Advertisement

Vijayapura; ರಾಹುಲ್ ಗಾಂಧಿ ತೇಜೋವಧೆಗೆ ಮೋದಿ ತಂಡ ಕಟ್ಟಿದ್ದಾರೆ: ಸಂತೋಷ ಲಾಡ್

02:48 PM Apr 21, 2024 | keerthan |

ವಿಜಯಪುರ: ಇವಿಎಂ ಟ್ಯಾಂಪರಿಂಗ್ ಆಗಿರುವುದು ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಪರ ಸುಳ್ಳು ಪ್ರಚಾರಕ್ಕೆ 65 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೇಜೋವಧೆ ಮಾಡುದಕ್ಕಾಗಿಯೇ ತಂಡವನ್ನು ಕಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಗಂಭೀರ ಆರೋಪ ಮಾಡಿದರು.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಮುಸ್ಲಿಂ, ರಾಮ ಮಂದಿರದಂಥ ವಿಷಯಗಳೇ ಇವರ ಪ್ರಚಾರದ ವಿಷಯಗಳಾಗಿವೆ. ವಿವಾದಾತ್ಮಕ ವಿಷಯಗಳ ಹೊರತಾಗಿ ಅಭಿವೃದ್ಧಿ ಹಾಗೂ ರಚನಾತ್ಮಕ ವಿಷಯದ ಚರ್ಚೆಗೆ ಬಿಜೆಪಿ ನಾಯಕರು ಸಿದ್ಧರಿಲ್ಲ ಎಂದು ದೂರಿದರು.

ಬಿಎಸ್‍ಎನ್‍ಎಲ್ ಸೇರಿದಂತೆ ಸರ್ಕಾರಿ ಸಹಭಾಗಿತ್ವದ ಸಂಸ್ಥೆಗಳನ್ನೆಲ್ಲ ಖಾಸಗಿಯರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿದ ಲಾಡ್, ಮೋದಿ ಹೋದಲೆಲ್ಲ ಜೈ ಶ್ರೀರಾಮ ಘೋಷಣೆ ಕೂಗುತ್ತಾರೆ, ಎಲ್ಲಡೆ ಟಾರ್ಚ್ ಹಾಕಿ ಜೈ ಶ್ರೀರಾಮ, ಎನ್ನುವುದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ. ಯಾವುದೇ ಸಾಮಾಜಿಕ ಜಾಲತಾಣಗಳ ಆ್ಯಪ್ ಆನ್ ಮಾಡಿದರೂ ಮೋದಿ ಬರುವಂತೆ ಮಾಡಿದ್ದಾರೆ. ಜಾಹಿರಾತು ನೀಡುತ್ತೇವೆ, ಹಣ ಕೊಡುತ್ತೇವೆ ಎಂದರೂ ಪೇಡ್ ಪ್ರಚಾರಕ್ಕೂ ರಾಹುಲ್ ಗಾಂದಿ ಅವರಿಗೆ ಅವಕಾಶ ಸಿಗದಂತೆ ಮಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಗ್ರಾ.ಪಂ.ನಿಂದ ಲೋಕಸಭೆವರೆಗೆ ಮೋದಿ ಒಬ್ಬರೇ ಸ್ಟಾರ್ ಕ್ಯಾಂಪೇನರ್. ಪ್ರಧಾನಿ ಮೋದಿ ನಿಜಕ್ಕೂ ದೇಶವನ್ನು ಉದ್ಧರಿಸಿದ್ದರೆ ಇಷ್ಟೊಂದು ಓಡಾಟವೇಕೆ ಮಾಡುತ್ತಿದ್ದಾರೆ. ವಿಶ್ವಗುರು ಎನ್ನುವ ಮೋದಿ ನಿಜಕ್ಕೂ ದೇಶದ ಅಭಿವೃದ್ಧಿ ಮಾಡಿದ್ದರೆ ಮನೆಯಲ್ಲಿ ಕುಳಿತುಕೊಳ್ಳಲಿ, ಜನ ವೋಟ್ ಹಾಕುತ್ತಾರ ನೋಡೋಣ ಎಂದರು.

