Advertisement

ವೈದ್ಯಕೀಯ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ

01:07 AM Jan 09, 2020 | Lakshmi GovindaRaj |

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಕಗ್ಗಂಟಾಗಿರುವ ಹಾಗೂ ಪೌರಕಾರ್ಮಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವ ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ವೈದ್ಯಕೀಯ (ಮರು ಬಳಕೆ ಮಾಡಲು ಸಾಧ್ಯವಿಲ್ಲದ) ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಮುಂದಾಗಿದೆ.

Advertisement

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿ, ಅನುಮತಿ ನೀಡಿರುವ ಸಂಸ್ಥೆಗೆ ತ್ಯಾಜ್ಯ ಸಂಸ್ಕ ರಣೆ ಅನುಮತಿ ನೀಡಲು ಪಾಲಿಕೆ ನಿರ್ಧರಿಸಿದೆ. ನಗರ ದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಈಗಾಗಲೇ ಇರುವ ವಾಹನ ಗಳನ್ನೇ ಇದಕ್ಕೆ ಬಳಸಿಕೊಳ್ಳಲಿದೆ. ತ್ಯಾಜ್ಯ ಸಂಗ್ರಹಿಸಲು ಪೌರಕಾರ್ಮಿಕರಿಗೆ ಹಳದಿ ಬಣ್ಣದ ಬ್ಯಾಗ್‌ ಮತ್ತು ಸಲಕರಣೆ ನೀಡಲಾಗುತ್ತದೆ.

ಸಂಗ್ರಹವಾಗುವ ತ್ಯಾಜ್ಯವನ್ನು ಗುತ್ತಿಗೆದಾರರು ಎರಡನೇ ಹಂತದಲ್ಲಿ ತಮ್ಮ ವಾಹನಗಳ ಮೂಲಕ ವೈಜ್ಞಾನಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಕ್ಕೆ ಸಾಗಿಸಲಿದ್ದಾರೆ. ಸಂಗ್ರಹ, ಸಾಗಣೆ ಹಾಗೂ ವಿಲೇವಾರಿ ಎಲ್ಲವೂ ಸೇರಿ ಪ್ರತಿ ಕೆ.ಜಿಗೆ 60ರಿಂದ 70 ರೂ. ನಿಗದಿಯಾಗುವ ಸಾಧ್ಯತೆ ಇದೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪಾಲಿಕೆ ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ವೈದ್ಯಕೀಯ ತ್ಯಾಜ್ಯ ಸಂಗ್ರಹ ಮಾಡುವುದಕ್ಕೆ ಎಂಟೂ ವಲಯಗಳಲ್ಲಿ ಪ್ರತ್ಯೇಕ ಟೆಂಡರ್‌ ಕರೆಯ ಲಾಗಿದೆ. ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯ ವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು ಎನ್ನುವ ನಿಯ ಮವಿದೆ. ಆದರೆ, ಪಾಲಿಕೆ ಸ್ಯಾನಿಟರಿ ನ್ಯಾಪ್‌ಕಿನ್‌ ಮತ್ತು ಅಪಾಯಕಾರಿ ತ್ಯಾಜ್ಯವನ್ನೂ ಹಸಿ ತ್ಯಾಜ್ಯ ದೊಂದಿಗೆ ಸಂಗ್ರಹಿಸುತ್ತಿತ್ತು. ಪ್ರತ್ಯೇಕವಾಗಿ ನೀಡುವಂತೆ ಜಾಗೃತಿ ಮೂಡಿಸಿದ್ದರೂ ಯಶಸ್ವಿಯಾಗಿರಲಿಲ್ಲ.

ಇದರ ಸಂಸ್ಕರಣೆ ಮಾಡುವುದರಲ್ಲೂ ಲೋಪ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯಲಾಗಿದ್ದು, ತಾಂತ್ರಿಕ ಬಿಡ್‌ ಹಂತದಲ್ಲಿದೆ. ನಗರದ ಮನೆಗಳಲ್ಲಿ ಬಳಕೆಯಾ ಗುವ ಸ್ಯಾನಿಟರಿ ನ್ಯಾಪ್‌ಕಿನ್‌, ಸಿರಿಂಜ್‌, ರಕ್ತದ ಅಂಶವಿರುವ ಹತ್ತಿ ಹಾಗೂ ಬ್ಯಾಂಡೇಜ್‌ ಸೇರಿ ಎಲ್ಲ ರೀತಿಯ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Advertisement

