ಕೂಡ್ಲಿಗಿ: ಪಟ್ಟಣದ ನಂದಿನಿ ಹಾಲು ಶೀತಲೀಕರಣ ಘಟಕದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಹಾಗೂ ರಾಬಕೋ ಹಾಲು ಒಕ್ಕೂಟ ಬಳ್ಳಾರಿ ಸಹಯೋಗದೊಂದಿಗೆ ವೈಜ್ಞಾನಿಕ ಜೇನು ಕೃಷಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಬಸವರಾಜ ಮಾತನಾಡಿ, ಕೂಡ್ಲಿಗಿ ಶೀತಲೀಕರಣ ಕೇಂದ್ರದಲ್ಲಿ ಮೂರು ದಿನದ ಜೇನು ಕೃಷಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ರೈತರಿಗೆ ಆದಾಯ ಕಡಿಮೆಯಾಗುತ್ತಿದ್ದು, ಹೈನುಗಾರಿಕೆ ಜೊತೆಗೆ ಜೇನು ಕೃಷಿಯನ್ನು ಮಾಡಿ ರೈತರು ಹೆಚ್ಚಿನ ಲಾಭಗಳಿಸಲು ಇದು ಉತ್ತಮ ಯೋಜನೆಯಾಗಿದೆ ಎಂದರು.
ಜೇನು ನೊಣಗಳು ಪರೋಕ್ಷವಾಗಿ ಪರಾಗಸ್ಪರ್ಶ ಮಾಡಿ ಮಕರಂದವನ್ನು ತರುವುದರಿಂದ ಶೇ. 30 ಇಳುವರಿ ಹೆಚ್ಚಿಗೆ ಆಗುತ್ತದೆ. ಇದರಿಂದ ರೈತರಿಗೆ ಪರೋಕ್ಷವಾಗಿ ಲಾಭವಾಗುವ ಜೊತೆಗೆ ಜೇನು ಸೇವಿಸುವುದರಿಂದ ಆರೋಗ್ಯಕ್ಕೂ ಕೂಡ ತುಂಬಾ ಪರಿಣಾಮಕಾರಿ. ಅದಕ್ಕಾಗಿ ಕೆಎಂಎಫ್ ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಜೇನು ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
25 ಫಲಾನುಭವಿಗಳಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡಲಾಯಿತು. ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ಎಚ್.ಮರುಳಸಿದ್ದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿರ್ದೇಶಕಿ ನಾಗಮಣಿ ಜಿಂಕಾಲ್, ಕೆಎಂಫ್ ಮಾಜಿ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ವ್ಯವಸ್ಥಾಪಕ ಹಾಗೂ ನಿರ್ದೇಶಕ ತಿರುಕಪ್ಪ, ಡಾ| ಮಹೇಶ್ ಲಕ್ಷ್ಮಣ, ಉಪನ್ಯಾಸಕ ಶಾಂತವೀರಯ್ಯ ಮೆಟಿಕುರ್ಕಿ, ಬಳ್ಳಾರಿಯ ಡಾ| ದಾಸನಗೌಡ, ಜೇನು ಕೃಷಿ ಉಪ ವ್ಯವಸ್ಥಾಪಕ ಡಾ| ಶಂಭುಕುಮಾರ್, ಈ.ಪ್ರಕಾಶ್ ಇನ್ನಿತರರಿದ್ದರು.