ಸಿಂದಗಿ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿನೂತನ ಪ್ರಯೋಗ ನಡೆಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಸರಸ್ವತಿ ವಿದ್ಯಾನಿಕೇತನ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ವಿಜ್ಞಾನ ವಿಷಯಗಳ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ರಂಗೋಲಿಯಲ್ಲಿ ಬಿಡಿಸಿದ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಶಾಲೆಯಲ್ಲಿ ಹವ್ಯಾಸಗಳನ್ನು ಮೆಟ್ಟಿಲಾಗಿಸಿ, ಪರೀಕ್ಷೆಗೆ ತಯಾರಾಗಿಸಬೇಕು. ಹೊಸ ಕಲಿಕೆಗೆ ಒತ್ತು ನೀಡಿರುವುದರಿಂದ ನಮ್ಮ ಮೇಲಿನ ಮಾನಸಿಕ ಹೊರೆ ಕಡಿಮೆಯಾಗುತ್ತದೆ. ಶಿಕ್ಷಕರು ನಮ್ಮ ಕಲಿಕಾ ಮಟ್ಟಕ್ಕೆ ಇಳಿದು ಕಲಿಸುವುದರಿಂದ, ಅವರು ಹೆಚ್ಚು ಆಪ್ತವಾಗುತ್ತಾರೆ. ಹೀಗಾಗಿಯೇ ರಂಗೋಲಿ ಕಲೆಯನ್ನೇ ಬಳಸಿಕೊಂಡು ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಚಿತ್ರಗಳನ್ನು ಬಿಡಿಸಿದ್ದು ಮಕ್ಕಳಲ್ಲಿ ಕಲಿಕಾ ಸಾಮರ್ಥ ಹೆಚ್ಚಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲಿಕೆ ಪ್ರದರ್ಶನಕ್ಕಾಗಿ ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾನವನ ಹೃದಯ, ಮಾನವನ ಜೀರ್ಣಾಂಗವ್ಯೂಹ, ಮೆದುಳು, ಕ್ರೇಂದ್ರ ನರಕೋಶ ಮುಂತಾದ ಚಿತ್ರಗಳನ್ನು ಬಿಡಿಸಿದರು. ರಂಗೋಲಿ ಬಳಸಿ ಚಿತ್ರ ಬಿಡಿಸಿದ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಪ್ರಥಮ ಬಹುಮಾನ ಸಿದ್ಧಾರ್ಥ ಗಂಗನಳ್ಳಿ, ದ್ವಿತೀಯ ಬಹುಮಾನ ಭಾಗ್ಯಶ್ರೀ ಪಾಟೀಲ, ತೃತೀಯ ಬಹುಮಾನ ಲಕ್ಷ್ಮೀ ಬಿರಾದಾರ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.