Advertisement

ಪರೀಕ್ಷಾರ್ಥ ಸ್ಫೋಟಕ್ಕೆ ಬೆದರಿದರೇ ವಿಜ್ಞಾನಿಗಳು?

11:01 AM Jan 31, 2019 | Team Udayavani |

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಸುತ್ತ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ವಿದೆಯೇ ಎಂಬುದನ್ನು ಅರಿಯಲು ಪುಣೆಯಿಂದ ಬಂದಿದ್ದ ವಿಜ್ಞಾನಿಗಳೇ ಪರೀಕ್ಷಾರ್ಥ ಸ್ಫೋಟ ನಡೆಸಲು ಹೆದರಿದರೇ..? ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.

Advertisement

ಪರೀಕ್ಷಾರ್ಥ ಸ್ಫೋಟಕ್ಕೆ ಬಹುಶಃ ವಿಜ್ಞಾನಿಗಳು ಮಾನಸಿಕವಾಗಿ ಸಿದ್ಧರಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿರುವ ಅಂಶವಾಗಿದೆ. ಏಕೆಂದರೆ, ಜಿಲ್ಲಾ ಡಳಿತ ಜ.24ರಿಂದ ಜ.28ರವರೆಗೆ ಐದು ದಿನಗಳ ಕಾಲ ಪರೀಕ್ಷಾರ್ಥ ಸ್ಫೋಟಕ್ಕೆ ಅನುಮತಿ ನೀಡಿತ್ತು. ಆದರೆ, ಕೊನೆಯ ದಿನದವರೆಗೆ ವಿಜ್ಞಾನಿಗಳು ಇತ್ತ ಸುಳಿಯಲೇ ಇಲ್ಲ. ಅಂತಿಮ ದಿನದ ವೇಳೆಗೆ ಕೆಆರ್‌ಎಸ್‌ಗೆ ಬಂದು ಕೆಲವೆಡೆ ಸ್ಫೋಟ ನಡೆಸಿ ವರದಿ ನೀಡಿ ಕೈತೊಳೆದುಕೊಳ್ಳುವ ದುಸ್ಸಾಹಸ ನಡೆಸುವುದಕ್ಕೂ ಇಚ್ಛಿಸಿರಲಿಲ್ಲ. ಬಹುಶಃ ವಿಜ್ಞಾನಿಗಳು ಯಾರದೋ ಪ್ರಭಾವ, ಒತ್ತಡಕ್ಕೆ ಮಣಿದಿದ್ದವರಂತೆ ಕಂಡು ಬಂದಿದ್ದರು ಎನ್ನುವುದು ಜನಮಾನಸದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಉಪಗ್ರಹದ ಚಿತ್ರದೊಂದಿಗೆ ನಿಖರವಾಗಿ ಗುರುತಿಸಿ ನೀಡಿದ್ದ ಸ್ಫೋಟದ ವರದಿ ಹಾಗೂ ಅದರಲ್ಲಿ ಅಣೆಕಟ್ಟೆಗೆ ಅಪಾಯವಿರುವ ಅಂಶಗಳು ವಿಜ್ಞಾನಿಗಳಿಗೆ ನಡುಕ ಹುಟ್ಟಿಸಿದ್ದಂತೆ ಕಂಡುಬರುತ್ತಿದೆ. ಇದರ ಜೊತೆಗೆ ಪರೀಕ್ಷಾರ್ಥ ಸ್ಫೋಟ ನಡೆಸಲಿರುವ ಸ್ಥಳಗಳು ವನ್ಯಜೀವಿ, ಪರಿಸರ ಸೂಕ್ಷ್ಮ ವಲಯ ಹಾಗೂ ಅರಣ್ಯ ಪ್ರದೇಶಕ್ಕೆ ಒಳಪಡುವ ಜಾಗಗಳೆಂಬ ಸತ್ಯದ ಬಗ್ಗೆ ಅವರಿಗೆ ಅರಿವಿದ್ದಂತಿತ್ತು ಎಂದು ಹೇಳಲಾಗುತ್ತಿದೆ.

ನಿಗೂಢ ನಡೆ: ಪುಣೆಯ ಸಿಡಬ್ಲ್ಯೂಪಿಆರ್‌ಎಸ್‌ ವಿಜ್ಞಾನಿಗಳ ತಂಡ 2018 ಡಿ. 6 ರಿಂದ ಡಿ.18ರವರೆಗೆ ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಲಿನ ಕಲ್ಲು ಗಣಿ ಪ್ರದೇಶಗಳಿಗೆ ಭೇಟಿ ನೀಡಿ ನಿಗೂಢವಾಗಿ ಪರಿಶೀಲನೆ ನಡೆಸಿ ಹೋಗಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿತ್ತು. ವಿಜ್ಞಾನಿಗಳ ತಂಡ ಪರಿಶೀಲನೆಗೆ ಬರುವುದನ್ನು ಬಹಳ ಗೌಪ್ಯವಾಗಿ ಡಲಾಗಿತ್ತು. ಎಲ್ಲೆಲ್ಲಿ ಪರಿಶೀಲನೆ ನಡೆಸಲಾಯಿತು ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿರಲಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತದ ನಡೆ ಜನರಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿತ್ತು.

