Advertisement
ಪ್ರತಿ ಧರ್ಮದಲ್ಲೂ ಮದರಂಗಿಯನ್ನು ಪವಿತ್ರೆಂದು ಪರಿಗಣಿಸಲಾಗುತ್ತದೆ. ಹಿಂದೂ ಅಥವಾ ಮುಸ್ಲಿಂ ಧರ್ಮದ ವಿವಾಹವೇ ಇರಲಿ ವಧು-ವರರು ಕೈಗೆ ಮೆಹಂದಿ ಹಚ್ಚುವುದು ಎಲ್ಲರಲ್ಲೂ ಸಾಮಾನ್ಯವಾಗಿದೆ.ಮದುವೆ ಮಾತ್ರವಲ್ಲದೇ ಇತರ ಧಾರ್ಮಿಕ ಕಾರ್ಯಕ್ರಮಗಳಿಗೂ ತಮ್ಮ ಕೈ-ಕಾಲುಗಳಿಗೆ ಮದರಂಗಿ ಹಚ್ಚಿಕೊಳ್ಳುತ್ತಾರೆ. ಮದರಂಗಿ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಹಿಂದೂ ಧರ್ಮದಲ್ಲಿ ಮದರಂಗಿಯನ್ನು 16 ಶೃಂಗಾರಗಳ ಭಾಗವೆಂದು ಪರಿಗಣಿಸಲಾಗಿದೆ.ಭಾರತ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಮದರಂಗಿ ಹಚ್ಚಿಕೊಳ್ಳುತ್ತಾರೆ. ಇದು ಕೈಗಳಿಗೆ ಮಾತ್ರವಲ್ಲದೇ ಕೂದಲಿಗೂ ಹಚ್ಚಿಕೊಳ್ಳುವುದರಿಂದ ನೈಸರ್ಗಿಕ ಬಣ್ಣಕ್ಕಾಗಿ ಹಾಗೂ ಕೂದಲು ತಂಪಗಾಗಿರಲು ಬಳಸುತ್ತಾರೆ.
Related Articles
Advertisement
ಮದುವೆ ಅಥವಾ ಯಾವುದೇ ಸಮಾರಂಭ ಆಗಿರಲಿ ಕೈ ಕೆಂಪೇರದೇ ಸಡಗರವೇ ಇಲ್ಲ. ಮದುಮಕ್ಕಳಿಗಂತೂ ಮದರಂಗಿ ಅಲಂಕಾರ ಹೆಚ್ಚು ಮೆರುಗು ನೀಡುವುದಂತೂ ಸುಳ್ಳಲ್ಲ. ಹೀಗಾಗಿ ಮದರಂಗಿ ಹಚ್ಚಿದರೆ ಸಾಲದು ಅದು ಕೆಂಪಾಗಬೇಕು ಎಂಬುದು ಎಲ್ಲರ ಆಸೆ. ಇದಕ್ಕಾಗಿ ಹೆಣ್ಣುಮಕ್ಕಳು ಹಲವಾರು ಪ್ರಯತ್ನ ಪಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮದರಂಗಿ ಹಾಕುವುದೂ ಒಂದು ರೀತಿಯ ಉದ್ಯಮವಾಗಿಬಿಟ್ಟಿದೆ. ಇದಕ್ಕೆಂದೆ ಹಲವು ಕೋರ್ಸ್ ಗಳು ಕೂಡಾ ಇವೆ. ಕೈಗೆ ಮಾತ್ರ ಆದರೆ ಇಷ್ಟು ರೇಟ್, ಕಾಲಿಗೂ ಮದರಂಗಿ ಬೇಕೆಂದರೆ ಒಂದು ರೇಟ್. ಹೀಗೆ ವಿವಿಧ ಬಿಸಿನೆಸ್ ಗಳು ಮೆಹಂದಿ ಹಾಕುವುದರಲ್ಲಿದೆ. ಮದರಂಗಿ ಹಾಕಿದ ಮೇಲೆ ಅದು ಹೆಚ್ಚು ಕೆಂಪಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇತ್ತೀಚೆಗಂತೂ ಫಾಸ್ಟ್ ಮೆಹಂದಿ, ಸ್ಟಿಕರ್ ಮೆಹಂದಿಗಳದ್ದೇ ಹವಾ. ಅದರಲ್ಲೂ ಹಲವು ವಿಧಗಳೂ ಹುಟ್ಟಿಕೊಂಡಿವೆ. ಕಡಿಮೆ ಸಮಯದಲ್ಲಿ ಹಾಕಿಸಿಕೊಳ್ಳುವ ಮೆಹಂದಿ ಇದು ಎಂದರೆ ತಪ್ಪಾಗಲ್ಲ.
