Advertisement

ಜಿ.ಪಂ. ಅಧ್ಯಕ್ಷರ ಹೆಚ್ಚಳವಾಗಿದ್ದ ಭತ್ತೆಗೂ ಕತ್ತರಿ; ಅನುದಾನ, ಅಧಿಕಾರಕ್ಕಾಗಿ ಸಿಎಂಗೆ ಮೊರೆ

09:00 AM Dec 01, 2019 | mahesh |

ಮಂಗಳೂರು: ನಾಲ್ಕು ವರ್ಷಗಳ ಹಿಂದೆ ಪಂಚಾಯತ್‌ರಾಜ್‌ ಕಾಯಿದೆಗೆ ತಿದ್ದುಪಡಿ ತಂದು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿತ್ತು. ಆದರೆ ಅದಿನ್ನೂ ಜಾರಿಯಾಗದೆ ರಾಜ್ಯಾದ್ಯಂತದ ವಿವಿಧ ಜಿ.ಪಂ. ಅಧ್ಯಕ್ಷರು ಅಸಮಾಧಾನ ಗೊಂಡಿದ್ದಾರೆ. ಸ್ಥಾನಮಾನ ಸಿಗದಿದ್ದರೂ ಪರವಾಗಿಲ್ಲ, ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚುವರಿ ಅನುದಾನವನ್ನಾದರೂ ನೀಡಿ ಎಂಬ ಬೇಡಿಕೆಯನ್ನು ಸಿಎಂ ಮುಂದೆ ಮಂಡಿಸಿದ್ದಾರೆ.

Advertisement

2015ರಲ್ಲಿ “ಕರ್ನಾಟಕ ಪಂಚಾಯತ್‌ರಾಜ್‌ 2ನೇ ತಿದ್ದುಪಡಿ’ ಮಸೂದೆಯ ಮೂಲಕ ಜಿ.ಪಂ. ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸಚಿವರಿಗೆ ಸಮಾನವಾದ ಸ್ಥಾನಮಾನ ನೀಡಲಾಗಿತ್ತು. ಆದರೆ ಸದ್ಯ ಆ ಬಳಿಕ ಗೌರವಧನ, ಭತ್ತೆಗಳು ಹೆಚ್ಚಾಗಿವೆಯೇ ವಿನಾ ಬೇರೆ ಅಧಿಕಾರ ದೊರಕಿಲ್ಲ. ವಿಶೇಷ ಅನುದಾನವೂ ದೊರೆತಿಲ್ಲ. ಅನುದಾನದ ಕೊರತೆ ಅನುಭವಿಸುತ್ತಿದ್ದ ಜಿ.ಪಂ. ಅಧ್ಯಕ್ಷರಿಗೆ ಸಚಿವ ಸ್ಥಾನಮಾನದ ಭರವಸೆ ಆಶಾಭಾವನೆ ಮೂಡಿಸಿತ್ತು. ಈಗ ಹೆಚ್ಚುವರಿ ಅಧಿಕಾರ, ಅನುದಾನ ಇಲ್ಲ ಎಂಬ ಅಳಲು ಅಧ್ಯಕ್ಷರದ್ದು.

ಭತ್ತೆಯಲ್ಲಿ ಮತ್ತೆ ಕಡಿತ
ಸಚಿವ ಸ್ಥಾನಕ್ಕೆ ಸಮಾನವಾದ ಅನುದಾನ, ಅಧಿಕಾರ ಕೊಟ್ಟಿಲ್ಲ. ಒಟ್ಟು ಗೌರವಧನ, ಭತ್ತೆಯಲ್ಲಿ ಹೆಚ್ಚಳ ಮಾಡಿದ್ದರೂ ಅದನ್ನು ಮತ್ತೆ ಮಾಡಿದ್ದಾರೆ. ಈ ಹಿಂದೆ ಅಧ್ಯಕ್ಷರಿಗೆ ವಿವೇಚನ ಅನುದಾನ ಬರುತ್ತಿತ್ತು. ಈಗ ಅದನ್ನೂ ಅಭಿವೃದ್ಧಿ ಅನುದಾನವಾಗಿ ನೀಡಲಾಗುತ್ತಿದೆ.

