ಶಿಕ್ಷಣ ಪದ್ಧತಿ ಅಂಕ ಆಧಾರಿತವಾಗಿದ್ದು ಹೆಚ್ಚು ಅಂಕ ಗಳಿಸುವವನು ತ್ರಿವಿಕ್ರಮ, ಗಳಿಸದವನು ಮಂಕುತಿಮ್ಮ ಎನ್ನುವಂತಾಗಿದೆ. ಅಂಕಪಟ್ಟಿಯೇ ವಿದ್ಯಾರ್ಥಿಯೋರ್ವನ ಬುದ್ಧಿಮತ್ತೆ, ಸೃಜನಶೀಲತೆ, ಸೌಜನ್ಯ, ಕೌಶಲಗಳ ಪುರಾವೆಯೆಂದು ಪರಿಗಣಿಸ ಲ್ಪಟ್ಟಿದೆ. ಹಾಗಾಗಿ ಶಾಲಾಕಾಲೇಜುಗಳಲ್ಲಿ ಹೆಚ್ಚಿನ ಚಟು ವಟಿಕೆಗಳು ಅಂಕಕೇಂದ್ರಿತವಾಗಿರುತ್ತವೆ.
ಅಂಕ ವ್ಯವಸ್ಥೆ ಇರಬೇಕು ನಿಜ. ಆದರೆ ಎಲ್ಲವನ್ನೂ ಅಂಕಗಳಿಂದಲೇ ಅಳೆಯಲಾಗದು. ಅಷ್ಟೇ ಅಲ್ಲದೆ ನಿರ್ದಿಷ್ಟ ಅಂಕಗಳನ್ನು ಕೊಡಲಾಗದ ಕೆಲವು ವಿದ್ಯೆಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸ್ವಾವಲಂಬನೆ, ಸ್ವೋದ್ಯೋಗಗಳ ಬಗ್ಗೆ ಆಸಕ್ತಿ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಮಾಜಕ್ಕೆ ಮಂಕುಕವಿದೇ ಕವಿಯುತ್ತದೆ. ಹಾಗಾದರೆ ಇದನ್ನು ಪರಿಹರಿಸುವ ಮಾರ್ಗವೇನು?
ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಮುಂದೆ ಸ್ವಾವಲಂಬಿಗಳನ್ನಾಗಿಸುವ ವಿದ್ಯೆಗಳನ್ನೂ ಕಲಿಸಬೇಕು. ಅಂಕ ಗಳಿಕೆಯ ಭರಾಟೆಯಲ್ಲಿ ವಿದ್ಯಾರ್ಥಿ ಗಳು ದಿನವಿಡೀ ಹೋಮ್ ವರ್ಕ್, ಅಧ್ಯಯನ ದಲ್ಲಿಯೇ ಮುಳುಗಿರುತ್ತಾರೆ. ಇನ್ನು ಮನೆಯಲ್ಲಿ ತಂದೆ-ತಾಯಿ, ಬಂಧುಗಳಿಂದ ಕಲಿಯುತ್ತಿದ್ದ ಅಡುಗೆ ಕೆಲಸ, ಕೃಷಿ ಕೆಲಸ, ಹೈನುಗಾರಿಕೆ, ಕುಲ ಕಸುಬುಗಳನ್ನು ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚು ಅಂಕ ಗಳಿಸುವುದಕ್ಕಾಗಿ ಹೆತ್ತವರೇ ಮಕ್ಕಳನ್ನು ಹೆಚ್ಚು ಓದುವಂತೆ, ಟ್ಯೂಷನ್ ಕ್ಲಾಸ್‌ಗೆ ಹೋಗುವಂತೆ ಮಾಡಿ ಮನೆಕೆಲಸಗಳನ್ನು, ಕೃಷಿ ಕೆಲಸಗಳನ್ನು ತಾವೇ ಮಾಡುತ್ತಿದ್ದಾರೆ ಅಥವಾ ಆಳುಗಳ ಮೂಲಕ ಮಾಡಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಪುಸ್ತಕದ ಜ್ಞಾನವಷ್ಟೇ ಗಳಿಸಿ ಮುಂದೆ ಜೀವನದಲ್ಲಿ ಕಷ್ಟ ಅನುಭವಿಸುವಂತಾಗುತ್ತದೆ.
