Advertisement

ಮುಟ್ಟಿನ ಕುರಿತು ವೈಜ್ಞಾನಿಕ ತಿಳಿವಳಿಕೆ ಅಗತ್ಯ

05:57 PM Aug 05, 2022 | Team Udayavani |

ದೊಡ್ಡಬಳ್ಳಾಪುರ: ಮುಟ್ಟಾದವರನ್ನು ಊರ ಹೊರಗೆ ಹಾಕಿ ಅಮಾನವೀಯವಾಗಿ ನಡೆಸುವ ಪದ್ಧತಿ ಇಂದಿಗೂ ಜೀವಂತವಾಗಿರುವುದು ದುರಂತದ ಸಂಗತಿಯಾಗಿದೆ. ಮುಟ್ಟು ಎಂಬುದು ಹೆಣ್ಣಿನ ದೇಹದ ಸಹಜಕ್ರಿಯೆಯಾಗಿದ್ದು, ಈ ಬಗ್ಗೆ ಆರಂಭದಿಂದಲೇ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್‌ ತಿಳಿಸಿದರು.

Advertisement

ಮಿಟು ಫೌಂಡೇಷನ್‌ ಸಂಸ್ಥೆ ಹಾಗೂ ಯುವ ಸಂಚಲನದ ಸಹಯೋಗದೊಂದಿಗೆ ಬಾಶೆಟ್ಟಿಹಳ್ಳಿಯ ಎಜಾಕ್ಸ್ ಪಬ್ಲಿಕ್‌ ಶಾಲೆಯಲ್ಲಿ ಮುಟ್ಟಿಗೆ ಸಂಬಂಧಿಸಿದ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ತಡೆ ನಡೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ಮಾನಸಿಕ, ದೈಹಿಕ ಆರೋಗ್ಯ ಎರಡನ್ನೂ ನಿಭಾಯಿಸಬೇಕು ಎಂಬುದನ್ನು ಈ ಅಭಿಯಾನದ ಮೂಲಕ ಎಲ್ಲಾ ಬಾಲಕಿಯರು ಅರಿಯಬೇಕು. ಮುಟ್ಟಿನ ನೋವನ್ನು ಸಹಿಸುವ ಮೂಲಕ ಮುಂದೆ ಸಹಿಸಬಹುದಾದ ದೊಡ್ಡ ನೋವುಗಳಿಗೆ ಸಿದ್ಧರಾಗಬೇಕಿದೆ ಎಂದರು.

ಮಿಟು ಸಂಸ್ಥೆಯ ಟ್ರಸ್ಟಿ ಸುಮನಾ ಕಾರ್ತಿಕ್‌ ಮಾತನಾಡಿ, ಮಿಟು ಸಂಸ್ಥೆ ಕಳೆದ 13 ವರ್ಷಗಳಿಂದ ಸಮುದಾಯದ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿಗಳೊಂದಿಗೆ ಮುಟ್ಟಿನ ವಿಷಯ, ಮರುಬಳಕೆಯ ಬಟ್ಟೆ ಪ್ಯಾಡ್‌ಗಳ ಬಳಕೆಯ ಕುರಿತು, ಮಹಿಳಾ ಸಬಲೀಕರಣ ಮತ್ತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕನ್ನು ವಿರೋಧಿಸಿ ಕಾಟನ್‌ ಉತ್ವನ್ನಗಳ ಮರುಬಳಕೆಯ ಕುರಿತು ಸಂಸ್ಥೆ ತೊಡಗಿಸಿಕೊಂಡಿರುವ ರೀತಿ ಕುರಿತು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪರಮೇಶ್ವರ್‌ ಮಾತನಾಡಿ, ಇಂದಿನ ಮಕ್ಕಳಿಗೆ ಮುಟ್ಟಿನ ಅರಿವು ಎನ್ನುವುದು ಅಗತ್ಯವಾಗಿ ಬೇಕಿರುವ ವಿಷಯವಾಗಿದೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಜಂತುಹುಳುವಿನ ಬಾಧೆಯಿಂದ ಆರೋಗ್ಯ ಇನ್ನು ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಈ ರೀತಿಯ ತೊಂದರೆಗಳು ಕಂಡುಬಂದಲ್ಲಿ ಮುಖ್ಯಶಿಕ್ಷಕರಿಗೆ ಹಾಗೂ ಆಶಾ ಕಾರ್ಯಕರ್ತರ ಗಮನಕ್ಕೆ ತಂದು ಸೂಕ್ತ ಚಿಕಿತ್ಸೆ ಪಡೆಯುವಂತಾಗಬೇಕು ಎಂದರು.

ಅರಿವು ಮೂಡಿಸುವುದು ಅಗತ್ಯ: ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌ ಮಾತನಾಡಿ, ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 100 ಕೋಟಿ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂಬ ದಾಖಲೆಗಳನ್ನು ಹಲವಾರು ಸಮೀಕ್ಷೆಗಳು ನಮಗೆ ಒದಗಿಸುತ್ತವೆ. ಅಂದರೆ ಪೌಷ್ಟಿಕ ಆಹಾರದ ಅಗತ್ಯತೆ ಹಾಗೂ ಮುಟ್ಟಿನ ಜಾಗೃತಿ ಹೆಣ್ಣುಮಕ್ಕಳಿಗೆ ಎಷ್ಟು ಮುಖ್ಯ ಎಂಬುದು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭಾಗವಾಗಿ ಅರಿವು ಮೂಡಿಸುವುದು ಅಗತ್ಯ ಎಂದರು.

Advertisement

ತಡೆ ನಡೆ ಅಭಿಯಾನ: ಶಾಲಾಹಂತದಲ್ಲಿಯೇ ಈ ವಿಚಾರವಾಗಿ ಅರಿವನ್ನು ನೀಡಿ ಮಕ್ಕಳನ್ನು ಮಾನಸಿಕವಾಗಿ ಮುಟ್ಟಿನ ವಿಚಾರದಲ್ಲಿ ಸದೃಢಗೊಳಿಸುವುದೇ ಈ ತಡೆ ನಡೆ ಅಭಿಯಾನದ ಮೂಲ ಉದ್ದೇಶವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಪ್ರೌಢಶಾಲಾ ಹೆಣ್ಣುಮಕ್ಕಳಿಗೆ ಮುಟ್ಟಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಟ್ಟಿನ ರಕ್ತ, ಬಿಳಿಮುಟ್ಟು, ಮುಟ್ಟಿನ ಸಮಯದಲ್ಲಿ ಬಳಸುವ ಉತ್ಪನ್ನಗಳು ಮತ್ತು ಸ್ವಚ್ಛತೆ, ಪೌಷ್ಟಿಕ ಆಹಾರ ಹಾಗೂ ಮುಟ್ಟಿಗೆ ಸಂಬಂಧಿಸಿದ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ತಡೆ ನಡೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಎಜಾಕ್ಸ್‌ ಸಂಸ್ಥೆಯ ಗಣಪತಿ, ಎಸ್‌.ಎನ್‌. ಮಂಜುನಾಥ್‌, ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ಮಿಟು ಸಂಸ್ಥೆಯ ತರಬೇತುದಾರರಾದ ಗಾಯಿತ್ರಿ, ಸರಸ್ವತಿ, ಯುವ ಸಂಚಲನ ತಂಡದ ದಿವಾಕರ್‌, ನವೀನ್‌, ಮದನ್‌, ಸಂಧ್ಯಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next