ಬೆಂಗಳೂರು : ಬೇಡಿಕೆ ಇಳಿಮುಖವಾಗಿರುವ ಸ್ನಾತಕೋತ್ತರ ಕೋರ್ಸ್‌ಗಳ ಭವಿಷ್ಯ ನಿರ್ಧರಿಸಲು ಬೆಂಗಳೂರು ವಿಶ್ವವಿದ್ಯಾಲಯವು ಸಿಂಡಿಕೇಟ್ ಉಪ ಸಮಿತಿ ರಚಿಸಿದೆ. ಹಿಂದಿ, ಸಂಸ್ಕೃತ, ತೆಲಗು, ಫ್ರಂಚ್, ಡಾನ್ಸ್, ಲೈಫ್ಸೈನ್ಸ್ ಸೇರಿದಂತೆ ಸುಮಾರು 15 ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಪ್ರಸ್ತಕ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ದಾಖಲಾತಿಯಾಗಿರುವ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ರದ್ದು ಮಾಡುವ ಅಥವಾ ಇನ್ನಷ್ಟು ಪರಿಣಾಮಕಾರಿಯಾಗಿ ಕೋರ್ಸ್ ನಡೆಸಬಹುದಾದ ಬಗ್ಗೆ ವರದಿ ಪಡೆಯಲು ಬೆಂವಿವಿ ಆಡಳಿತ ಮಂಡಳಿ ಮುಂದಾಗಿದೆ.
ಭವಿಷ್ಯ: ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣ ಏನು ಎಂಬುದನ್ನು ತಿಳಿಯಲು ಸಿಂಡಿಕೇಟ್ ಉಪ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಅಧ್ಯಯನ ನಡೆಸಿ ವರದಿಯನ್ನು ಸಿಂಡಿಕೇಟ್‌ಗೆ ಒಪ್ಪಿಸಲಿದೆ. ಉಪ ಸಮಿತಿ ನೀಡುವ ಶಿಫಾರಸ್ಸಿನ ಆಧಾರದಲ್ಲಿ ಕೋರ್ಸ್‌ಗಳ ಭವಿಷ್ಯ ನಿರ್ಧರಿಸಲಾಗುತ್ತದೆ.
ವಿವಿಯ ಜ್ಞಾನಭಾರತಿ ಕ್ಯಾಂಪಸ್ ಸೇರಿದಂತೆ ಮಾನ್ಯತೆ ಪಡೆದ ಕಾಲೇಜುಗಳ ಸ್ನಾತಕೋತ್ತರ ಕೇಂದ್ರದಲ್ಲಿ ಉಪ ಸಮಿತಿಯು ಅಧ್ಯಯನ ನಡೆಸಲಿದೆ. ವಿವಿಧ ಸ್ನಾತಕೋತ್ತರ ವಿಷಯದ ದಾಖಲಾತಿ ಮತ್ತು ವಿದ್ಯಾರ್ಥಿಗಳ ಆಸಕ್ತಿಯ
ಆಧಾರದಲ್ಲಿ ವರದಿ ಸಿದ್ಧಪಡಿಸಲಿದೆ. ವಿವಿಯಿಂದ ಮಾನ್ಯತೆ ಪಡೆದಿರುವ ಕಾಲೇಜುಗಳ ನಿರ್ವಹಣೆ, ರೋಸ್ಟರ್ ಪದ್ಧತಿ ಅನುಸರಿಸುತ್ತಿರುವ ಬಗ್ಗೆಯೂ ವರದಿಯಲ್ಲಿ ಬೆಳಕು ಚೆಲ್ಲಲಿದೆ ಎಂದು ಬೆಂವಿವಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
2017-18ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಅಂತಿಮಗೊಂಡಿದೆ. ಕೆಲವೊಂದು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆಯಾಗಿರುವುದು ವಿವಿ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ.
ಕಡಿಮೆ ವಿದ್ಯಾರ್ಥಿಗಳಿರುವ ಕೋರ್ಸ್‌ಗಳು: ಫ್ರೆಂಚ್,ಸ್ಪ್ಯಾನಿಶ್, ತೆಲಗು ವಿಭಾಗದಲ್ಲಿ ತಲಾ 2, ಸಂಸ್ಕೃತ ವಿಭಾಗದಲ್ಲಿ 7, ಆಡಿಯೋಲಜಿಯಲ್ಲಿ 5, ಸ್ಪೀಚ್ ಆ್ಯಂಡ್ ಲ್ಯಾಂಗುವೇಜ್‌ನಲ್ಲಿ 3, ಹಿಂದಿಯಲ್ಲಿ 10, ಕಾರ್ಪೋರೇಟ್ ಕಮ್ಯೂನಿಕೇಷನ್ 11, ಲೇಬರ್ ಎಂಪ್ಲಾಯಮೆಂಟ್‌ನಲ್ಲಿ 8, ಡಾನ್ಸ್ 12, , ಥಿಯೇಟರ್ ಮತ್ತು ಡ್ರಾಮದಲ್ಲಿ 11, ಜಿಯೋಗ್ರಪೀಕಲ್ ಇನ್‌ಫರ್ಮೆಷನ್, ಮ್ಯೂಸಿಕ್ ಹಾಗೂ ಲೈಫ್ಸೈನ್ಸ್‌ನಲ್ಲಿ ತಲಾ 13 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.