ಉಡುಪಿ: ಉಡುಪಿ ಮಾನವ ಹಕ್ಕುಗಳ ಸಂರಕ್ಷಣ ಪ್ರತಿಷ್ಠಾನದ ಸೇವಾ ಕಾರ್ಯವನ್ನು ತಮ್ಮ ಜಿಲ್ಲೆ(ಗದಗ)ಯಲ್ಲೂ ಅಳವಡಿಸಿ ಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಗುರುವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ರವೀಂದ್ರನಾಥ ಶಾನುಭಾಗ್ ಅವರೊಂದಿಗೆ 2 ಗಂಟೆಗಳ ಕಾಲ ವಿವಿಧ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಡಾ| ಶಾನುಭಾಗ್ ಅವರು ಪಿಪಿಟಿ ಮೂಲಕ ತಾವು ಈವರೆಗೆ ನ್ಯಾಯಾಲಯದ ಮೆಟ್ಟಿಲೇರದೇ ಹಾಗೂ ನ್ಯಾಯಾಲಯಗಳ ಮೂಲಕ ಬಗೆಹರಿಸಿದ ಹಲವು ಪ್ರಮುಖ ಪ್ರಕರಣಗಳ ಸವಿಸ್ತಾರವಾದ ಮಾಹಿತಿ ಯನ್ನು ಸಚಿವರಿಗೆ ಒದಗಿಸಿದರು.
ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಮಾನವ ಕಳ್ಳಸಾಗಾಟ ಮತ್ತು ಮಕ್ಕಳು ಹಾಗೂ ಯುವತಿಯರ ಮಾರಾಟ ಪ್ರಕರಣಗಳು, ವಿದೇಶದಲ್ಲಿ ನಡೆದ ಘಟನೆಗಳಿಗೆ ಪರಿಹಾರ ಕಂಡು ಹುಡು ಕುವಾಗ ಎಂಬೆಸಿಗಳು ಸರಿಯಾಗಿ ಸ್ಪಂದಿಸದೇ ಇರುವುದು ಸೇರಿದಂತೆ ತಮ್ಮ ಪ್ರತಿಷ್ಠಾನದ ಮೂಲಕ ನಡೆಯುತ್ತಿರುವ ಸೇವಾ ಕಾರ್ಯದ ಸಂಪೂರ್ಣ ಮಾಹಿತಿ ಒದಗಿಸಿದರು.
ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಪ್ರಕ ರಣಗಳು ನಮ್ಮಲ್ಲಿ ಬರುತ್ತಿವೆ. ಆದಷ್ಟು ಜನರಿಗೆ ಸಹಾಯ ಮಾಡುತ್ತಿದ್ದೇವೆ. ದೇಶ ವಿದೇಶಗಳಲ್ಲೂ ನಮ್ಮ ಸ್ವಯಂ ಸೇವಕರು ಕಾರ್ಯ ನಿರ್ವ ಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳಲ್ಲೂ ನಮ್ಮ ಪ್ರಕರಣದ ವಾದ ಮಾಡಲು ವಕೀಲರಿದ್ದಾರೆ. ಅನೇಕ ಸಮಸ್ಯೆಯನ್ನು ನ್ಯಾಯಾಲಯದ ಮೆಟ್ಟಿಲು ಏರದೆಯೇ ಬಗೆ ಹರಿಸಿದ್ದೇವೆ. ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿ ಣದ್ದೇವೆ ಎಂಬ ವಿವರ ನೀಡಿದರು.
ಪ್ರತೀ ಹಳ್ಳಿ ಅಥವಾ ಗ್ರಾ.ಪಂ.ಗಳಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಅಥವಾ ಸ್ವಯಂಸೇವಕರು ಇಂತಹ ಕಾರ್ಯಗಳಿಗೆ ಸಿಕ್ಕಾಗ ಗ್ರಾಮೀಣ ಭಾಗದಲ್ಲಿನ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಪ್ರತಿಷ್ಠಾನದಿಂದ ನಡೆ ಯುವ ಕಾರ್ಯವು ನಮ್ಮ ಜಿಲ್ಲೆ ಯಲ್ಲೂ ಜನರಿಗೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆ. ಅದರ ಭಾಗವಾಗಿ ಡಾ| ರವೀಂದ್ರನಾಥ ಶಾನುಭಾಗ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಯಾವೆಲ್ಲ ರೀತಿಯಲ್ಲಿ ಅನುಷ್ಠಾನ ಮಾಡಬಹುದು ಎಂಬು ದನ್ನು ಯೋಚಿಸಲಿದ್ದೇವೆ ಎಂದರು.
ಗದಜ ಜಿಲ್ಲೆಯ ಬಾರ್ ಕೌನ್ಸಿಲ್ ಸದಸ್ಯರಾದ ಎಸ್.ಕೆ. ಪಾಟೀಲ್, ಹಿರಿಯ ನ್ಯಾಯವಾದಿ ನದಾಫ್ ಮಾಹಿತಿ ಸಂಗ್ರಹಿಸಿದರು.
ಕಾನೂನು ಕಾಲೇಜಿನ ನಿರ್ದೇಶಕಿ ಡಾ| ನಿರ್ಮಲಾ ಕುಮಾರಿ, ಕಾನೂನು ವಿಶ್ವವಿದ್ಯಾನಿಲಯದ ಡೀನ್ ಡಾ| ಚಿದಾನಂದ ಪಾಟೀಲ್, ಧಾರವಾಡದ ನ್ಯಾಯವಾದಿ ಬಸವ ಪ್ರಭು, ನಿವೃತ್ತ ತಹಶೀಲ್ದಾರ್ ಮುರಳೀಧರ್, ಪ್ರತಿಷ್ಠಾನದ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಎಂ.ಎ. ಗಫೂರ್ ಉಪಸ್ಥಿತರಿದ್ದರು.