ವರ್ಷಕ್ಕೆ 50 ಲ.ರೂ. ಮಾತ್ರ
ಒಬ್ಬ ಜಿ.ಪಂ. ಸದಸ್ಯನ ವ್ಯಾಪ್ತಿಯಲ್ಲಿ ಕನಿಷ್ಠ 35 ಸಾವಿರ ಮತದಾರರಿರುತ್ತಾರೆ. ಅವರು ಶಾಸಕರಷ್ಟೇ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಹೆಚ್ಚೆಂದರೆ ವರ್ಷಕ್ಕೆ 50 ಲ.ರೂ. ಅನುದಾನ ದೊರೆಯುತ್ತದೆ. ಜಿ.ಪಂ. ಸದಸ್ಯರ ಒಟ್ಟಾರೆ ಅನುದಾನ ಹೆಚ್ಚಿಸಬೇಕು, ಸದಸ್ಯರಿಗಿಂತ ಸ್ವಲ್ಪವಾದರೂ ಹೆಚ್ಚು ಅನುದಾನ ಅಧ್ಯಕ್ಷರಿಗೆ ಕೊಡಬೇಕು. ಇಲ್ಲವಾದರೆ ಗ್ರಾಮೀಣ ಅಭಿವೃದ್ಧಿ ಅಸಾಧ್ಯ ಎನ್ನುತ್ತಾರೆ ಜಿ.ಪಂ.ನ ಹಿರಿಯ ಸದಸ್ಯ ತುಂಗಪ್ಪ ಬಂಗೇರ.

ನಮಗೆ ಹಿಂದೆ ಎಷ್ಟು ಅಧಿಕಾರವಿತ್ತೋ ಈಗಲೂ ಅಷ್ಟೇ ಇದೆ. ಒಮ್ಮೆ ಭತ್ತೆಯನ್ನು 40 ಸಾವಿರ ರೂ.ಗಳಿಗೆ ಹೆಚ್ಚಿಸಿದ್ದರು. 6 ತಿಂಗಳ ಹಿಂದೆ ಅದರಲ್ಲಿ 30 ಸಾವಿರ ರೂ. ಕಡಿತ ಮಾಡಿ 10 ಸಾವಿರ ರೂ. ಜಮೆ ಮಾಡಿದ್ದಾರೆ. ನಾವು ಅದನ್ನು ಪಡೆದಿಲ್ಲ. ಇದನ್ನು ಸರಕಾರದ ಗಮನಕ್ಕೆ ತಂದಿದ್ದೇವೆ. ನಮಗೆ ಅನುದಾನ ನೀಡದೆ ಕೇವಲ ಸ್ಥಾನಮಾನ ನೀಡಿದರೆ ಪ್ರಯೋಜನವಾಗದು.
-ಮೀನಾಕ್ಷಿ ಶಾಂತಿಗೋಡು, ದ.ಕ. ಜಿ.ಪಂ. ಅಧ್ಯಕ್ಷರು
-ದಿನಕರ ಬಾಬು, ಉಡುಪಿ ಜಿ.ಪಂ. ಅಧ್ಯಕ್ಷರು

Advertisement

ಜಿ.ಪಂ. ಅಧ್ಯಕ್ಷರಿಗೆ ಕಾನೂನಿನ ಅನ್ವಯ ಈಗಾಗಲೇ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ. ಸಚಿವರಿಗೆ ವಿಶೇಷ ಅನುದಾನ ಇಲ್ಲ. ಹಾಗೆಯೇ ಜಿ.ಪಂ. ಅಧ್ಯಕ್ಷರಿಗೂ ವಿಶೇಷ ಅನುದಾನ ನೀಡಲು ನಿಯಮವಿಲ್ಲ. ಜಿ.ಪಂ. ಸಭೆಗೆ ಪರಮಾಧಿಕಾರವಿದ್ದು, ಜಿ.ಪಂ. ಅಧ್ಯಕ್ಷರು ಆ ಸಭೆಯ ಅಧ್ಯಕ್ಷರಾಗಿರುವುದರಿಂದ ಅವರಿಗೆ ಸಹಜವಾಗಿಯೇ ಹೆಚ್ಚಿನ ಅಧಿಕಾರವಿರುತ್ತದೆ.
 - ಶ್ರೀಶಂಕರ್‌, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಇಲಾಖೆ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next