ಹಿಂದೆ ಭಾರತದಲ್ಲಿ ಗುರುಕುಲ ಪದ್ಧತಿ ಜಾರಿ ಯಲ್ಲಿ¨ªಾಗ ಸಮಗ್ರ ಶಿಕ್ಷಣ ವ್ಯವಸ್ಥೆ ಇತ್ತು. ವಿದ್ಯಾರ್ಥಿ ಗಳು ಕೇವಲ ಪುಸ್ತಕದ ವಿದ್ಯೆಯಲ್ಲದೆ ಜೀವನೋ ಪಾಯವನ್ನೂ ಕಲಿಯುತ್ತಿದ್ದರು. ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿಯಾದ ಅನಂತರ ಅದು ಕಡಿಮೆ ಯಾಗತೊಡಗಿತು. ಈಗಂತೂ ಕೇವಲ ಪುಸ್ತಕದ ಜ್ಞಾನ ಕೇಂದ್ರಿತ ಶಿಕ್ಷಣದಿಂದಾಗಿ ಆ ವ್ಯವಸ್ಥೆ ಸಂಪೂರ್ಣವಾಗಿ ಮೂಲೆಗುಂಪಾಗಿದೆ. ಫಿನ್ಲಂಡ್‌ನಂತಹ ಕೆಲವೇ ದೇಶಗಳಲ್ಲಿ ಅಂಕ ಕೇಂದ್ರಿತ ಪದ್ಧತಿಯ ಬದಲಿಗೆ ಸಮಗ್ರ ಶಿಕ್ಷಣ ವ್ಯವಸ್ಥೆಯಿದ್ದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಂಕ ಗಳಿಸುವ ಒತ್ತಡ ಅತೀ ಕಡಿಮೆಯಿರುತ್ತದೆ. ಅಲ್ಲಿ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸುವ ವಯಸ್ಸು ಕನಿಷ್ಠ ಏಳು ವರ್ಷ ಕಡ್ಡಾಯವಾಗಿದ್ದು ಶಾಲೆಯಲ್ಲೂ ಹೆಚ್ಚು ಅಂಕ ಗಳಿಸುವ ಒತ್ತಡವಿಲ್ಲ. ಶಿಕ್ಷಕರನ್ನೂ ಗಮನಿಸುವ, ಗದರಿಸುವ ತನಿಖಾಧಿಕಾರಿಗಳಿಲ್ಲ. ಎರಡೆರಡು ಪಾಠದ ಅವಧಿ (ಪೀರಿಯಡ್)ಗಳ ನಡುವೆ ಹದಿನೈದು ನಿಮಿಷದ ಬಿಡುವು ಇದ್ದು ವಿದ್ಯಾರ್ಥಿ ಗಳಿಗೆ ಪಠ್ಯ ಶಿಕ್ಷಣದಿಂದ ಒಂದಿಷ್ಟು ವಿರಾಮ ಲಭಿಸುತ್ತದೆ. ಅಷ್ಟೇ ಅಲ್ಲದೆ ಮಕ್ಕಳ ಅಭಿರುಚಿಗಳನ್ನು ಗುರುತಿಸುವ ಅತ್ಯಮೂಲ್ಯ ಕೆಲಸ ಶಾಲೆಯಲ್ಲಿ ಆಗುತ್ತದೆ. ಇದಕ್ಕಾಗಿ ಶಾಲೆಗಳಲ್ಲಿ ಅಡುಗೆ ಕೆಲಸ, ಹೈನುಗಾರಿಕೆ, ವಿದ್ಯುತ್ ಉಪಕರಣಗಳ ದುರಸ್ತಿ, ಬಡಗಿ, ಕಮ್ಮಾರ, ಚಮ್ಮಾರ ವೃತ್ತಿ ಇತ್ಯಾದಿಗಳನ್ನು ಪರಿಚಯಿಸಿ ಮಕ್ಕಳ ಆಸಕ್ತಿಗಳಿಗನುಸಾರವಾಗಿ ಅವುಗಳನ್ನು ಕಲಿಸುವ ವ್ಯವಸ್ಥೆಯಿದೆ. ಹಾಗಾಗಿ ಹೈಸ್ಕೂಲ್ ಸೇರುವ ವಯಸ್ಸಿಗೇ ಮಕ್ಕಳು ಮುಂದೆ ಯಾವ ದಾರಿಯಲ್ಲಿ ಮುಂದುವರಿಯಬಹುದೆಂದು ನಿರ್ಧರಿಸಬಹುದಾಗಿದೆ. ಇದು ಅಂಕ ಆಧಾರಿತ ವಾಗಿರದೆ ಕೌಶಲ ಆಧಾರಿತವಾಗಿರುತ್ತದೆ. ಅಲ್ಲಿ ಮನೆಯಲ್ಲಿ ವಿದ್ಯುತ್ ಉಪಕರಣ, ನೀರಿನ ನಳ್ಳಿ, ಸೈಕಲ್, ಬೈಕು ಇತ್ಯಾದಿ ದುರಸ್ತಿಯಾಗಬೇಕಾದರೆ ಮನೆ ಮಕ್ಕಳೇ ಮಾಡುವಷ್ಟು ಶಿಕ್ಷಣ ಪ್ರೌಢಶಾಲಾ ಹಂತದಲ್ಲೇ ದೊರೆಯುತ್ತದೆ. ಶಿಕ್ಷಣದಲ್ಲಿ ಲಿಂಗ ತಾರತಮ್ಯವೂ ಕಡಿಮೆಯಾಗಿದ್ದು ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣಗಳಲ್ಲೂ ಗಂಡು ಹೆಣ್ಣುಗಳ ಅನುಪಾತ ಸರಿಸಮನಾಗಿರುತ್ತದೆ. ಶಾಲೆಗಳಲ್ಲಿ ಅತೀ ಕಡಿಮೆ ಪರೀಕ್ಷೆಗಳಿದ್ದು ಮಕ್ಕಳ ಮೇಲಿನ ಕಲಿಕೆಯ ಒತ್ತಡ ಕಡಿಮೆಯಿರುವುದರಿಂದ ಮಕ್ಕಳು ಮನೆಗಿಂತ ಶಾಲೆಯೇ ವಾಸಿಯೆಂದು ಶಾಲೆಗೆ ಹೋಗಲು ಕಾಯುತ್ತಿರುತ್ತಾರೆ.
ನಮ್ಮಲ್ಲಿಯೂ ಇಂತಹ ವ್ಯವಸ್ಥೆ ಬರಬೇಕು. ಶಾಲಾ ಶಿಕ್ಷಣದಲ್ಲಿ ಜೀವನೋಪಾಯಕ್ಕೆ ಬೇಕಾದ ವಿದ್ಯೆಯನ್ನು ಕಲಿಸುವುದೂ, ವಿದ್ಯಾರ್ಥಿಗಳ ಆಸಕ್ತಿ ಗಳನ್ನು ಗುರುತಿಸುವ ಕೆಲಸ ಎಳವೆಯಲ್ಲೇ ಆಗ ಬೇಕು. ಇದರಿಂದ ಪ್ರತಿಯೊಬ್ಬರೂ ತಮ್ಮ ಕೌಶಲಕ್ಕನು ಗುಣವಾದ ವೃತ್ತಿಯನ್ನು ಗಳಿಸಿ ಅದರಲ್ಲೇ ಉತ್ತಮ ಸಾಧನೆ ಮಾಡಲು ಸಾಧ್ಯವಾಗಬಹುದು. ಇದ ರಿಂದಾಗಿ ಕೇವಲ ವೈದ್ಯಕೀಯ, ತಾಂತ್ರಿಕ ಶಿಕ್ಷಣಕ್ಕೇ ಪ್ರಯತ್ನಿಸಿ ಸೀಟು ಸಿಗದೇ ಖನ್ನತೆಗೊಳಗಾಗುವ ಅವಕಾಶ ಕಡಿಮೆಯಾಗಬಹುದು. ಅಷ್ಟೇ ಅಲ್ಲದೆ ಯಾವುದೇ ವಿಷಯದಲ್ಲಿ ಪದವಿ ಪಡೆದು ಉದ್ಯೋಗವಿಲ್ಲದೆ ಅಲೆದಾಡುವುದು ತಪ್ಪಬಹುದು.