ಮದರಂಗಿ ಶಾಸ್ತ್ರದ ದಿನ ಮದುಮಗಳ ಮದರಂಗಿ ಎಷ್ಟು ಕೆಂಪಗಾಗುತ್ತೋ ಗಂಡನಾಗುವವನು ಅಷ್ಟು ಜಾಸ್ತಿ ಪ್ರೀತಿ ಮಾಡುತ್ತಾನಂತೆ ಎಂದು ರೇಗಿಸುವ ಮಾತುಗಳೂ ಕೂಡ ರೂಢಿಯಲ್ಲಿದೆ. ಹಾಗಾದರೆ ಕೈಗೆ ಹಚ್ಚಿದ ಮದರಂಗಿ ಹೆಚ್ಚು ಕೆಂಪಗಾಗಲು ಏನು ಮಾಡಬೇಕು… ಮನೆಯಲ್ಲಿಯೇ ಯಾವೆಲ್ಲಾ ವಸ್ತುಗಳನ್ನು ಉಪಯೋಗಿಸಿ ಹಚ್ಚಿದ ಮದರಂಗಿ ಕೆಂಪಾಗುತ್ತದೆ.. ತಿಳಿಯೋಣ…
ನಿಂಬೆ ಮತ್ತು ಸಕ್ಕರೆಯ ಮಿಶ್ರಣವನ್ನು ಹಚ್ಚಿದರೆ ಮದರಂಗಿಯ ಬಣ್ಣ ಕೆಂಪಗಾಗುತ್ತದೆ ಎನ್ನುವುದು ಹಳೆಯ ಕಾಲದಿಂದಲೂ ರೂಢಿಯಲ್ಲಿರುವ ಮಾತು. ಅದು ನಿಜ ಕೂಡ ಹೌದು. ನಿಂಬೆ ಮತ್ತು ಸಕ್ಕರೆ ಮೆಹಂದಿಯ ಮೇಲೆ ಬಿದ್ದಾಗ ಅದು ಚರ್ಮವನ್ನು ಕೆಂಪಗಾಗಿಸುತ್ತದೆ. ಮೆಹಂದಿ ಹಚ್ಚಿದ ಮೇಲೆ ಎರಡು ಬಾರಿ ಇದನ್ನು ಹಚ್ಚಿದರೆ ಸಾಕು. ನಿಮ್ಮ ಕೈಗೆ ಹಾಕಿರುವ ಮದರಂಗಿ ಕೆಂಪಾಗುವುದರಲ್ಲಿ ಅನುಮಾನವಿಲ್ಲ.
ಮದರಂಗಿ ಹಚ್ಚಿದ ಬಳಿಕ ಅದು ಸ್ಚಲ್ಪ ಒಣಗಿದ ಮೇಲೆ ಅದರ ಮೇಲೆ ತುಪ್ಪ ಹಚ್ಚಿಕೊಳ್ಳಿ. ಇದು ಕೂಡ ನಿಮ್ಮ ಮೆಹಂದಿಯನ್ನು ಬಹು ಬೇಗ ಕೆಂಪಗೆ ಕಾಣುವಂತೆ ಮಾಡುತ್ತದೆ. ಪರಿಣಾಮಕಾರಿಯಾದ ಈ ವಿಧಾನ ಸುಲಭವೂ ಹೌದು. ಮದರಂಗಿ ಕೆಂಪಾಗಲು ಸಾಂಬಾರು ಪದಾರ್ಥಗಳೂ ಕೂಡ ನೆರವಾಗುತ್ತದೆ. ಲವಂಗವನ್ನು ಮೆಹಂದಿಯ ಬಣ್ಣ ಕೆಂಪಗಾಗಲು ಬಳಸಲಾಗುತ್ತದೆ. ಇದು ಮೆಹಂದಿ ಹೆಚ್ಚು ದಿನಗಳ ಕಾಲ ಉಳಿಯುವಂತೆ ಕೂಡ ಮಾಡುತ್ತದೆ.
