ಮಂಗಳೂರು: ಕರಾವಳಿಯಲ್ಲಿ ಬಿಸಿಲ ಬೇಗೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರಕಾರಿ ಪದವಿ ಕಾಲೇಜುಗಳ ತರಗತಿಗಳನ್ನು ಬೆಳಗ್ಗೆ ಬೇಗನೆ ಆರಂಭಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ತರಗತಿಗಳನ್ನು ಬೇಗ ಆರಂಭಿಸುವ ನಿರ್ಧಾರವನ್ನು ಆಯಾ ಕಾಲೇಜಿನ ಪ್ರಾಂಶುಪಾಲರ ವಿವೇಚನೆಗೆ ನೀಡಲಾಗಿದೆ ಎಂದು ದ.ಕ. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಬಿಸಿಲ ಧಗೆ ಹೆಚ್ಚುತ್ತಿರುವ ಕಾರಣ ಪದವಿ ವಿದ್ಯಾರ್ಥಿಗಳ ತರಗತಿ ಅವಧಿಯನ್ನು ಬೇಗನೆ ಪ್ರಾರಂಭಿ ಸಬೇಕು-ಇಲ್ಲವೇ ರಜೆ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿಗೆ ಇತ್ತೀಚೆಗೆ ಪೋಷಕರು ಮನವಿ ಸಲ್ಲಿಸಿದ್ದರು. ಇದರಂತೆ ಜಿಲ್ಲಾಧಿಕಾರಿಯವರು ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪರಾಮರ್ಶೆ ಮಾಡುವಂತೆ ಸೂಚಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯು ಎಲ್ಲ ಪದವಿ ಕಾಲೇಜಿನ ಪ್ರಾಂಶುಪಾಲರ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದೆ. ಬೆಳಗ್ಗೆ ಬೇಗನೆ ತರಗತಿ ಆರಂಭಿಸುವ ಕುರಿತು ಆಯಾ ಕಾಲೇಜುಗಳ ಪ್ರಾಂಶುಪಾಲರೇ ನಿರ್ಧರಿಸುವಂತೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಕಾರ್‌ಸ್ಟ್ರೀಟ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಜಯಕರ ಭಂಡಾರಿ ಮಾತನಾಡಿ, “ಪದವಿ ತರಗತಿ ಬೇಗ ಆರಂಭಿಸುವಂತೆ ಸೂಚನೆ ಬಂದಿದೆ. ನಮ್ಮಲ್ಲಿ ಈ ಹಿಂದಿನಿಂದಲೂ 9.30ಕ್ಕೆ ತರಗತಿ ಆರಂಭವಾಗುತ್ತಿದೆ. ಕೇರಳ ಸಹಿತ ದೂರದ ಭಾಗದಿಂದ ಮಕ್ಕಳು ಈ ಕಾರಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ನಮ್ಮಲ್ಲಿಗೆ ಬರುವವರೂ ಇದ್ದಾರೆ. ಹೀಗಾಗಿ ಮತ್ತಷ್ಟು ಬೇಗ ತರಗತಿ ಆರಂಭ ಕೊಂಚ ಕಷ್ಟ ಎನ್ನುತ್ತಾರೆ.ಈ ಮಧ್ಯೆ ಮಂಗಳೂರು ವಿ.ವಿ. ಅಧೀನದ ಕಾಲೇಜುಗಳು ಹಾಗೂ ಸ್ವಾಯತ್ತ ಕಾಲೇಜುಗಳಲ್ಲಿಯೂ ಇಂತಹುದೇ ನಿರ್ಧಾರವನ್ನು ಆಯಾ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸಲಿದೆ.