Advertisement

ವಿದ್ಯಾರ್ಥಿಗಳ ಮನದಲ್ಲಿ ಮೂಡಿದ ವೈಜ್ಞಾನಿಕ ಮಾದರಿ

02:25 AM Dec 21, 2018 | Karthik A |

ಉಡುಪಿ: ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿ ಅಡಗಿರುವ ನವೀನ ರೀತಿಯ ವೈಜ್ಞಾನಿಕ ಪ್ರತಿಭೆ ಸೈಂಟ್‌ ಸಿಸಿಲಿ ಸಮೂಹ ಸಂಸ್ಥೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ವತಿಯಿಂದ ಗುರುವಾರ ಆಯೋಜಿಸಿದ್ದ ಇನ್‌ಸ್ಪೈರ್‌ ಅವಾರ್ಡ್‌ ಪ್ರದಾನ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

Advertisement

ಕಲುಷಿತ ವಾತಾವರಣದಿಂದ ಶುದ್ಧ ಗಾಳಿ ಪಡೆಯುವ ಕುರಿತು ಸಂಶೋಧಿಸಿರುವ ಯಂತ್ರ, ವಿದ್ಯಾರ್ಥಿ ಸುಮುಖ್‌ ತಯಾರಿಸಿದ ಸಮುದ್ರದಲ್ಲಿ ಬೆರಕೆಯಾಗುವ ತೈಲವನ್ನು ಶುದ್ದೀಕರಿಸುವ ಮಾದರಿ, ಸಂಪತ್‌ ತಯಾರಿಸಿರುವ ಅಕ್ವಾಫೋನಿಕ್ಸ್‌ ಮಾದರಿಯಲ್ಲಿ ಮೀನು, ತರಕಾರಿ ಹಾಗೂ ಪಶು ಸಾಕಾಣಿಕೆಯನ್ನು ಒಟ್ಟಾಗಿ ಸೇರಿಸಿ ಮಾಡುವ ಕೃಷಿ ಪದ್ದತಿ, ವಿದ್ಯಾರ್ಥಿನಿ ಸನಿಹ ಸಿದ್ಧಪಡಿಸಿರುವ ರಸ್ತೆಯ ಟ್ರಾಫಿಕ್‌ನಿಂದ ವಿದ್ಯುತ್‌ ತಯಾರಿಕೆ ಹಾಗೂ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಅಪಘಾತ ತಡೆಯುವ ಮಾದರಿ, ಸಂಜನಾ ಆಚಾರ್ಯ ತಯಾರಿಕೆಯ ಜೈಂಟ್‌ ವೀಲ್‌ ಮಾದರಿಯ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಜಿತೇಶ್‌ ಸಿದ್ದಪಡಿಸಿರುವ ಕೊಳಚೆ ನೀರನ್ನು ನೈಸರ್ಗಿಕ ವಿಧಾನದಲ್ಲಿ ಶುದ್ದೀಕರಿಸುವ ಮಾದರಿ, ವಿನ್ಯಾಸ್‌ ಶೆಟ್ಟಿ ಸಿದ್ದಪಡಿಸಿರುವ ಸೈಕಲ್‌ನಿಂದ ವಿದ್ಯುತ್‌ ಉತ್ಪಾದನೆ ಮತ್ತು ಅದೇ ವಿದ್ಯುತ್‌ನಿಂದ ಏರು ಪ್ರದೇಶದಲ್ಲಿ ಸ್ವಯಂ ಸೈಕಲ್‌ ಚಾಲನೆ ಹಾಗೂ ಸೋಲಾರ್‌ ವ್ಯವಸ್ಥೆಯಿಂದ ಚಲಿಸುವ ಸೈಕಲ್‌, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಕಾಡು ಪ್ರಾಣಿಗಳು ಬೇಲಿ ಸ್ಪರ್ಶಿಸಿದ ಕೂಡಲೇ ಸೈರನ್‌ ಮೊಳಗಿ ಕಾಡು ಪ್ರಾಣಿ ಹೆದರಿ ಓಡಿ ಹೋಗುವ ತಂತ್ರಗಾರಿಕೆ ಮತ್ತು ರೈತರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಹೀಗೆ ಅನೇಕ ಮಾದರಿಗಳು ಪ್ರದರ್ಶನಗೊಂಡವು.


ಕಾಡು ಪ್ರಾಣಿಗಳಿಗೆ ಮಾಡಿದ ತಂತ್ರಜ್ಞಾನ ಕಡಿಮೆ ವಿದ್ಯುತ್‌ ಹಾಗೂ ಸೋಲಾರ್‌ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸಲಿದೆ. ಆದರ್ಶ ಶೆಟ್ಟಿ ಸಿದ್ದಪಡಿಸಿರುವ ಟ್ರಾಷ್‌ ಕ್ಲೀನರ್‌ ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್‌ ಮತ್ತು ಇತರ ತ್ಯಾಜ್ಯ ತೆಗೆಯಲಿದೆ. ಧನುಷ್‌ ಪೂಜಾರಿ ಸಿದ್ದಪಡಿಸಿರುವ ಮನೆ ಮೇಲೆ ಬೀಳುವ ನೀರಿನಿಂದ ವಿದ್ಯುತ್‌ ತಯಾರಿಕೆ ಮಾದರಿ, ಪ್ಲಾಸ್ಟಿಕ್‌ ಸುಡುವ ಓವನ್‌, ಸೌರಶಕ್ತಿ ಚಾಲಿತ ರೈಲು, ಕತ್ತಲಾದರೆ ಸ್ವಯಂ ಚಾಲಿತವಾಗಿ ಬೆಳಗುವ ಸೋಲಾರ್‌ ದಾರಿದೀಪ, ಕಾಯಿನ್‌ ಬಾಕ್ಸ್‌ ರೀತಿಯಲ್ಲಿ ಹಣ ಹಾಕಿದರೆ ಹಾಲು ಬರುವ ಯಂತ್ರ, ಸ್ಮಾರ್ಟ್‌ ಸಿಟಿ ಯೋಜನೆ, ಭೂಕಂಪನ ಮುನ್ಸೂಚನೆ ವ್ಯವಸ್ಥೆ ಮುಂತಾದ ವಿನೂತನ ಹಲವು ರೀತಿಯ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ದಪಡಿಸಿ ಪ್ರದರ್ಶಿಸಿದರು.

ಕೋಣೆಗಳನ್ನು ಶುಚಿಗೊಳಿಸುವ ಯಂತ್ರ, ಲೇಸರ್‌ ಸೆಕ್ಯುರಿಟಿ ಸಿಸ್ಟಮ್‌, ಸೋಲಾರ್‌ ಬಸ್‌, ಡ್ರೋನ್‌, ಇಲೆಕ್ಟ್ರಿಕ್‌ ಜನರೇಟರ್‌, ಏರ್‌ಕಾರು, ಫ್ರೀ ಎನರ್ಜಿ ವಾಟರ್‌ ಪಂಪ್‌, ವ್ಯಾಕ್ಯೂಮ್‌ ಕ್ಲೀನರ್‌, ಸೋಲಾರ್‌ ಮೊಬೈಲ್‌ ಚಾರ್ಜರ್‌, ಸ್ಟ್ರೀಮ್‌ ಜನರೇಟರ್‌, ಮಹಡಿ ಮೇಲಿನಿಂದ ಬೀಳುವ ನೀರಿನಿಂದ ಜಲ ವಿದ್ಯುತ್‌ ಉತ್ಪಾದನೆ, ಅನಿಲ ಸೋರಿಕೆ ಪತ್ತೆ ಯಂತ್ರ, ನೀರು ಹೆಚ್ಚಾಗಿ ಹೊರಸೂಸುವ ಸಂದರ್ಭ ಬರುವ ಎಚ್ಚರಿಕೆ, ಗಾಳಿ ಯಂತ್ರ, ಸ್ಮಾರ್ಟ್‌ ಸ್ಟ್ರೀಟ್‌ ಲೈಟ್‌, ಸ್ಟೀಮ್‌ ಪವರ್‌, ಆಟೋಮೆಟಿಕ್‌ ವಾಟರ್‌ ಹೀಟರ್‌, ಸೌರ ರುದ್ರಭೂಮಿ, ಹೈಡ್ರಾಲಿಕ್‌ ಸಿಟಿ, ಜಲಮಾಲಿನ್ಯ ತಡೆ, ಸಾಬೂನು ತಯಾರಿ, ಪ್ಲಾಸ್ಟಿಕ್‌ ಇಂಟರ್‌ಲಾಕ್‌ ಬ್ಲಾಕ್‌, ಸಮುದ್ರದ ನೀರಿನಿಂದ ತೈಲಾಂಶದ ಬೇರ್ಪಡಿಸುವಿಕೆ, ಇಲೆಕ್ಟ್ರಿಕ್‌ ಬೋಟ್‌, ಸೋಲಾರ್‌ ರೈಲು, ಸೋಲಾರ್‌ ಕುಕ್ಕರ್‌, ವಾಹನಗಳ ಸ್ಪೀಡ್‌ ಗವರ್ನರ್‌, ಸೋಲಾರ್‌ ಹೌಸ್‌, ಥರ್ಮಲ್‌ ಪವರ್‌ ಸ್ಟೇಶನ್‌ ಮಾದರಿ, ತಿರುವು ರಸ್ತೆಗಳಲ್ಲಿ ವೇಗ ನಿಯಂತ್ರಣ ಮೂಲಕ ಅಪಘಾತ ನಿಯಂತ್ರಣ, ಹೊಗೆ ಹೀರುವ ಯಂತ್ರ, ತ್ಯಾಜ್ಯ ನೀರಿನಿಂದ ಅನಿಲ ಉತ್ಪಾದನೆ, ಅಪಘಾತ ತಡೆ ಬೆಳಕು, ವಾಶಿಂಗ್‌ ಮೆಶಿನ್‌ ಹೀಗೆ ನಾನಾ ಮಾದರಿಗಳು ಪುಟಾಣಿ ವಿಜ್ಞಾನಿಗಳಿಂದ ಮೂಡಿಬಂದಿವೆ.

ಕಾರ್ಯಕ್ರಮವನ್ನು ತಾ. ಪಂ.  ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಉದ್ಘಾಟಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಸೈಂಟ್‌ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್‌ ಮೇಝಿ, ಮುಖ್ಯ ಶಿಕ್ಷಕಿ ಪ್ರೀತಿ ಕ್ರಾಸ್ತಾ, ಉಡುಪಿ ಬಿಇಓ ಉಮಾ, ಬ್ರಹ್ಮಾವರ ಬಿಇಓ ಆನಂದ್‌, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್‌ ಉಪಸ್ಥಿತರಿದ್ದರು. ಡಯಟ್‌ನ ಉಪ ಪ್ರಾಂಶುಪಾಲ ಚಂದ್ರಶೇಖರ್‌ ವಂದಿಸಿದರು. ಚಂದ್ರ ನಾಯಕ್‌ ನಿರೂಪಿಸಿದರು.

Advertisement

ನ. 21: 10 ಮಾದರಿಗಳ ಆಯ್ಕೆ 
ಇನ್‌ಸ್ಪೈರ್‌ ಅವಾರ್ಡ್‌ ಯೋಜನೆಗಾಗಿ ಮಾದರಿಗಳನ್ನು ಸಿದ್ದಪಡಿಸಲು ಜಿಲ್ಲೆಯ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಯೋಜನೆಯ ವಿವರಗಳನ್ನು ಆನ್‌ಲೈನ್‌ ಮೂಲಕ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಲ್ಲಿಸಿದ್ದು, ಅದರಲ್ಲಿ ಆಯ್ಕೆಯಾದ 225 ವಿದ್ಯಾರ್ಥಿಗಳ ಯೋಜನೆಗೆ ಕೇಂದ್ರ ಸರಕಾರ 10,000 ರೂ.ಗಳನ್ನು ಬಿಡುಗಡೆಗೊಳಿಸಿದೆ. ಈ ಹಣದಿಂದ ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ದಪಡಿಸಿದ್ದು, ಜಿಲ್ಲೆಯ ಶೇ.10 ಮಾದರಿಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಹ ಶೇ.10 ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಭಾಗ್ಯಲಕ್ಷ್ಮೀ ತಿಳಿಸಿದರು. ಜಿಲ್ಲೆಯ ಶೇ. 10 ಮಾದರಿಗಳ ಆಯ್ಕೆ ನ. 21ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next