ಒಂದು ಬಾಣಲೆಯ ಮೇಲೆ ಆರೇಳು ಲವಂಗಗಳನ್ನು ಬಿಸಿ ಮಾಡಿ. ನಂತರ ಕೈಗಳನ್ನು ಬಾಣಲೆಯಿಂದ ಬರುತ್ತಿರುವ ಲವಂಗದ ಸುವಾಸನೆಯುಕ್ತ ಹೊಗೆ ತಾಗುವಂತೆ ಹಿಡಿದುಕೊಳ್ಳಿ. ಎಷ್ಟು ಬಿಸಿ ತಾಗುವವರೆಗೆ ಹಿಡಿದುಕೊಳ್ಳಲು ಸಾಧ್ಯವೋ ಅಷ್ಟು ಹೊತ್ತು ಹಿಡಿದುಕೊಳ್ಳಿ. ನಂತರ ಕೈಗಳನ್ನು ನಿಧಾನಕ್ಕೆ ಉಜ್ಜಿ ಒಣಗಿದ ಮೆಹಂದಿಯನ್ನು ಉದುರಿಸಿಕೊಳ್ಳಿ. ಇದರಿಂದ ಚೆಂದದ ಮೆಹಂದಿ ಡಿಸೈನ್ ಕೆಂಪಗಾಗಿ ಕಾಣಿಸಿಕೊಳ್ಳುತ್ತದೆ.
ಮೆಹಂದಿಯ ಬಣ್ಣ ಕೆಂಪಗಾಗಲು ವಿಕ್ಸ್ ಉತ್ತಮ ಮನೆಮದ್ದು. ಕೈಗೆ ಮೆಹಂದಿ ಹಚ್ಚಿದ ನಂತರ ಅದು ಆರಿದ ಮೇಲೆ ವಿಕ್ಸ್ ವೆಪೊರ್ ರಬ್ ಅಥವಾ ಟೈಗರ್ ಬಾಮ್ ಕೈಗೆ ಹಚ್ಚಿಕೊಳ್ಳಿ. ಇದು ನಿಮ್ಮ ಕೈಯಲ್ಲಿನ ಮೆಹಂದಿ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಹೆಚ್ಚು ದಿನ ಮೆಹಂದಿ ಕೆಂಪಾಗಿ ಉಳಿಯುವಂತೆ ಮಾಡುತ್ತದೆ.
ಮದರಂಗಿ ಕೆಂಪಾಗಬೇಕೆಂದರೆ ಮದರಂಗಿ ಹಚ್ಚುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರಿಂದ ಕೈಗೆ ಮೆಹಂದಿ ಚೆನ್ನಾಗಿ ಅಂಟಿಕೊಳ್ಳುತ್ತದೆ. ಇದರಿಂದ ಮೆಹಂದಿಯ ಡಿಸೈನ್ ಕೂಡ ಅಂದವಾಗಿ ಮೂಡಿ ಬರುತ್ತದೆ. ಒಂದು ಬಾರಿ ಮದರಂಗಿ ಹಾಕಿಕೊಂಡ ಮೇಲೆ ಕನಿಷ್ಷ 6 ರಿಂದ 8 ಗಂಟೆಗಳ ಕಾಲ ಇಟ್ಟುಕೊಳ್ಳಬೇಕು. 12 ಗಂಟೆಗಳ ಕಾಲ ಇಟ್ಟುಕೊಂಡರೆ ಇನ್ನೂ ಒಳ್ಳೆಯದು.
ಮದರಂಗಿ ಹೆಚ್ಚು-ಹೆಚ್ಚು ಕೆಂಪಗೆ ಕಾಣಬೇಕೆಂದರೆ ಹೆಚ್ಚು ಹೊತ್ತು ಕೈಮೇಲೆ ಇದ್ದಷ್ಟು ಒಳ್ಳೆಯದು. ಮದರಂಗಿ ತೆಗೆಯುವಾಗ ಸೋಪ್, ಹ್ಯಾಂಡ್ ವಾಷ್ ಅಥವಾ ನೀರಿನಲ್ಲಿ ಕೈತೊಳೆಯುವುದು ಬೇಡ. ಮದರಂಗಿ ಸಂಪೂರ್ಣ ಒಣಗಿದ ಮೇಲೆ ಎರಡೂ ಕೈಗಳನ್ನು ಚೆನ್ನಾಗಿ ಉಜ್ಜಿ ಹಚ್ಚಿದ ಮದರಂಗಿ ಬಿಡಿಸಿಕೊಳ್ಳುವುದು ಉತ್ತಮ.
*ಕಾವ್ಯಶ್ರೀ