ಸೋಲುವ ಭೀತಿಯಿಂದ ಅಬ್ಬರದಿಂದ ಸುಳ್ಳುಗಳ ಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ಬಿಜೆಪಿ ಪಕ್ಷಕ್ಕೆ ಗೆಲ್ಲುವ ತಾಕತ್ತಿದ್ದರೆ ಜೆಡಿಎಸ್ ಸೇರಿದಂತೆ ಸಣ್ಣ ಪಕ್ಷಗಳೊಂದಿಗೆ ಹೊಂದಾಣಿಕೆ ಬೇಕಿತ್ತೆ. ಜನಾರ್ದನರೆಡ್ಡಿಯನ್ನು ಸೇರಿಸಿಕೊಳ್ಳುವಷ್ಟು ಬಿಜೆಪಿ ದುರ್ಬಲವಾಗಿದೆ ಎಂದು ಟೀಕಿಸಿದರು.

Advertisement

ದೇಶಕ್ಕೆ ಇಂದಿರಾ ಗಾಂಧಿ, ಯುಪಿಎ ಸರ್ಕಾರಗಳು ಅನುಪಮ ಕೊಡುಗೆ ನೀಡಿವೆ. ಆದರೆ ಬಿಜೆಪಿ-ಎನ್‍ಡಿಎ ಸರ್ಕಾರದಲ್ಲಿ ಫಸಲ ಭಿಮಾ ಯೋಜನೆಯಲ್ಲಿ ಕಂಪನಿಗಳು ಉದ್ಧಾರ ಆಗಿವೆ. ಅಂಬಾನಿ, ಅದಾನಿ ಅಭಿವೃದ್ಧಿ ಆಗಿದ್ದಾರೆ. ನಿಜಕ್ಕೂ ದೇಶವನ್ನು ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಅಬ್ಬರದ ಪ್ರಚಾರವೇಕೆ. ಅಭಿವೃದ್ಧಿ ಆಧಾರಿತವಾಗಿ ಮೋದಿ, ಬಿಜೆಪಿ ನಾಯಕರು ಚರ್ಚೆಗೆ ಬರಲು ಸಿದ್ಧರಿಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷದ ಚಂಬು ಪ್ರತಿಭಟನೆಗೆ ದೇವೇಗೌಡರು ಮೋದಿ ಅಕ್ಷಯ ಪಾತ್ರೆ ಎಂದಿರುವ ಬಗ್ಗೆ ಹಿರಿಯರಾದ ಅವರ ಬಗ್ಗೆ ಮಾತನಾಡಲಾರೆ. ಅವರೀಗ ಬಿಜೆಪಿ ಜೊತೆ ಸೇರಿದ್ದು, ಅಂಥ ಹೇಳಿಕೆ ನೀಡುವುದು ಸಹಜ. ಎಂದರು.

ರಾಜ್ಯದ ಜನರು ಕಾಂಗ್ರೆಸ್ ಪರ ನಿಲ್ಲುತ್ತಾರೆ, ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 18-20 ಸ್ಥಾನ ಗೆಲ್ಲುವುದು ಖಚಿತ ಎಂದ ಸಚಿವ ಲಾಡ್, ವಿಜಯಪುರ ಕ್ಷೇತ್ರದ ಹಿರಿಯ ಸಂಸದ ರಮೇಶ ಜಿಗಜಿಣಗಿ ಸತತ ಆರು ಬಾರಿ ಗೆದ್ದಿದ್ದು, ಮಾಡಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.

ವಿಜಯಪುರ ಕ್ಷೇತ್ರದ ಕಾಂಗ್ರೆಸ್ ರಾಜು ಆಲಗೂರ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕ ವಿಠ್ಠಲ ಕಟಕಧೋಂಡ, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next