Advertisement

ವಿಜ್ಞಾನ ವಿದ್ಯಾರ್ಥಿಯ ಚಿತ್ರಕಲಾಕರ್ಷಣೆ

02:40 PM Feb 15, 2022 | Team Udayavani |

ಉಡುಪಿ: ವಿಜ್ಞಾನಕ್ಕೂ ಚಿತ್ರಕಲೆಗೂ ಎತ್ತಣಿಂದೆತ್ತ ಸಂಬಂಧ? ಕಲಿಕೆಯಲ್ಲಿ ಇವೆರಡಕ್ಕೂ ಪ್ರತ್ಯೇಕ ವಿಭಾಗವೇ ಇವೆ. ಈತನಾದರೋ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಜ್ಞಾನ ಪದವಿಯ (ಬಿಎಸ್ಸಿ) ಅಂತಿಮ ವರ್ಷದ ವಿದ್ಯಾರ್ಥಿ. ಆದರೆ ಚಿತ್ರಕಲೆಯಲ್ಲಿ ಅಸಾಧಾರಣ ಕಲಾವಿದ ಈ ಅನಿರುದ್ಧ ಎಂ. ಕಾಮತ್‌.

Advertisement

ಕೊಕ್ಕರ್ಣೆಯ ಮಂಜುನಾಥ ಕಾಮತ್‌ ಮತ್ತು ವಿನೋದಾ ಎಂ. ಕಾಮತ್‌ ದಂಪತಿಯ ಪುತ್ರರಾದ ಅವರು ಎರಡನೇ ತರಗತಿಯಲ್ಲಿ ಓದುತ್ತಿರುವಾಗಲೇ ಪಠ್ಯ ಪುಸ್ತಕದಲ್ಲಿರುವ ಚಿತ್ರಗಳನ್ನು ತಮ್ಮಷ್ಟಕ್ಕೆ ಚಿತ್ರಿಸಲಾರಂಭಿಸಿದರು. ಅವರ ಚಿತ್ರ ರಚಿಸುವ ಕಲಾಭಿರುಚಿಯನ್ನು ಗಮನಿಸಿದ ತಂದೆ-ತಾಯಿ, ಅಧ್ಯಾಪಕರು ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಅವರ ಪ್ರತಿಭೆಗೆ ಗೊಬ್ಬರ ಹಾಕಿ ಪೋಷಿಸಿದಂತಾಗಿದೆ. ಚಿತ್ರಕಲೆಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಅನಿರುದ್ಧ್ ಎಲ್ಲ ಬಗೆಯ ಚಿತ್ರಕಲೆಯನ್ನು ಸುಲಲಿತವಾಗಿ ಬಿಡಿಸುವಲ್ಲಿ ನಿಸ್ಸೀಮರು. ಪೇಂಟಿಂಗ್‌, ಸ್ಕೆಚ್ಚಿಂಗ್‌, ಭಾವಚಿತ್ರ ಬಿಡಿಸುವುದು ಸೇರಿದಂತೆ ಎಲ್ಲ ಬಗೆಯ ಚಿತ್ರಕಲೆಯನ್ನು ಲೀಲಾಜಾಲವಾಗಿ ತನ್ನ ಕುಂಚದಲ್ಲಿ ಪಡಿಯಚ್ಚು ಮೂಡಿಸುವ ಜಾಣ್ಮೆ ಅವರಲ್ಲಿದೆ.

ಚಿತ್ರಕಲೆಯ ಹೈಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ್ದ ಅನಿರುದ್ಧ್ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಮುಖವರ್ಣ ಕಲೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಜರಗಿದ ಅಂತಾರ್ಕಾಲೇಜು ರಸಾಯನಶಾಸ್ತ್ರ ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಎರಡು ಬಾರಿ ವೇದಿಕೆಯಲ್ಲಿ ವೇಗದ ಚಿತ್ರಕಲೆಯನ್ನು ಸಾವಿರಾರು ಜನರ ಸಮ್ಮುಖದಲ್ಲಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಪ್ರೌಢಶಾಲೆಗಳು ನಿರಾತಂಕವಾಗಿ ಆರಂಭ : ಪೊಲೀಸರ ಬಿಗಿ ಭದ್ರತೆ

ಅನೇಕ ಶಾಲಾ-ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗುರುವಿಲ್ಲದೆ ಸ್ವಯಂ ಏಕಲವ್ಯನಂತೆ ಚಿತ್ರಕಲೆಯನ್ನು ಅಭ್ಯಸಿಸಿದ ಅನಿರುದ್ಧ್ ಚಿತ್ರಕಲೆಯಲ್ಲಿ ಮಹತ್ಸಾಧನೆ ಮಾಡುವ ಮಹದಾಸೆ ಹೊತ್ತಿದ್ದಾರೆ. ಡ್ರಾಯಿಂಗ್‌ಗೆ ಸಂಬಂಧ ಪಟ್ಟಂತೆ ಎನಿಮೇಶನ್‌ ಕೋರ್ಸ್‌ ಮಾಡುವ ಹೆಬ್ಬಯಕೆ ಹೊತ್ತಿರುವ ಅವರು ಇನ್ಫೋಸಿಸ್‌ ಅಥವಾ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಗುರಿ ಹೊಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next