ಹೆಚ್ಚಿನ ಅಧ್ಯಯನ ನಡೆಸಲು ಮತ್ತೆ ಪುಣೆ ವಿಜ್ಞಾನಿಗಳ ತಂಡ ಬರುವುದನ್ನೂ ಜಿಲ್ಲಾಡಳಿತ ಹಿಂದಿನ ದಿನದವರೆಗೆ ಮುಚ್ಚಿಟ್ಟಿತ್ತು. ಪರೀಕ್ಷಾರ್ಥ ಸ್ಫೋಟದ ಬಗ್ಗೆ ಕೆಆರ್‌ಎಸ್‌ ಸುತ್ತಲಿನ ಗ್ರಾಮದ ಜನರಿಗೆ ಮುನ್ನೆಚ್ಚರಿಕೆ ನೀಡಲು ಹೊರಡಿಸಿದ ಪತ್ರಿಕಾ ಪ್ರಕಟಣೆಯಿಂದಷ್ಟೇ ವಿಜ್ಞಾನಿಗಳು ಬರುವ ಬಗ್ಗೆ ಗೊತ್ತಾಗಿತ್ತು.

Advertisement

ಅಂತಿಮ ದಿನದ ವೇಳೆಗೆ ಆಗಮನ: ಐದು ದಿನಗಳ ಕಾಲ ಪರೀಕ್ಷಾರ್ಥ ಸ್ಫೋಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಅಂತಿಮ ದಿನದವರೆಗೆ ವಿಜ್ಞಾನಿಗಳ ತಂಡ ಕೆಆರ್‌ಎಸ್‌ಗೆ ಬರಲಿಲ್ಲ. ಆ ವೇಳೆಗೆ ಪರೀಕ್ಷಾರ್ಥ ಸ್ಫೋಟದ ಹಿಂದೆ ಕೆಆರ್‌ಎಸ್‌ ಬಳಿ ಮತ್ತೆ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಸಂಚಿರುವುದು, ಅರಣ್ಯ ವ್ಯಾಪ್ತಿಯೊಳಗೆ ಪರೀಕ್ಷಾರ್ಥ ಸ್ಫೋಟಕ್ಕೆ ಜಿಲ್ಲಾಧಿಕಾರಿ ನೀಡಿರುವ ಅನುಮತಿ, ವಿಜ್ಞಾನಿಗಳ ತಂಡ ಗಣಿ ಮಾಲೀಕರಿಂದ ಹಣ ಪಡೆದು ಪರಿಶೀಲನೆಗೆ ಬಂದಿರುವ ಬಗ್ಗೆ ಕೇಳಿಬಂದ ಆರೋಪ ಇವೆಲ್ಲವೂ ಕಾಡ್ಗಿಚ್ಚಿನಂತೆ ಎಲ್ಲಡೆ ಹರಡಿತ್ತು.
• ಶಿಲಾಪದರ ರಚನೆಯಿಂದಲೇ ವಾಸ್ತವಾಂಶ ಅರಿಯಲು ಸಾಧ್ಯ

ಪರೀಕ್ಷಾರ್ಥ ಸ್ಫೋಟಕ್ಕೆ ಹಿಂದೇಟು ಏಕೆ ?
ಪರೀಕ್ಷಾರ್ಥ ಸ್ಫೋಟಕ್ಕೆ ಅಂತಿಮ ದಿನ ಸೆ.28 ಆಗಿತ್ತು. ಸೆ.27ರಂದುರಾತ್ರಿ ವಿಜ್ಞಾನಿಗಳ ತಂಡ ಕೆಆರ್‌ಎಸ್‌ಗೆ ಆಗಮಿಸಿತ್ತು. ಅಷ್ಟರಲ್ಲಾಗಲೇ ಈ ಎಲ್ಲಾ ಆರೋಪಗಳು, ಅಣೆಕಟ್ಟೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳು ವಿಜ್ಞಾನಿಗಳ ಗಮನಕ್ಕೆ ಬಂದಿದ್ದರಿಂದ ಅವರು ಪರೀಕ್ಷಾರ್ಥ ಸ್ಫೋಟ ನಡೆಸದಿರುವುದಕ್ಕೆ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಜತೆಗೆ ರೈತರು ಹಾಗೂ ಪ್ರಗತಿಪರ ಹೋರಾಟಗಾರರು ನಡೆಸಿದ ಪ್ರತಿಭಟನೆ ಗಣಿಗಾರಿಕೆಗೆ ಜನರ ವಿರೋಧವಿರುವುದನ್ನು ವಿಜ್ಞಾನಿಗಳಿಗೆ ಮನದಟ್ಟು ಮಾಡಿಕೊಟ್ಟಿತು. ಇದರಿಂದಾಗಿ ಪರೀಕ್ಷಾ ಸ್ಫೋಟವನ್ನೂ ನಡೆಸದೆ, ಪ್ರತಿಭಟನಾಕಾರರೊಂದಿಗೂ ಮಾತಾಡದೆ ಹೋಟೆಲ್‌ನಲ್ಲಿಯೇ ಉಳಿದರು ಎಂದು ಹೇಳಲಾಗಿದೆ. 2003ರಲ್ಲಿ ಕೃಷ್ಣರಾಜಸಾಗರ ಬಳಿ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ತಜ್ಞರು ಸೂಕ್ಷ್ಮವಾಗಿಯೇ ಗಮನಸೆಳೆದಿದ್ದರು. ಆದರೆ, ಆಡಳಿತ ನಡೆಸುವವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದು ಹೆಚ್ಚಿನ ಮಟ್ಟದಲ್ಲಿ ಪ್ರಚಾರಕ್ಕೆ ಬಾರದಂತೆ ವ್ಯವಸ್ಥಿತವಾಗಿ ತಡೆಹಿಡಿಯಲಾಗಿತ್ತು ಎನ್ನಲಾಗಿದೆ.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next