Advertisement

ವೈಜ್ಞಾನಿಕವಾಗಿ ಕೊಡಗು ಮರು ನಿರ್ಮಾಣಕ್ಕೆ ಚಿಂತನೆ

06:00 AM Aug 23, 2018 | Team Udayavani |

ಬೆಂಗಳೂರು: ಮಳೆಯಿಂದ ಕೊಚ್ಚಿಹೋಗಿ ತನ್ನ ಮೂಲ ಸ್ವರೂಪಕ್ಕೇ ಧಕ್ಕೆ ತಂದುಕೊಂಡಿರುವ ಕೊಡಗಿನ ವೈಭವ ಮರುಕಳಿಸುವಂತೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದರೊಂದಿಗೆ
ಕೊಡಗಿನ ಪುನರ್‌ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲು ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕೊಡಗಿನಲ್ಲಿ ಮಳೆಯಿಂದ ಕೊಚ್ಚಿಹೋಗಿರುವ ಗ್ರಾಮಗಳ ಮರು ನಿರ್ಮಾಣ,ಬೆಟ್ಟ-ಗುಡ್ಡಗಳ ಸಂರಕ್ಷಣೆ ಜತೆಗೆ ಮತ್ತೆ ಮಳೆಗೆ ಮಣ್ಣು ಕುಸಿಯದಂತೆ ನೋಡಿಕೊಳ್ಳಲು ತಜ್ಞರಸಲಹೆ, ವೈಜ್ಞಾನಿಕ ದೃಷ್ಟಿಕೋನದೊಂದಿಗೆ  ಕಾರ್ಯಸಾಧ್ಯತಾ ವರದಿಯನ್ನು ಸಿದಟಛಿಪಡಿಸಲು ತೀರ್ಮಾನಿಸಿದೆ. ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಈ ಹಿಂದೆ ಇದಕ್ಕಿಂತಲೂ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ ಯಾದರೂ ಗುಡ್ಡ, ಅರಣ್ಯಗಳಿಂದ ಕೂಡಿರುವ ಕೊಡಗಿನಲ್ಲಿ ಜನ,ಜಾನುವಾರುಗಳಿಗೆ ಆಗಿರುವುದಕ್ಕಿಂತ ಹೆಚ್ಚು ಹಾನಿ ಪರಿಸರದ ಮೇಲಾಗಿದೆ. ಅರ್ಧ ಹಸಿರನ್ನೇ ಮಳೆನೀರು ನುಂಗಿಹಾಕಿದೆ.

ಬೆಟ್ಟ-ಗುಡ್ಡಗಳು ಕುಸಿದು ಪರಿಸರ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.ಪರಿಸರ ನಾಶದಿಂದ ಹವಾಮಾನ ವೈಪರೀತ್ಯ
ಉಂಟಾಗುವ ಭೀತಿಯ ಜತೆಗೆ ಹಳ್ಳಗಳ ನೀರಿನ ಹರಿವು ದಾರಿ ತಪ್ಪಿದ್ದರಿಂದ ಜೀವನದಿ ಕಾವೇರಿ ಮೇಲೂ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ. ಹೀಗಾಗಿ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿಯೊಂದಿಗೆ ಹಿಂದಿನಂತೆ ಪರಿಸರ ಸ್ನೇಹಿ ಕೊಡಗನ್ನು ಮರುನಿರ್ಮಾಣ ಮಾಡುವ ಅಗತ್ಯವೂ ಇರುವುದರಿಂದ ಸರ್ಕಾರ ಈ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳಿಗೆ ಮಳೆ ಜತೆಗೆ ಭೂ ಕುಸಿತ ಪ್ರಮುಖ ಕಾರಣ. ಇದರ ಪರಿಣಾಮ ನೈಸರ್ಗಿಕ ಅರಣ್ಯವೂ ನಾಶವಾಗಿದೆ.ಸಾಕಷ್ಟು ಹಳ್ಳಿಗಳು ಕೊಚ್ಚಿಹೋಗಿವೆ. ಹೀಗಾಗಿ ಕೊಡಗು ಮರುನಿರ್ಮಾಣ ಮಾಡಬೇಕಾದರೆ ಮೊದಲು ಮಣ್ಣು ಕುಸಿತಕ್ಕೆ ಕಾರಣ ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ತಜ್ಞರು ಭೂ ಕುಸಿತಕ್ಕೆ ಹಲವು ಕಾರಣಗಳನ್ನು ತಿಳಿಸಿದ್ದಾರೆ.

Advertisement

ಆದರೆ, ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುವುದರಿಂದ ಈ ಕುರಿತು ಹೆಚ್ಚು ಅನುಭವ ಮತ್ತು ವೈಜ್ಞಾನಿಕ ತಿಳಿವಳಿಕೆ ಇರುವ ತಜ್ಞರನ್ನು ಹಿಮಾಚಲ ಪ್ರದೇಶದಿಂದ ಕರೆಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಭೂ ಕುಸಿತಕ್ಕೆ ಕಾರಣಗಳನ್ನು ತಿಳಿದುಕೊಂಡ ಬಳಿಕ ಅದಕ್ಕೆ ತಜ್ಞರಿಂದಲೇ ಪರಿಹಾರ ಹೇಗೆ ಎಂಬುದನ್ನು ತಿಳಿದುಕೊಳ್ಳಲಾಗುವುದು. ಬಳಿಕ ಕಾರ್ಯ ಸಾಧ್ಯತಾ ವರದಿ ಸಿದಟಛಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.

ಯಾವ ರೀತಿಯಲ್ಲಿರಲಿದೆ ಯೋಜನೆ?: ಸಾಮಾನ್ಯವಾಗಿ ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ಕಾಲೋನಿಗಳನ್ನು ನಿರ್ಮಿಸಿ ಮನೆಗಳನ್ನು ಕೊಡಲಾಗುತ್ತಿತ್ತು. ಆದರೆ, ಕೊಡಗಿನಲ್ಲಿ ಆ ರೀತಿ ಮಾಡುವುದು ಕಷ್ಟಸಾಧ್ಯ. ಏಕೆಂದರೆ, ಅಲ್ಲಿನ ಪರಿಸ್ಥಿತಿಯೇ ಭಿನ್ನ. ಸುತ್ತಲೂ ಜಮೀನು ಇದ್ದರೆ ಅದರ ಮಧ್ಯೆ ಮನೆ ಇರುತ್ತದೆ. ಜನರು ಜಮೀನಿನಲ್ಲಿ ಕೃಷಿ ಜತೆಗೆ ಸುತ್ತಲಿನ ಪರಿಸರದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಹೀಗಾಗಿ ಜಮೀನಿನ ಮಧ್ಯೆಯೇ ಮನೆಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಮತ್ತೆ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾಗುತ್ತದೆ.

ಅದೇ ರೀತಿ ಗುಡ್ಡ ಕುಸಿತದಿಂದ ಪರಿಸರದ ಮೇಲಾಗಿರುವ ಹಾನಿಯನ್ನು ಯಾವ ರೀತಿ ಸರಿಪಡಿಸಬಹುದು ಎಂಬ ಬಗ್ಗೆಯೂ
ಯೋಚಿಸಬೇಕಾಗುತ್ತದೆ. ಏಕೆಂದರೆ, ಮೇಲಿನಿಂದ ಕುಸಿದ ಮಣ್ಣನ್ನು ಮತ್ತೆ ಅಲ್ಲಿ ತುಂಬುವುದು ಅಸಾಧ್ಯ. ಹೀಗಾಗಿ ಅದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಮತ್ತೆ ಮಣ್ಣು ಕುಸಿಯದಂತೆ ನೋಡಿಕೊಳ್ಳಬೇಕು. ಅಲ್ಲದೆ, ಸಣ್ಣ ಹಳ್ಳಗಳ ಮೂಲಕ ನೀರಿನ ಹರಿವಿಗೂ ಅವಕಾಶ ಮಾಡಿಕೊಟ್ಟು ಹಿಂದೆ ಇದ್ದಂತೆ ಈ ಹಳ್ಳಗಳು ಕಾವೇರಿ ನದಿಗೆ ಸೇರುವಂತೆ ನೋಡಿಕೊಳ್ಳಬೇಕು. ಇದಕ್ಕೆ ಯಾವ ರೀತಿಯ ಯೋಜನೆ ರೂಪಿಸಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಲು ಸರ್ಕಾರ ಮುಂದಾಗಿದೆ.ಕಾರ್ಯಸಾಧ್ಯತಾ ವರದಿ ಸಿದ್ಧವಾದ ಬಳಿಕವಷ್ಟೇಇದರ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಹಲವು ಇಲಾಖೆಗಳ ಸಹಕಾರ
ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು. ಬಳಿಕ ಅರಣ್ಯ ಮತ್ತು ಪರಿಸರ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌,ಲೋಕೋಪಯೋಗಿ, ಮೂಲ ಸೌಕರ್ಯ ಅಭಿವೃದ್ಧಿ, ಯೋಜನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅದನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚಿಸಲಾಗುವುದು. ಏಕೆಂದರೆ, ಕೊಡಗು ಮರು ನಿರ್ಮಾಣದ ವೇಳೆ ಅರಣ್ಯ ಮತ್ತು ಪರಿಸರ ಕಾಪಾಡಿಕೊಳ್ಳುವುದರೊಂದಿಗೆ ಹಳ್ಳಿಗಳನ್ನೂ ನಿರ್ಮಿಸಬೇಕಿದೆ. ಅಲ್ಲದೆ, ರಸ್ತೆಗಳ ನಿರ್ಮಾಣ ಕೆಲಸವೂ ಆಗಬೇಕಿದೆ. ಹೀಗಾಗಿ ಹಲವು ಇಲಾಖೆಗಳ ಸಹಕಾರದೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಯೋಚಿಸಲಾಗಿದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣ ಕ್ರೋಢೀಕರಣಕ್ಕೂ ಹಲವು ಮಾರ್ಗ
ಕೊಡಗು ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಾರ್ಪೊರೇಟ್‌ ಕಂಪೆನಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. ವಿಕೋಪ ಪರಿಹಾರಕ್ಕಾಗಿ ಕೇಂದ್ರದಿಂದಲೂ ನೆರವು ಪಡೆಯಲಾಗುತ್ತದೆ.ಇದರ ಜತೆಗೆ ಕೊಡಗು ಮರು ನಿರ್ಮಾಣ ಮಾಡುವ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದಟಛಿವಾದ ಬಳಿಕ ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಮತ್ತು ಕಾರ್ಪೋರೇಟ್‌ ಕಂಪೆನಿಗಳ ನೆರವು ಪಡೆಯಲು ಯೋಚಿಸಲಾಗಿದೆ. ರಾಜ್ಯದ ದೃಷ್ಟಿಯಿಂದ ಕೊಡಗು ಪುನರ್‌ನಿರ್ಮಾಣ ಅಗತ್ಯವಾಗಿದ್ದು, ಹಣಕಾಸು ಸಮಸ್ಯೆ ಎದುರಾಗದು. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

– ಎಂ. ಪ್ರದೀಪ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next