Advertisement

ವಿಜ್ಞಾನ ಮೇಳ ಉದ್ಘಾಟನೆ 

12:41 PM Jan 13, 2018 | |

ಪುತ್ತೂರು: ಯುವಶಕ್ತಿ ಸದಾ ಜ್ಞಾನದಾಹ ಹೊಂದಿರಬೇಕು. ದಿನ ನಿತ್ಯದ ಎಲ್ಲ ಚಟುವಟಿಕೆಗಳಲ್ಲಿ ವೈಜ್ಞಾನಿಕ ತತ್ವ ಸಿದ್ಧಾಂತಗಳು ಅಡಗಿವೆ. ತತ್ವಜ್ಞಾನವನ್ನು ಒಳಗೊಂಡ ತಂತ್ರಜ್ಞಾನ ಮತ್ತು ಸುಜ್ಞಾನದೊಂದಿಗೆ ಇರುವ ವಿಜ್ಞಾನವು ದೇಶದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸುತ್ತದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

Advertisement

ದರ್ಬೆ ಸಂತ ಫಿಲೋಮಿನಾ ಕಾಲೇಜಿನ ವಜ್ರಮಹೋತ್ಸವ ಆಚರಣೆ ಅಂಗವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಕಾರದಲ್ಲಿ ಅಭಿವೃದ್ಧಿಗಾಗಿ ವಿಜ್ಞಾನ ಎಂಬ ಧ್ಯೇಯದೊಂದಿಗೆ ಶುಕ್ರವಾರ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೈನಂದಿನ ಜೀವನದಲ್ಲಿ ಬಳಸಲ್ಪಡುವ ನಾನಾ ರೀತಿಯ ವಸ್ತುಗಳಿಗೆ ವೈಜ್ಞಾನಿಕ ಆವಿಷ್ಕಾರಗಳೇ ಕಾರಣ. ಹಿಂದೆ ಹಳ್ಳಿಯ ಮಕ್ಕಳು ತೆಂಗಿನ ಸೋಗೆಯನ್ನು ಬಳಸಿ ಗಿರಿಗಿಟ್‌ ಎನ್ನುವ ವಸ್ತು ತಯಾರಿಸುತ್ತಿದ್ದರು. ಇದೀಗ ವಿದ್ಯುತ್ತಿನ ಅನ್ವೇಷಣೆಯಿಂದಾಗಿ ಅದನ್ನೇ ನಾವು ಇಂದು ಫ್ಯಾನ್‌ ರೂಪದಲ್ಲಿ ಬಳಸುತ್ತಿದ್ದೇವೆ.

ನಮ್ಮ ಆವಿಷ್ಕಾರಗಳಲ್ಲಿ ಕೆಡುಕು ಕಡಿಮೆಯಿದ್ದು, ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ವಿವೇಕಾನಂದರು ದೇಶದ ಒಳಿತಿಗೆ ಯುವಶಕ್ತಿಯು ಅನಿವಾರ್ಯವಾಗಿದೆ ಎಂದಂತೆ, ದೇಶವು ಯುವ ವಿಜ್ಞಾನಿಗಳನ್ನು ಹೊಂದಿದಾಗ ವಿಶ್ವ ಮಟ್ಟದಲ್ಲಿಯೇ ಅಗ್ರಮಾನ್ಯ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಳ್ಳುವುದು ಎಂದರು.

ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಚಟುವಟಿಕೆಗಳೂ ನರಾವರ್ತನೆಗೊಂಡಾಗ ಅನ್ವೇ‚ಷಣೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ಕ್ರಿಯಾಶೀಲತೆ, ಸಂವಹನ ಕಲೆ, ವೈಜ್ಞಾನಿಕ ದೃಷ್ಟಿಕೋನ ಮುಂತಾದವನ್ನು ಅಳವಡಿಸಿಕೊಂಡಾಗ ಅಭಿವೃದ್ಧಿ ಕಡೆ ಸಾಗಬಹುದು ಎಂದರು.

Advertisement

ಬೆಳವಣಿಗೆ ಸಾಧಿಸಬಹುದು
ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೊನ್ಹಾ ಮಾತನಾಡಿ, ಇಂದು ನಮ್ಮ ಎಲ್ಲ ಚಟುವಟಿಕೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿ ನಿಂತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರಚನಾತ್ಮಕ ರೀತಿಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಹುಟ್ಟುತ್ತಾ ಸಾಗಿದಾಗ ದೇಶವು ಸಮಗ್ರ ಬೆಳವಣಿಗೆಯನ್ನು ಸಾಧಿಸಬಹುದು ಎಂದರು.

ಗುಣಶ್ರೀ ಮತ್ತು ತಂಡ ಪ್ರಾರ್ಥಿಸಿದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವಿಜ್ಞಾನ ಮೇಳದ ಸಂಯೋಜಕ ಚಂದ್ರಶೇಖರ್‌ ಕೆ. ಸ್ವಾಗತಿಸಿದರು. ವಿಜ್ಞಾನ ವಿಭಾಗದ ಡೀನ್‌ ಪ್ರೊ| ಉದಯ ಕೆ. ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್‌ ಎಸ್‌. ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳು
ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಕಾಲೇಜಿನ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗಾಗಿ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಪ್ರಬಂಧ ಸ್ಪರ್ಧೆ, ಸಮಾಜದ ಪ್ರಗತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಮಾದರಿಗಳ ಸ್ಪರ್ಧೆ ಹಾಗೂ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. 9 ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾನವನು ಸಮಾಜಜೀವಿ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ವಂ| ಆಲ್ಫ್ರೆಡ್  ಜೆ. ಪಿಂಟೊ ಅವರು ಮಾತನಾಡಿ, ಮಾನವನು ಸಮಾಜಜೀವಿ. ಸಮಾಜದ ಎಲ್ಲ ಆಗುಹೋಗುಗಳಿಗೆ ಮೂಲಕಾರಣ. ಆತನಲ್ಲಿ ಸಾಧಿಸುವ ಛಲ, ಅನ್ವೇಷಣಾಶೀಲತೆ ಮತ್ತು ಪ್ರಶ್ನಿಸುವ ಮನೋಭಾವನೆ ಇರಬೇಕು. ಹಾಗೆಯೇ, ಇತರರೊಂದಿಗೆ ಉತ್ತಮ ಬಾಂಧವ್ಯ, ನೈತಿಕ ಮತ್ತು ಆಧ್ಯಾತ್ಮಿಕ ಗುಣಗಳಿದ್ದಾಗ ಸಮಾಜದಲ್ಲಿ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದರು.

ವಿಶೇಷ ಉಪನ್ಯಾಸ 
ವಿಜ್ಞಾನ ಮೇಳದಲ್ಲಿ ಎರಡು ವಿಶೇಷ ಉಪನ್ಯಾಸಗಳು ನಡೆದವು. ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ| ಗಣೇಶ್‌ ಸಂಜೀವ್‌ ಅವರು ‘ಕೃತಕ ವಿಕಿರಣ ವಸ್ತುಗಳು ಮತ್ತು ಅವುಗಳ ಉಪಯೋಗ’ ಕುರಿತು ಉಪನ್ಯಾಸ ನೀಡಿದರು. ಪುತ್ತೂರಿನ ಐಸಿಎಆರ್‌- ಗೇರು ಸಂಶೋಧನ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ| ಜೆ. ದಿನಕರ ಅಡಿಗ ಅವರು ‘ತೋಟಗಾರಿಕಾ ಅಧ್ಯಯನದಲ್ಲಿ ಸಂಶೋಧನೆಗಳಿಗೆ ಅವಕಾಶಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next