ಈಗಾಗಲೇ ಬಹಳಷ್ಟು ವರ್ಷಗಳಿಂದ ಚಾಲ್ತಿ ಯಲ್ಲಿರುವ ಅಂಕ ಆಧಾರಿತ ಶಿಕ್ಷಣ ಪದ್ಧತಿಯ ನಿರ್ಮೂಲನ ಅಷ್ಟು ಸುಲಭವಲ್ಲ. ಆದರೆ ಇದನ್ನು ಹಂತಹಂತವಾಗಿ ಬದಲಾಯಿಸಬಹುದು. ಪ್ರತೀ ಶೈಕ್ಷಣಿಕ ವರ್ಷದಲ್ಲಿ ಒಂದೋ ಎರಡೋ ಹೊಸ ವಿಷಯಗಳನ್ನು ಸೇರ್ಪಡೆಗೊಳಿಸಬಹುದು. ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದು ಮತ್ತು ಅವರವರ ಕೌಶಲಗಳಿಗನುಸಾರವಾಗಿ ಬೇರ್ಪಡಿಸು ವುದೇ ಈ ಶಿಕ್ಷಣ ಪದ್ಧತಿಯ ಉದ್ದೇಶವಾಗಿರಬೇಕು. ಈಗಿರುವ ಶಿಕ್ಷಣ ಪದ್ಧತಿಯಲ್ಲಿ 18-20 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಮುಂದೆ ಏನು? ಎನ್ನುವುದು ನಿರ್ಧಾರವಾಗಿರುವುದಿಲ್ಲ. ಶಾಲಾಶಿಕ್ಷಣ, ಹೆಚ್ಚಿನ ಅಂಕ ಗಳಿಸುವತ್ತ ಗಮನ ವಿರುವುದರಿಂದ ಇತರ ಕೌಶಲಗಳನ್ನು ಗಳಿಸುವುದೂ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೇ ಅನೇಕ ಯುವಕರು ಪದವಿ ಪಡೆದರೂ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ.
ಶಾಲೆಗಳಲ್ಲಿ ಸಾಂಪ್ರದಾಯಿಕ ಪಾಠಗಳ ಜತೆಗೆ ಜೀವನ ಮೌಲ್ಯಗಳ ಪಾಠವೂ ಆಗಬೇಕು. ಕೇವಲ ವೈದ್ಯ ಅಥವಾ ಎಂಜಿನಿಯರ್ ಆಗುವುದಷ್ಟೇ ಗೌರವಯುತ ವೃತ್ತಿಯಲ್ಲ. ಕೃಷಿಕ, ಬಡಗಿ, ಚಮ್ಮಾರ, ಕಮ್ಮಾರ, ಮಡಿವಾಳ, ವ್ಯಾಪಾರಿ, ಇತ್ಯಾದಿ ವೃತ್ತಿಗಳೂ ಗೌರವಯುತ ವೃತ್ತಿಗಳಾಗಿದ್ದು ಅವುಗಳಲ್ಲಿ ಪಳಗಿದರೆ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಲು ಸಾಧ್ಯವೆಂದು ಮಕ್ಕಳಿಗೆ ಮನವರಿಕೆ ಮಾಡಿಸಬೇಕು. ಅವರವರ ಕೌಶಲಕ್ಕನುಗುಣವಾಗಿ ಅವರ ಮುಂದಿನ ಹೆಜ್ಜೆ ಯಾವ ಕಡೆಗೆ ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಸಾಮಾಜಿಕ ಅಸಮತೋಲನವಾಗಿ ಸಮಾಜದ ಲ್ಲೊಂದು ನಿರ್ವಾತ ಸೃಷ್ಟಿಯಾಗಿ ಸಮಾಜಕ್ಕೆ ಮಂಕು ಕವಿದೀತು. ಹಿಂದೆ ವಿಶ್ವಕ್ಕೇ ಮಾದರಿಯಾಗಿದ್ದ ಭಾರತೀಯ ಶಿಕ್ಷಣ ಪದ್ಧತಿಯ ಉತ್ತಮ ಅಂಶಗಳನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲೇ ಪೋಣಿಸಿ “ಹಳೆಬೇರು, ಹೊಸಚಿಗುರು ಸೇರಿದರೆ ಮರ ಸೊಬಗು’ ಎನ್ನುವಂತೆ ಜಗತ್ತಿಗೇ ಮಾದರಿಯಾಗುವ ಶಿಕ್ಷಣ ಪದ್ಧತಿಯ ಉದಯವಾಗಬೇಕು.
-ಡಾ| ಸತೀಶ ನಾಯಕ್ ಆಲಂಬಿ.