ಬೆಂಗಳೂರು: ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯವನ್ನು ಒಡೆಯಲು ಮುಂದಾಗಿದ್ದರು. ಆದರೆ ನಮ್ಮ ಸರ್ಕಾರ ಆ ಸಮುದಾಯಕ್ಕೆ ಶೇ.7 ಮೀಸಲು ಸೌಲಭ್ಯ ಕಲ್ಪಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೀಸಲಾತಿಯ ವೈಜ್ಞಾನಿಕ ಹಂಚಿಕೆಗೆ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಲಿಂಗಾಯತರಿಗೆ ಶೇ.7 ಮೀಸಲಾತಿ ಕೊಟ್ಟಿದ್ದು, ಆ ಸಮಾಜ ಖುಷಿಯಿಂದಿದೆ. ಒಕ್ಕಲಿಗರಿಗೆ ಶೇ.6 ಮೀಸಲಾತಿ ನೀಡಿದೆ. ಬಿಜೆಪಿ ಸ್ವಂತ ಬಲದಲ್ಲಿ, ಬಹುಮತ ಪಡೆದು ಸರಕಾರ ರಚಿಸಲಿದೆ. ಲಕ್ಷಾಂತರ ಕಾರ್ಯಕರ್ತರ ಆಸೆ- ಅಭಿಲಾಷೆಯ ಪ್ರಾತಿನಿಧ್ಯದ ರೂಪದಲ್ಲಿ ಬಹುಮತ ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ನೀಡಿದ ಶೇ. 4 ಮೀಸಲಾತಿಯನ್ನು ಶೇ.2 ಲಿಂಗಾಯತರಿಗೆ, ಶೇ. 2 ಒಕ್ಕಲಿಗರಿಗೆ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ಸಂವಿಧಾನದತ್ತವಾಗಿ ಅಲ್ಪಸಂಖ್ಯಾತರಿಗೆ ಕೊಡಬೇಕಾದ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಶೇ.10 ಇಡಬ್ಲ್ಯುಎಸ್ ಅಡಿಯಲ್ಲಿ ಅವರಿಗೂ ಮೀಸಲಾತಿ ಕೊಡುತ್ತಿದ್ದೇವೆ ಎಂದರು.
ಪ್ರತಿ 10 ವರ್ಷಕ್ಕೆ ಒಮ್ಮೆಯಾದರೂ ಮೀಸಲಾತಿ ಪ್ರಗತಿ ಪರಿಶೀಲನೆ ಆಗಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದರು. ಆದರೆ, 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ರಾಜ್ಯ- ಕೇಂದ್ರದಲ್ಲಿ ಈ ಕೆಲಸ ಮಾಡಿರಲಿಲ್ಲ. ಪ್ರಗತಿಯ ದಾರಿ, ವಿಶ್ಲೇಷಣೆ, ಚರ್ಚೆ ಮಾಡಲೇ ಇಲ್ಲ. ಇದು ಈ ದೇಶದ ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯ ಜನರ ದುರಂತ. ಬೊಮ್ಮಾಯಿಯವರು ಅದೆಲ್ಲವನ್ನೂ ವಿಶ್ಲೇಷಣೆ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿಯವರು ಜೇನುಹುಟ್ಟಿಗೂ ಕೈ ಹಾಕಿ ಅದರ ಸಿಹಿಯನ್ನು (ಜೇನು) ಸಮಾಜಕ್ಕೆ ಕೊಟ್ಟಿದ್ದಾರೆ. ಎಸ್ಸಿ, ಎಸ್ಟಿ, ಒಕ್ಕಲಿಗರು, ಒಬಿಸಿಯವರಿಗೆ ಅನುಕೂಲ ಕೊಡುವುದರಲ್ಲಿ ನಾವು ಕಾಂಗ್ರೆಸ್‌ಗಿಂತ ಮುಂದಿದ್ದೇವೆ. ಎಸ್ಸಿ, ಎಸ್ಟಿ, ಒಬಿಸಿಗಳ ಪಾರ್ಟಿ ಎನ್ನುವ ಕಾಂಗ್ರೆಸ್ನವರು ಇದನ್ನು ಯಾಕೆ ಮಾಡಿಲ್ಲ ? ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು ಎನ್ನುತ್ತಿದ್ದ ಸಿದ್ದರಾಮಯ್ಯರವರು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಬಂಜಾರ-ಲಂಬಾಣಿ ಸಮುದಾಯದ ಹೋರಾಟ ನಡೆಯುತ್ತಿಲ್ಲ. ಆ ಸಮುದಾಯದ ಕೆಲವು ಕಾಂಗ್ರೆಸ್ ನಾಯಕರ ಪಿತೂರಿಯಿಂದ ರಾಜ್ಯದ ವಿವಿಧೆಡೆ ಗಲಭೆ ನಡೆದಿದೆ. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತಕ್ಕೆ ಅಲ್ಲಿನ ಕಾಂಗ್ರೆಸ್ಸಿನ ಯುವ ನಾಯಕ ಕಾರಣ. ಅವರು ಏನು ಮೀಟಿಂಗ್ ಮಾಡಿದರು ? ಯೋಜನೆ ಏನಾಗಿತ್ತು ? ಎಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.