ಪ್ರತ್ಯೇಕ ವಿಲೇವಾರಿ ಅಗತ್ಯ: ಮನೆಗಳಲ್ಲಿ ಸಂಗ್ರಹ ವಾಗುವ ವೈದ್ಯಕೀಯ ತ್ಯಾಜ್ಯವನ್ನು ಜಾಗರೂಕತೆ ಯಿಂದ ವಿಲೇವಾರಿ ಮಾಡಬೇಕು ಎನ್ನುತ್ತಾರೆ ಡಾ. ಪದ್ಮಾವತಿ. ಸಿರಿಂಜ್‌ನ ಸೂಜಿಯನ್ನು ಒಮ್ಮೆ ಬಳಸಿದ ಮೇಲೆ ಅದರ ಕ್ಯಾಪ್‌ ಹಾಕಲು ಪ್ರಯತ್ನಿಸಬಾರದು. ಈಗ ಮಧುಮೇಹಿಗಳಿಗೆ ಚುಚ್ಚು ಮದ್ದನ್ನು ಮನೆಗಳಲ್ಲೇ ನೀಡಲಾಗುತ್ತಿದೆ. ಸಿರಿಂಜ್‌ ಒಮ್ಮೆ ಬಳಸಿದ ಬಳಿಕ ಹಾಗೂ ವಿಲೇವಾರಿ ಮಾಡುವಾಗ ಎಚ್ಚರ ವಹಿಸಬೇಕು. ಇತ್ತೀಚೆಗೆ ಪೌರಕಾರ್ಮಿಕರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಪೌರಕಾರ್ಮಿಕರಿಗೂ ಸೋಂಕು ತಗುಲದ ರೀತಿ ವಿಲೇವಾರಿ ಮಾಡಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಭೂ ಭರ್ತಿ ಮಾಡುವಂತಿಲ್ಲ: ಘನತ್ಯಾಜ್ಯ ನಿರ್ವಹಣೆ -2016ರ ನಿಯಮಾನುಸಾರ ಅಪಾಯಕಾರಿ ತ್ಯಾಜ್ಯ ವನ್ನು ಭೂ ಭರ್ತಿ ರೀತಿ ವಿಲೇವಾರಿ ಮಾಡುವಂತಿಲ್ಲ. ಈ ರೀತಿ ವಿಲೇವಾರಿ ಮಾಡುವುದರಿಂದ ಆ ಪ್ರದೇಶದ ಅಂತರ್ಜಲ ಕಲುಷಿತವಾಗುತ್ತದೆ. ಅಲ್ಲದೆ, ವಾಯು ಮಾಲಿನ್ಯಕ್ಕೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ. ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಮಾರ್ಗ ರೂಪಿಸಿಕೊಳ್ಳದ ಕಾರಣ ಈ ತ್ಯಾಜ್ಯ ಪರೋಕ್ಷವಾಗಿ ಭೂ ಭರ್ತಿಯಾಗುತ್ತಿದೆ. ಪಾಲಿಕೆ ಈಗ ಎಚ್ಚೆತ್ತುಕೊಂಡಿದ್ದು, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮುಂದಾಗಿದೆ.

ಪ್ರತ್ಯೇಕವಾದರೂ ಅಪಾಯವೇ!: ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಅನುಸರಿಸದೆ ಇದ್ದಲ್ಲಿ, ಮತ್ತೂಂದು ಸಮಸ್ಯೆಗೆ ನಾಂದಿಯಾಗಲಿದೆ. ಈಗ ಅಪಾಯಕಾರಿ ತ್ಯಾಜ್ಯ ಸಂಗ್ರಹಕ್ಕೆ ಪಾಲಿಕೆ ನಿರ್ದಿಷ್ಟ ನಿಯಮ ರೂಪಿಸಿಲ್ಲ. ಸಾರ್ವಜನಿಕರೂ ಈ ವಿಷಯದಲ್ಲಿ ಎಚ್ಚೆತ್ತುಕೊಂಡಿಲ್ಲ. ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಪೇಪರ್‌ನಲ್ಲಿ ಸುತ್ತಿ ನೀಡಬೇಕು. ನ್ಯಾಪ್‌ಕಿನ್‌ಗಳನ್ನು ಮರುದಿನವೇ ವಿಲೇವಾರಿ ಮಾಡುವ ಜವಾಬ್ದಾರಿ ಅಳವಡಿಸಿಕೊಂಡಲ್ಲಿ ಪೌರಕಾರ್ಮಿಕರು ಅಲರ್ಜಿ, ಚರ್ಮ ಸಮಸ್ಯೆ ಹಾಗೂ ಮಾನಸಿಕ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲಿದ್ದಾರೆ.

ಅಪಾಯಕಾರಿ ತ್ಯಾಜ್ಯದಿಂದ ಆಗುವ ಸಮಸ್ಯೆ ತಡೆಗಟ್ಟಲು ಪಾಲಿಕೆ ಯೋಜನೆ ರೂಪಿಸಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ಸಿರಿಂಜ್‌, ರಕ್ತದ ಅಂಶವಿರುವ ಹತ್ತಿ ಹಾಗೂ ಬ್ಯಾಂಡೇಜ್‌ಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತದೆ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next